
ಶಿಡ್ಲಘಟ್ಟ: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿ ಇರುವ ಹೊಸ ಐಡಿಎಸ್ಎಂಟಿಯ 27 ಅಂಗಡಿ ಮಳಿಗೆ ಹಾಗೂ ಸಂತೆ ಬೀದಿ ರಸ್ತೆಯಲ್ಲಿರುವ ಎರಡು ಕಡೆಯ ಅಂಗಡಿಗಳಿಗೆ ಭೇಟಿ ನೀಡಿದ ನಗರಸಭೆ ಅಧಿಕಾರಿಗಳು ಬಾಡಿಗೆ ಬಾಕಿಯನ್ನು ಕೂಡಲೇ ಪಾವತಿಸಬೇಕು ಎಂದು ಅಂಗಡಿ ಮಾಲೀಕರಿಗೆ ಸೂಚಿಸಿದರು.
ಕೆಲವು ಅಂಗಡಿ ಮಾಲೀಕರು ಕೆಲವು ವರ್ಷಗಳಿಂದ ಬಾಡಿಗೆ ಬಾಕಿ ಉಳಿಸಿಕೊಂಡಿರುವುದನ್ನು ತಿಳಿದ ಪೌರಾಯುಕ್ತೆ ಜಿ. ಅಮೃತಾ ಅವರು, ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜೊತೆಗೆ ನಾಲ್ಕೈದು ಅಂಗಡಿಗಳಿಗೆ ಬೀಗ ಹಾಕಿಸಿದರು. ಜೊತೆಗೆ ಕಡಿಮೆ ಬಾಕಿ ಉಳಿಸಿಕೊಂಡ ಅಂಗಡಿಗಳ ಗೋಡೆಗೆ ನೋಟಿಸ್ ಅಂಟಿಸಲಾಯಿತು.
ಪೌರಾಯುಕ್ತೆ ಜಿ. ಅಮೃತ ಮಾತನಾಡಿ, ‘ನಗರಸಭೆಯು ಎಲ್ಲ ಸವಲತ್ತುಗಳನ್ನು ನೀಡುತ್ತದೆ. ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ಬಾಡಿಗೆ ಪಾವತಿಸುವುದು ಅಂಗಡಿ ಮಾಲೀಕರ ಕರ್ತವ್ಯ. ಕೆಲವರು ತಿಂಗಳುಗಟ್ಟಲೇ ಬಾಕಿ ಉಳಿಸಿಕೊಂಡಿದ್ದಾರೆ, ಇದು ಸರಿಯಲ್ಲ. ಇನ್ನು ಮುಂದೆ ಬಾಡಿಗೆ ಬಾಕಿ ಉಳಿಸಿಕೊಂಡರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ನಗರಸಭೆ ಕಂದಾಯ ಅಧಿಕಾರಿ ನಾಗರಾಜ, ಕಂದಾಯ ನಿರೀಕ್ಷಕ ಸಂಜೀವ್ ಕುಮಾರ್, ಕಂದಾಯ ನಿರೀಕ್ಷಕ ಮೊಹಮದ್ ಅತೀಕ್ ಉಲ್ಲಾ, ಅಮರ ನಾರಾಯಣಸ್ವಾಮಿ, ಶ್ರೀನಿವಾಸ್.ಜಿ, ನಾರಾಯಣಸ್ವಾಮಿ, ಕೃಷ್ಣಮೂರ್ತಿ ಶೇಖ್ ಆರಿಫ್ ಹಾಗೂ ನಗರಸಭೆ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.