ಚಿಕ್ಕಬಳ್ಳಾಪುರ: ‘ಐದು ವರ್ಷ ನಾನೇ ಮುಖ್ಯಮಂತ್ರಿ. ಆ ಬಗ್ಗೆ ಯಾವುದೇ ಅನುಮಾನ ಬೇಡ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಸ್ಪಷ್ಟವಾಗಿ ಹೇಳಿದರು. ಆ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಕೆಲವು ದಿನಗಳಿಂದ ಭುಗಿಲೆದ್ದಿದ್ದ ನಾಯಕತ್ವ ಬದಲಾವಣೆ ಕೂಗಿಗೆ ತೆರೆ ಎಳೆದರು.
ನಂದಿಗಿರಿಧಾಮದಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಹೊರಡುವ ಮೊದಲು ಭೋಗ ನಂದೀಶ್ವರ ದೇವಾಲಯದಲ್ಲಿ ದರ್ಶನ ಪಡೆದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ನಾಯಕತ್ವ ಬದಲಾವಣೆ ಬಗ್ಗೆ ಬಿಜೆಪಿ ನಾಯಕರು ಹಗಲುಗನಸು ಕಾಣುತ್ತಿದ್ದಾರೆ. ಬಿಜೆಪಿಯವರ ಕನಸು ಎಂದಿಗೂ ನನಸಾಗದು. ನಾವೆಲ್ಲಾ ಒಟ್ಟಾಗಿದ್ದೇವೆ. ನಮ್ಮ ಸರ್ಕಾರ ಬಂಡೆಯಂತೆ ಐದು ವರ್ಷ ಆಡಳಿತ ನಡೆಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿಮಗೆ ಯಾರು ಹೇಳಿದರು?
‘ನಾಯಕತ್ವ ಬದಲಾವಣೆಯಾಗುತ್ತದೆ ಎಂಬ ಸುದ್ದಿ ಇದೆಯಲ್ಲ’ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಸಿದ್ದರಾಮಯ್ಯ ಪಕ್ಕದಲ್ಲಿದ್ದ ಗೃಹ ಸಚಿವ ಜಿ.ಪರಮೇಶ್ವರ, ‘ನಿಮಗೇಕೆ ಆ ಅನುಮಾನ. ನಿಮಗೆ ಯಾರು ಹೇಳಿದರು ಹಾಗಂತ’ ಎಂದು ಪ್ರಶ್ನಿಸಿದರು. ಆಗ ಮಾಧ್ಯಮ ಪ್ರತಿನಿಧಿಗಳು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾಗುತ್ತಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ’ ಎಂದರು.
‘ಬಿಜೆಪಿಯ ಆರ್.ಅಶೋಕ, ಬಿ.ವೈ.ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ ನಮ್ಮ ಹೈಕಮಾಂಡ್ ಅಲ್ಲ. ನಾನೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದೇನೆ’ ಎಂದು ಸಿದ್ದರಾಮಯ್ಯ ಕುಟುಕಿದರು. ‘ಬಿಜೆಪಿಯವರು ಸುಳ್ಳನ್ನು ಮಾತ್ರ ನಂಬುತ್ತಾರೆ. ಸತ್ಯವನ್ನಲ್ಲ. ಸತ್ಯ ಹೇಳಿ ಅವರಿಗೆ ಗೊತ್ತೇ ಇಲ್ಲ’ ಎಂದರು.
ಪ್ರಜಾಪ್ರಭುತ್ವದಲಿ ಎಲ್ಲರಿಗೂ ಸಚಿವರಾಗುವ ಅಧಿಕಾರವಿದೆ. ಸಚಿವ ಸ್ಥಾನದ ಬಗ್ಗೆ ಪಕ್ಷದ ವರಿಷ್ಠರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಪಕ್ಷೇತರರೂ ಸೇರಿ 142 ಶಾಸಕರು ನಮ್ಮಲ್ಲಿ ಇದ್ದಾರೆ. 34 ಜನರನ್ನು ಮಾತ್ರ ಸಚಿವರನ್ನಾಗಿಸಬಹುದು. ಎಲ್ಲರನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದರು.
ನನ್ನ ಬಳಿ ಆಯ್ಕೆಗಳಿಲ್ಲ: ಡಿಕೆಶಿ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ‘ನನ್ನ ಬಳಿ ಬೇರೆ ಆಯ್ಕೆಗಳಿಲ್ಲ. ಪಕ್ಷ ಮತ್ತು ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿರುವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಬೆಂಬಲವಾಗಿ ನಿಲ್ಲುವೆ’ ಎಂದರು. ‘2028ರ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಪಕ್ಷ ಡಿ.ಕೆ.ಶಿವಕುಮಾರ್ ಒಬ್ಬನದ್ದಲ್ಲ. ಲಕ್ಷಾಂತರ ಕಾರ್ಯಕರ್ತರು ನಮಗಾಗಿ ಕೆಲಸ ಮಾಡಿದ್ದಾರೆ’ ಎಂದು ಅವರು ಉತ್ತರಿಸಿದರು. ಸುದ್ದಿಗಾರರ ಉಳಿದ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ ಅವರು ‘ಈ ಬಗ್ಗೆ ಸದ್ಯ ನಾನು ಏನನ್ನೂ ಚರ್ಚಿಸುವುದಿಲ್ಲ’ ಎಂದರು.
‘ಯಾರು ಹೇಳಿದ್ದು ಬದಲಾವಣೆ ಎಂದು?’
ಎಲ್ಲಿದೆ ಬದಲಾವಣೆ ಯಾರು ಹೇಳಿದರು? ನಮ್ಮ ಪಕ್ಷದಲ್ಲಿಯ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಲು ಬಿಜೆಪಿಯವರು ಯಾರು? ಈ ಬಗ್ಗೆ ಮಾರ್ಗದರ್ಶನ ಮಾತನಾಡಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇದ್ದಾರೆ. ಬಿಜೆಪಿಯವರು ಅವರ ಉಸಾಬರಿ ನೋಡಿಕೊಳ್ಳಲಿ. ನಮ್ಮ ಉಸಾಬರಿಗೆ ಬರುವುದು ಬೇಡ – ಕೆ.ಎನ್.ರಾಜಣ್ಣ ಸಚಿವ
‘ಯಾವ ಗೊಂದಲವೂ ಇಲ್ಲ’
ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಒಗ್ಗಟ್ಟಾಗಿದ್ದಾರೆ. ನಾವು ಇಬ್ಬರೂ ಒಂದೇ ಎಂದು ಪದೇ ಪದೇ ಅವರೇ ಹೇಳುತ್ತಿದ್ದಾರೆ. ಯಾವ ಗೊಂದಲವೂ ಇಲ್ಲ. ಶಾಸಕರ ಅಭಿಪ್ರಾಯಗಳ ಬಗ್ಗೆ ನಮಗೆ ಗೊತ್ತಿಲ್ಲ. 2028ರವರೆಗೆ ಕಾಂಗ್ರೆಸ್ ಸರ್ಕಾರ ಇರುತ್ತದೆ – ಬೈರತಿ ಸುರೇಶ್ ಸಚಿವ
ಸಿ.ಎಂ ಬದಲಾವಣೆ ವಿಚಾರದ ಬಗ್ಗೆ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಮತ್ತು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ, ನಾವಲ್ಲ.ಚೆಲುವರಾಯಸ್ವಾಮಿ, ಸಚಿವ
ಯಾರೇ ಮುಖ್ಯಮಂತ್ರಿ ಆಗಬೇಕು ಎಂದರೂ ಅದೃಷ್ಟಬೇಕು. ಬಿ.ಆರ್.ಪಾಟೀಲ ಅವರು ಯಾವ ದೃಷ್ಟಿಯಲ್ಲಿ ಸಿದ್ದರಾಮಯ್ಯ ಅವರನ್ನು ಲಾಟರಿ ಸಿ.ಎಂ ಎಂದು ಹೇಳಿದ್ದಾರೊ ಗೊತ್ತಿಲ್ಲ. 140 ಶಾಸಕರು ಇದ್ದಾಗ ಒಬ್ಬರು ಅಥವಾ ಇಬ್ಬರು ಬಹಿರಂಗವಾಗಿ ಮಾತನಾಡಬಹುದು. ಆದರೆ ಆ ರೀತಿ ಮಾತನಾಡಬಾರದು ಎಂದು ಶಾಸಕರಿಗೆ ಮನವಿ ಮಾಡುತ್ತೇನೆ.ಸಂತೋಷ್ ಲಾಡ್, ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.