ಗೌರಿಬಿದನೂರು: ‘ಕೇಂದ್ರದಲ್ಲಿ ಬಿಜೆಪಿಯನ್ನು ತಿರಸ್ಕಾರ ಮಾಡಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು’ ಎಂದು ಮಾಜಿ ಸಚಿವ ಹಾಗೂ ಎಚ್.ಎನ್.ಪ್ರಾಧಿಕಾರದ ಅಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಹೇಳಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಕಾಂಗ್ರೆಸ್ ವತಿಯಿಂದ ಬಿಜೆಪಿಯ ಮತಗಳ್ಳತನದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
‘ಬಿಜೆಪಿ ಶ್ರೀಮಂತರ ಪರವಾದದ್ದು, ಈಗಾಗಲೇ ದೇಶಲ್ಲಿ ಶೇ 75ರಷ್ಟು ಸ್ವತ್ತು ಶ್ರೀಮಂತರ ಪಾಲಾಗಿದೆ. ಬಿಜೆಪಿ ಆಡಳಿತದಲ್ಲಿ ಬಡವರಿಗೆ ಬದುಕಲು ಅವಕಾಶವಿಲ್ಲ. ಆದ್ದರಿಂದ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಬಲ ತುಂಬಬೇಕಾಗಿದೆ. ಬಡವರ ಮತಗಳ್ಳತನ ಮಾಡುವ ಪಿತೂರಿ ಬಿಜೆಪಿಯಿಂದ ನಡೆಯುತ್ತಿದೆ. ಮತ ಹೆಚ್ಚು ಮಾಡುವುದು ಹಾಗೂ ತೆಗೆದು ಹಾಕುವುದು ದೇಶದ್ರೋಹದ ಕೆಲಸ, ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದರು.
‘ಬಿಜೆಪಿ ಸರ್ಕಾರದಲ್ಲಿ ಬಡವರಿಗೆ, ಮಧ್ಯಮ ವರ್ಗದವರಿಗೆ, ಅಲ್ಪಸಂಖ್ಯಾತರಿಗೆ ಯಾವುದೇ ಕಾರ್ಯಕ್ರಮಗಳಿಲ್ಲ. ಕಾಂಗ್ರೆಸ್ ಸರ್ಕಾರ ಪ್ರತಿ ಬಡ ಕುಟುಂಬಕ್ಕೂ ವರಮಾನ ಬರುವ ರೀತಿಯಲ್ಲಿ ಗ್ಯಾರಂಟಿ ಅನುಷ್ಠಾನ ಮಾಡಿದೆ. ಇದರ ಫಲಾನುಭವಿಗಳು ಒಟ್ಟು ನಾಲ್ಕುವರೆ ಕೋಟಿ ಇದ್ದಾರೆ’ ಎಂದರು.
‘ಎಲ್ಲ ಜಾತಿಗಳಿರುವ ದೇಶದಲ್ಲಿ ಆರ್‌ಎಸ್‌ಎಸ್ ನವರು ದ್ವೇಷ ಮತ್ತು ಅಸೂಯೆ ಬಿತ್ತುತ್ತಿದ್ದಾರೆ. ಸುಪ್ರಿಂಕೋರ್ಟ್ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆತ ಕಾನೂನು ವ್ಯವಸ್ಥೆಗೆ ಅವಮಾನವಾಗಿದೆ. ಇಲ್ಲಿ ದ್ವೇಷ, ಅಸೂಯೆ ಎದ್ದು ಕಾಣಿಸುತ್ತಿದೆ. ದೇಶದಲ್ಲಿ ಏನಾದರು ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಪಕ್ಷ ಇದ್ದರೆ ಅದು ಕಾಂಗ್ರೆಸ್ ಮಾತ್ರ’ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೇಶವ ರೆಡ್ಡಿ ಮಾತನಾಡಿ, ‘ಅಕ್ರಮ ಮಾರ್ಗದ ಮೂಲಕ ಮತಗಳ್ಳತನ ಮಾಡುವ ಮೂಲಕ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ, ಮತದಾರರ ಪಟ್ಟಿಯಿಂದ ಮತದಾರರನ್ನು ತೆಗೆದು ಇಂದು ಕೇಂದ್ರದಲ್ಲಿ ಅಧಿಕಾರ ಅನುಭವಿಸುತ್ತಿದೆ. ಪ್ರಜಾಪ್ರಭುತ್ವವನ್ನು ಉಳಿಸುವ ಸಲುವಾಗಿ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮತಗಳ್ಳತನದ ವಿರುದ್ಧ ಸಹಿ ಸಮರ ಹಮ್ಮಿಕೊಳ್ಳಲಾಗಿದೆ’ ಎಂದರು.
ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಮುದ್ದುಗಂಗಾಧರ್, ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೇಣು, ಮುಖಂಡ ಪ್ರಕಾಶ್ ರೆಡ್ಡಿ, ಗಿರೀಶ್ ರೆಡ್ಡಿ, ಆರ್.ಪಿ.ಗೋಪಿನಾಥ್, ಗಂಗಾಧರಪ್ಪ, ವಿ.ರಮೇಶ್, ರಮೇಶ್ ನಾಯಕ, ನಾರಾಯಣಸ್ವಾಮಿ, ವಿಶ್ವನಾಥ್, ಯುವ ಕಾಂಗ್ರೆಸ್ ಸಮಿತಿ ಹಾಗೂ ಮಹಿಳಾ ಕಾಂಗ್ರೆಸ್ ಸಮಿತಿ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.