ಶಿಡ್ಲಘಟ್ಟ: ಔಷಧಿ ವಿಜ್ಞಾನದಲ್ಲಿ ತರಬೇತಿ ಪಡೆದಿರುವ ಔಷಧಿ ವ್ಯಾಪಾರಿಗಳು ಕೇವಲ ಔಷಧಿ ಮಾರುವುದಲ್ಲದೆ, ಜನಸಾಮಾನ್ಯರಿಗೆ ಆರೋಗ್ಯ ಸೇವೆಗಳನ್ನು ನೀಡುವ ವೃತ್ತಿಪರರು. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಇವರ ಕೊಡುಗೆ ಗಣನೀಯವಾಗಿದೆ.
ಶಿಡ್ಲಘಟ್ಟ ತಾಲ್ಲೂಕಿನ ಮೊಟ್ಟ ಮೊದಲು ಔಷಧಿ ಅಂಗಡಿ ಪ್ರಾರಂಭವಾದದ್ದು 83 ವರ್ಷಗಳ ಹಿಂದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕೆ.ನಾರಾಯಣಶೆಟ್ಟಿ ಅವರಿಂದ ಪ್ರಾರಂಭವಾದ ‘ದೇಶನಾರಾಯಣ ಸ್ಟೋರ್ಸ್’ ಈಗ ನಾಲ್ಕನೇ ತಲೆಮಾರನ್ನು ಕಂಡಿದೆ.
ಚಿಕ್ಕ ಕಿರಾಣಿ ಅಂಗಡಿಯನ್ನಿಟ್ಟುಕೊಂಡಿದ್ದ ಕೆ.ನಾರಾಯಣಶೆಟ್ಟಿ ಅವರು ತಾಲ್ಲೂಕಿನಲ್ಲಿ ಕಾಲರಾ ಬಂದಾಗ ಮದ್ರಾಸಿನಿಂದ ಕ್ಲೋರೋಕ್ವಿನ್ ಗುಳಿಗೆಗಳನ್ನು ತರಿಸಿ ಮಾರುತ್ತಿದ್ದರಂತೆ. ಇವರಿಂದ ಗುಳಿಗೆಗಳನ್ನು ಪಡೆದು ಗುಣಮುಖರಾದ ಜನರು, ಇವರ ಕೈಗುಣ ಚೆನ್ನಾಗಿದೆ ಎಂದು ಬೇರೆ ಕಾಯಿಲೆಗಳಿಗೂ ಇವರನ್ನರಸಿ ಬರುತ್ತಿದ್ದರಂತೆ. ಆಗ ನಾರಾಯಣಶೆಟ್ಟರು ಮದ್ರಾಸಿಗೆ ಹೋಗಿ, ಎಂಟು ದಿನ ಸಂಸ್ಥೆಯೊಂದರಲ್ಲಿ ತರಬೇತಿ ಪಡೆದು, ಪರೀಕ್ಷೆ ಪಾಸು ಮಾಡಿ ಔಷಧಿ ಮಾರಾಟ ಮಾಡುವ ಪ್ರಮಾಣಪತ್ರ ಪಡೆದರು.
‘1942ರ ಅಕ್ಟೋಬರ್ 19ರಂದು ವಿಜಯದಶಮಿಯ ದಿನ ತಾತ ‘ದೇಶನಾರಾಯಣ ಸ್ಟೋರ್ಸ್’ ಪ್ರಾರಂಭಿಸಿದರು. ಮೊದಲ ದಿನದ ವ್ಯಾಪಾರ ₹10. ಈ ಹಣ ಆ ಕಾಲಕ್ಕೆ ಬಹು ದೊಡ್ಡದು. ಆ ಕಾಲದಲ್ಲಿ ತಾತ ಶಿಡ್ಲಘಟ್ಟದಿಂದ ಹೊಸಕೋಟೆ ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿದ್ದ ಶಣ್ಮುಗಾನಂದ ಬಸ್‌ನಲ್ಲಿ ಬೆಳಗ್ಗೆ ಹೋಗುತ್ತಿದ್ದರು. ಬೆಂಗಳೂರಿನಲ್ಲಿ ಸೈಕಲ್ ಬಾಡಿಗೆಗೆ ಪಡೆದು, ದೊಡ್ಡ ಗಾತ್ರದ ಬ್ಯಾಗ್ ನೇತು ಹಾಕಿಕೊಂಡು ಜೆ.ಸಿ ರಸ್ತೆ ಆಸುಪಾಸಿನಲ್ಲಿದ್ದ ಸಗಟು ಮಳಿಗೆಗಳಲ್ಲಿ ಒಂದು ತಿಂಗಳಿಗಾಗುವಷ್ಟು ಔಷಧಿ ಖರೀದಿಸಿ, ಸಂಜೆ ಅದೇ ಬಸ್‌ನಲ್ಲಿ ವಾಪಸ್ ಮನೆಗೆ ಬರುತ್ತಿದ್ದರು’ ಎಂದು ರಮೇಶ್ ಬಾಬು ಹಿಂದಿನ ದಿನಗಳನ್ನು ಮೆಲುಕು ಹಾಕಿದರು.
ಕೆಮ್ಮು ನೆಗಡಿಗೆ– ಕೊಸಾವೆಲ್ ಮತ್ತು ಒರಿಸಾಲ್ ಮಾತ್ರೆಗಳು, ಜ್ವರಕ್ಕೆ ಎಲ್ಕೊಸಿನ್, ತಲೆನೋವಿಗೆ ಸಿಬಾಲ್ ಜಿನ್ ಮಾತ್ರೆಗಳನ್ನು ತಾತ ಮಾರುತ್ತಿದ್ದರು. ಒಂದು ಸಾವಿರ ಮಾತ್ರೆಗಳಿರುವ ಬಾಕ್ಸ್ ಬೆಂಗಳೂರಿನಿಂದ ತರುತ್ತಿದ್ದರು. ಊರಿನಲ್ಲಿದ್ದ ಡಾ.ನಾರಾಯಣರಾವ್, ಬಶೆಟ್ಟಹಳ್ಳಿಯಿಂದ ಹಾಗೂ ತಾಲ್ಲೂಕಿನ ಕೆಲವೆಡೆ ಇದ್ದ ವೈದ್ಯರು ರೋಗಿಗಳನ್ನು ಕಳಿಸುತ್ತಿದ್ದರು.
ಸಣ್ಣ ಅಪಘಾತದಿಂದ ಒಂದು ಕಣ್ಣನ್ನು ಕಳೆದುಕೊಂಡಿದ್ದ ತಾತನನ್ನು ಎಲ್ಲರೂ ಗುಡ್ ನಾರಾಯಣಪ್ಪ (ತೆಲುಗಿನಲ್ಲಿ ಗುಡ್ಡಿ ಅಂದರೆ ಕಣ್ಣು ಕಾಣಿಸದಿರುವುದು ಎಂಬ ಅರ್ಥವಿದೆ) ಎನ್ನುತ್ತಿದ್ದರು. ಹಾಗಾಗಿ ನಮ್ಮ ಅಂಗಡಿಯನ್ನು ಗುಡ್ ನಾರಾಯಣಪ್ಪ ಅಂಗಡಿ ಎನ್ನುತ್ತಿದ್ದರು.
‘ತಾತನ ನಂತರ ನನ್ನ ತಂದೆ ಕೆ.ನಾಗರಾಜ್ ಔಷಧಿ ಅಂಗಡಿ ಮುಂದುವರೆಸಿದರು. 1983ರಲ್ಲಿ ನಾನು ಫಾರ್ಮಸಿ ಪ್ರಮಾಣಪತ್ರ ಪಡೆದೆ. ನಂತರ 1994ರಲ್ಲಿ ನನ್ನ ಹೆಸರಿಗೆ ಔಷಧಿ ಅಂಗಡಿ ಪ್ರಮಾಣಪತ್ರ ಮತ್ತು ಮಾಲೀಕತ್ವ ವರ್ಗಾವಣೆಯಾಯಿತು. ಈಗ ನನ್ನ ಮಗ ರೋಹನ್ ಗಂಧರ್ವ ಕೂಡ ಫಾರ್ಮಸಿ ಮಾಡಿರುವುದರಿಂದ ಔಷಧಿ ಅಂಗಡಿ ನಾಲ್ಕನೇ ತಲೆಮಾರನ್ನು ಕಂಡಿದೆ. ಪ್ರಾಮಾಣಿಕತೆ ದೀರ್ಘಾವಧಿಯಲ್ಲಿ ಪ್ರತಿಫಲ ನೀಡುತ್ತದೆ. ನಂಬಿಕೆ, ಒಳ್ಳೆಯ ಹೆಸರು, ಮಾನವೀಯ ಸಂಬಂಧಗಳು ಯಶಸ್ಸನ್ನು ತಂದುಕೊಡುತ್ತದೆ ಎಂಬುದು ನಮ್ಮ ಅನುಭವಕ್ಕೆ ಬಂದಿದೆ’ ಎನ್ನುತ್ತಾರೆ ರಮೇಶ್ ಬಾಬು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.