ಶಿಡ್ಲಘಟ್ಟ: ತಾಲ್ಲೂಕಿನ ತಾತಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗುವ ಸುದ್ದಿಗಳಿಗೆ ಸಂಬಂಧಿಸಿದಂತೆ ಮುಖ್ಯಾಂಶಗಳನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ವಿವರಿಸಲಾಗುತ್ತದೆ. ಪತ್ರಿಕೆಯಲ್ಲಿ ಪ್ರಕಟವಾಗುವ ಸುದ್ದಿಗಳಿಗೆ ಸಂಬಂಧಿಸಿದಂತೆ ಪ್ರಶ್ನೆ ಕೇಳಲಾಗುತ್ತದೆ. ಆ ಪ್ರಶ್ನೆಗೆ ಮರುದಿನ ವಿದ್ಯಾರ್ಥಿಗಳು ಉತ್ತರ ಹೇಳಬೇಕು.
ಸಾಮಾನ್ಯವಾಗಿ ಶಾಲೆಗಳಲ್ಲಿ ದಿನಪತ್ರಿಕೆಗಳ ಶೀರ್ಷಿಕೆಗಳನ್ನು ಮಾತ್ರ ಓದಿಸಲಾಗುತ್ತದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದೆನಿಸಿ ಶಿಕ್ಷಕರೇ ದಿನಪತ್ರಿಕೆಯನ್ನು ಓದಿ ಮಕ್ಕಳಿಗೆ ಮುಖ್ಯವೆನಿಸುವ ಐದು ವಿಷಯಗಳನ್ನು ಅರ್ಥವಾಗುವಂತೆ ಸರಳ ವಾಕ್ಯಗಳಲ್ಲಿ ಬರೆದು ಅದನ್ನು ಅವರಿಂದ ಓದಿಸುತ್ತಿದ್ದಾರೆ.
ಶಿಕ್ಷಕರು ಪತ್ರಿಕೆ ಓದಿ ಮುಖ್ಯವಾದ ಅಂಶಗಳನ್ನು ಗುರುತು ಹಾಕಿಕೊಂಡು, ಆ ದಿನದ ಸುದ್ದಿ ಆಧರಿಸಿ ಮುಂದಿನ ಕಲಿಕೆಗೆ ಆಸಕ್ತಿಕರವಾದ ಪ್ರಶ್ನೆಯೊಂದನ್ನು ರಚಿಸುವರು. ಮಧ್ಯಾಹ್ನದ ಅವಧಿಯಲ್ಲಿ ಆ ಸುದ್ದಿ ಮುಖ್ಯಾಂಶಗಳನ್ನು ಕಪ್ಪು ಹಲಗೆ ಮೇಲೆ ಬರೆಸುತ್ತಾರೆ. ಊಟದ ನಂತರ ಮಕ್ಕಳು ಅವುಗಳನ್ನು ಬರೆದುಕೊಳ್ಳುತ್ತಾರೆ. ಸಂಜೆಯ ಅಸೆಂಬ್ಲಿ ವೇಳೆ ದಿನಕ್ಕೊಬ್ಬ ವಿದ್ಯಾರ್ಥಿ ಓದುತ್ತಾರೆ. ಶಿಕ್ಷಕ ಎಸ್.ಕಲಾಧರ್, ಕೆ.ಎ.ನಾಗರಾಜ, ಶಾಂತಮ್ಮ ಮತ್ತು ಬಾಲರಾಜ್, ದಿನಕ್ಕೊಬ್ಬರಂತೆ ಆ ಮುಖ್ಯಾಂಶಗಳನ್ನು ವಿವರಿಸುತ್ತಾರೆ. ಇದು ಸಂವಾದದ ಮಾದರಿಯಲ್ಲಿರುತ್ತದೆ. ಸಂವಾದದ ನಂತರ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಆ ವಾರದ ಮುಖ್ಯಾಂಶಗಳಲ್ಲಿ ಬರುವ ವಿವಿಧ ಆಸಕ್ತಿಕರ ಸುದ್ದಿಗಳ ಬಗ್ಗೆ, ವ್ಯಕ್ತಿಗಳ ಬಗ್ಗೆ ಚಿತ್ರ, ವಿಡಿಯೋಗಳನ್ನು ಸಂಗ್ರಹಿಸಿ ‘ವಾರದ ವೀಡಿಯೋ’ ಎಂಬ ಬುಧವಾರದ ಕಾರ್ಯಕ್ರಮದಲ್ಲಿ ಶಾಲೆಯ ಟಿ.ವಿಯಲ್ಲಿ ಪ್ರದರ್ಶಿಸಲಾಗುತ್ತದೆ.
ಸುದ್ದಿ ಮುಖ್ಯಾಂಶಗಳ ಚಿತ್ರ– ವಿಡಿಯೋಗಳನ್ನು ಆಧರಿಸಿ ಶುಕ್ರವಾರದ ಸಾಪ್ತಾಹಿಕ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರಶ್ನೆ ಕೇಳಲಾಗುತ್ತದೆ. ಶಾಲಾ ಪರೀಕ್ಷೆಗಳ ಸಮಯದಲ್ಲಿ ಪ್ರಚಲಿತ ವಿದ್ಯಮಾನಗಳ ಕುರಿತು ಒಂದು ಪ್ರಶ್ನೆಪತ್ರಿಕೆ ರಚಿಸಿ ಪರೀಕ್ಷೆ ನಡೆಸಲಾಗುತ್ತದೆ.
‘ಮಕ್ಕಳಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಆಸಕ್ತಿ ಮೂಡಿಸುವುದು, ಸಾಮಾನ್ಯ ಜ್ಞಾನ ಹೆಚ್ಚಿಸುವುದು. ಮಕ್ಕಳು ಶಾಲೆಯಲ್ಲಿ ಎಲ್ಲರ ಮುಂದೆ ನಿಂತು ಓದುವ ಮೂಲಕ ಅವರಲ್ಲಿ ಓದುವ ಸಾಮರ್ಥ್ಯ ಬೆಳೆಸುವುದು. ರಾಜಕೀಯ ಜ್ಞಾನ, ಪರಿಸರ ಕಾಳಜಿ, ಸೌಹಾರ್ದ ಮನೋಭಾವ, ಭೌಗೋಳಿಕ ಜ್ಞಾನ, ನೈತಿಕ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತುವುದು. ಪ್ರಚಲಿತ ವಿದ್ಯಮಾನಗಳ ವಿಷಯಗಳು ಪ್ರಸ್ತುತ ಪಠ್ಯದ ವಿಷಯದಲ್ಲಿ ಇಲ್ಲದಿರುವುದರಿಂದ ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಕ್ಕಳಿಗೆ ಆಗುವ ತೊಂದರೆ ತಪ್ಪಿಸುವುದು ನಮ್ಮ ಉದ್ದೇಶ’ ಎಂದು ಮುಖ್ಯಶಿಕ್ಷಕ ಸುದರ್ಶನ್ ತಿಳಿಸಿದರು.
ಸುದ್ದಿ ಮುಖ್ಯಾಂಶಗಳನ್ನು ಓದಿಸಲು ಪ್ರಾರಂಭಿಸಿದಾಗಿನಿಂದ ಮಕ್ಕಳಲ್ಲಿ ಹೊಸ ಉತ್ಸಾಹ ಉಂಟಾಗಿದೆ. ಓದಲು ಮಕ್ಕಳಲ್ಲಿ ಸ್ಪರ್ಧೆ ಹೆಚ್ಚಿದೆಸುದರ್ಶನ್ ಮುಖ್ಯಶಿಕ್ಷಕ
ಶಾಲೆಯಲ್ಲಿ ಸುದ್ದಿ ಮುಖ್ಯಾಂಶ ಓದಿಸುತ್ತಿರುವುದರಿಂದ ಬಹಳ ಪ್ರಯೋಜನವಾಗಿದೆ. ಶಿಕ್ಷಕರು ಕಥೆಯಂತೆ ವಿವರಿಸುವುದರಿಂದ ಆಸಕ್ತಿಕರವಾಗಿ ಇರುತ್ತದೆ. ವಿವಿಧ ವ್ಯಕ್ತಿಗಳ ಬಗ್ಗೆ ಕೇಳುವಾಗ ನನಗೂ ಹಾಗೆ ಆಗಬೇಕು ಎಂಬ ಸ್ಫೂರ್ತಿ ಬರುತ್ತದೆಮೇಘನಾ 8ನೇ ತರಗತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.