ADVERTISEMENT

‘ಬಿಜೆಪಿಯ ಬಣ್ಣದ ಮಾತಿಗೆ ಮರುಳಾಗದಿರಿ’

₹2 ಸಾವಿರ ಕೋಟಿ ಮೊತ್ತ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 5:02 IST
Last Updated 25 ನವೆಂಬರ್ 2025, 5:02 IST
ಶಿಡ್ಲಘಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರು
ಶಿಡ್ಲಘಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರು   

ಶಿಡ್ಲಘಟ್ಟ: ‘ಬಿಜೆಪಿಯವರ ಬಣ್ಣದ ಮಾತಿಗೆ ಮರುಳಾಗಬೇಡಿ. 2028ಕ್ಕೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಮುಂದಿನ ಎರಡೂವರೆ ವರ್ಷದಲ್ಲಿ ಸರ್ಕಾರವು ನೀಡಿರುವ ಉಳಿದ ಭರವಸೆಗಳನ್ನು ಈಡೇರುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದ ಹೊರವಲಯದ ಹನುಮಂತಪುರದ ಬಳಿ ಸೋಮವಾರ ನಡೆದ ₹1,328.67 ಕೋಟಿ ಮೊತ್ತ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ₹672.07 ಕೋಟಿ ಮೊತ್ತ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಶಿಡ್ಲಘಟ್ಟಕ್ಕೆ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆಯನ್ನು ಘೋಷಿಸಿದ್ದು ನಾನು. ಈ ಮಾರುಕಟ್ಟೆ ಚಿಕ್ಕಬಳ್ಳಾಪುರ, ಶಿಡ್ಲಘಟ್ಟಕ್ಕೆ ಸೀಮಿತವಲ್ಲ. ರಾಜ್ಯದಲ್ಲಿಯೇ ಅತ್ಯುತ್ತಮ ಹೈಟೆಕ್ ಮಾರುಕಟ್ಟೆ ಆಗುತ್ತದೆ’ ಎಂದರು.

ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 21 ಸಾವಿರ ಹೆಕ್ಟೇರ್‌ನಲ್ಲಿ ರೈತರು ರೇಷ್ಮೆ ಬೆಳೆಯುತ್ತಿದ್ದಾರೆ. ಆದ ಕಾರಣ ಹೈಟೆಕ್ ಮಾರುಕಟ್ಟೆ ನೀಡಲಾಗಿದೆ. ರೈತರಿಗೆ ಅನುಕೂಲವಾಗುತ್ತದೆ. ಡಿಜಿಟಲ್ ವ್ಯವಸ್ಥೆಯೂ ಇದ್ದು, ತೂಕ ಮತ್ತು ಬೆಲೆಯಲ್ಲಿ ರೈತರಿಗೆ ಮೋಸ ಆಗುವುದಿಲ್ಲ. ಈ ಹಿಂದೆ ರೇಷ್ಮೆ ಸಚಿವನಾಗಿ‌ದ್ದಾಗ ಶಿಡ್ಲಘಟ್ಟ ರೇಷ್ಮೆ ಮಾರುಕಟ್ಟೆಗೆ ಬಂದಿದ್ದೆ ಎಂದು ಮುಖ್ಯಮಂತ್ರಿ ಸ್ಮರಿಸಿದರು. 

ರೀಲರ್ಸ್‌ಗಳಿಗೂ ನೆರವು ನೀಡಲು ಸರ್ಕಾರ ಬದ್ಧವಾಗಿದೆ. ರೀಲರ್ಸ್‌ಗಳಿಂದಲೇ ಮಾರುಕಟ್ಟೆ ನಡೆಯುತ್ತದೆ ಎಂದು ಹೇಳಿದರು.

ಚಿಕ್ಕಬಳ್ಳಾಪುರ ವ್ಯವಸಾಯ ಪ್ರಧಾನ ಜಿಲ್ಲೆ. ಕೃಷಿ, ತೋಟಗಾರಿಕೆ ಬೆಳೆಗಳು ಹೆಚ್ಚು. ಈ ಕಾರ್ಯಕ್ರಮದಲ್ಲಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣ, ಎಚ್‌.ಎನ್.ವ್ಯಾಲಿ, ಕೆ.ಸಿ ವ್ಯಾಲಿ ಯೋಜನೆಯ ಮೂರನೇ ಹಂತದ ಕಾಮಗಾರಿ ಸೇರಿದಂತೆ ವಿವಿಧ ಇಲಾಖೆಗಳ ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ  ನೀಡಲಾಗಿದೆ. ಕೊಟ್ಟ ಮಾತಿನಂತೆ ನಡೆದು ಎತ್ತಿನಹೊಳೆ ಯೋಜನೆಯಡಿ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುತ್ತೇವೆ ಎಂದು ಹೇಳಿದರು.

‘ಐದು ಗ್ಯಾರಂಟಿ ಯೋಜನೆಗಳಿಗೆ ₹1 ಲಕ್ಷ ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದೇವೆ. ರಾಜ್ಯ ಸರ್ಕಾರದ ದಿವಾಳಿ ಆಗಿದೆ. ಅಭಿವೃದ್ಧಿ ಇಲ್ಲ ಎಂಬುದಾಗಿ ಬಿಜೆಪಿಯವರು ಆರೋಪಿಸುತ್ತಿದ್ದಾರೆ. ನಮ್ಮ ಬಳಿ ಹಣ ಇಲ್ಲದಿದ್ದರೆ ₹1 ಲಕ್ಷ ಕೋಟಿ ನೀಡಲು ಸಾಧ್ಯವಾಗುತ್ತಿತ್ತೇ’ ಎಂದು ಪ್ರಶ್ನಿಸಿದರು.

‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಯಾವ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವಿದೆ? ಗೃಹಲಕ್ಷ್ಮಿ ಸೇರಿದಂತೆ ಐದು ಗ್ಯಾರಂಟಿ ಯೋಜನೆಗಳಿಂದ ಬಡವರು ಬದುಕು ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು.

‘ಲೋಕಸಭೆ ಚುನಾವಣೆ ನಂತರ ಗ್ಯಾರಂಟಿ ಯೋಜನೆ ನಿಲ್ಲಿಸುವರು ಎಂದು ಬಿಜೆಪಿಯವರು ಅಪಪ್ರಚಾರ ಮಾಡಿದರು. ಆದರೆ ಯಾವುದೇ ಕಾರಣಕ್ಕೂ ಈ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ನಾವು ಜನರಿಗೆ 500 ಭರವಸೆಗಳನ್ನು ನೀಡಿದ್ದೇವೆ. ಆ ಪೈಕಿ 242 ಭರವಸೆಗಳನ್ನು ಈಡೇರಿಸಿದ್ದೇವೆ. ಮುಂದಿನ ಎರಡೂವರೆ ವರ್ಷದಲ್ಲಿ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ’ ಎಂದು ಹೇಳಿದರು.

‘ನಮ್ಮ ಸರ್ಕಾರ ಬಡವರು, ದೀನ ದಲಿತರ ಪರವಾಗಿದೆ. ಎಲ್ಲ ಜಾತಿಯ ಬಡವರಿಗೆ ಆರ್ಥಿಕ ಮತ್ತು ಸಾಮಾಜಿಕವಾಗಿ ಶಕ್ತಿ ತುಂಬಬೇಕು. ಯಾವ ಧರ್ಮವೂ ದ್ವೇಷವನ್ನು ಪ್ರತಿಪಾದಿಸುವುದಿಲ್ಲ. ‍ಪ್ರೀತಿ ಮತ್ತು ಪರಸ್ಪರ ವಿಶ್ವಾಸವನ್ನು ಹೇಳುತ್ತವೆ’ ಎಂದರು.

‘ಅಧಿಕಾರದಲ್ಲಿದ್ದಾಗ ಬಿಜೆಪಿಯವರು ಅಭಿವೃದ್ಧಿ ಕೆಲಸಗಳನ್ನು ಮಾಡಲಿಲ್ಲ. ನಾವು ಧರ್ಮ ಮತ್ತು ಜಾತಿ ಆಧಾರದಲ್ಲಿ ಸಮಾಜ ವಿಭಜಿಸುವುದಿಲ್ಲ. ರಾಹುಲ್ ಗಾಂಧಿ ಅವರು ಭಾರತ್ ಜೋಡೊ ಯಾತ್ರೆ ಮೂಲಕ ಸಮಾಜ ಬೆಸೆಯುವ ಕೆಲಸ ಮಾಡಿದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಚಿವರಾದ ಕೆ.ಎಚ್.ಮುನಿಯಪ್ಪ, ಬೈರತಿ ಸುರೇಶ್, ಲಕ್ಷ್ಮಿ ಹೆಬ್ಬಾಳಕರ, ಕೃಷ್ಣಬೈರೇಗೌಡ, ಬೋಸರಾಜು, ದಿನೇಶ್ ಗುಂಡೂರಾವ್, ಎಚ್.ಸಿ.ಮಹದೇವಪ್ಪ, ಜಮೀರ್ ಅಹಮದ್, ವೆಂಕಟೇಶ್, ರಹೀಂ ಖಾನ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸಂಸದ ಎಂ. ಮಲ್ಲೇಶ್ ಬಾಬು, ಶಾಸಕರಾದ ಎಸ್.ಎನ್. ಸುಬ್ಬಾರೆಡ್ಡಿ, ಪ್ರದೀಪ್ ಈಶ್ವರ್ , ಕೆ.ಎಚ್. ಪುಟ್ಟಸ್ವಾಮಿಗೌಡ, ವಿಧಾನ ಪರಿಷತ್ ಸದಸ್ಯರಾದ ಚಿದಾನಂದ ಎಂ. ಗೌಡ, ಎಂ.ಎಲ್.ಅನಿಲ್ ಕುಮಾರ್, ಡಿ.ಟಿ. ಶ್ರೀನಿವಾಸ,  ಎಚ್.ಎನ್. ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಎಚ್ ಶಿವಶಂಕರರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತದ ಅಧ್ಯಕ್ಷ ಬಿ.ಸಿ. ಮುದ್ದುಗಂಗಾಧರ್ ಹಾಗೂ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿದ ಸಿ.ಎಂ ಮತ್ತು ಡಿಸಿಎಂ
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಕ್ಷಣ

ಶಿಡ್ಲಘಟ್ಟಕ್ಕೆ ಮಿನಿ ವಿಧಾನಸೌಧ

ಮುಖ್ಯಮಂತ್ರಿ ಅವರ ಭಾಷಣದ ವೇಳೆಯೇ ಶಿಡ್ಲಘಟ್ಟದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ರಸ್ತೆಗಳ ಅಭಿವೃದ್ಧಿಗೆ ಹಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವಿಶೇಷ ಅನುದಾನ ನೀಡುವಂತೆ ಶಾಸಕ ಬಿ.ಎನ್.ರವಿಕುಮಾರ್ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು ಶಿಡ್ಲಘಟ್ಟದಲ್ಲಿ ಮಿನಿ ವಿಧಾನಸೌಧ ನಿರ್ಮಿಸಲಾಗುವುದು ಎಂದು ಪ್ರಕಟಿಸಿದರು. ಉಳಿದ ಯೋಜನೆಗಳಿಗೆ ಹಂತ ಹಂತವಾಗಿ ಹಣ ನೀಡುತ್ತೇವೆ ಎಂದು ಭರವಸೆ ನೀಡಿದರು.

‘ಜೆಡಿಎಸ್ ಶಾಸಕರಿಂದ ಸಹಕಾರ’

‘ಶಿಡ್ಲಘಟ್ಟದಲ್ಲಿ ಜೆಡಿಎಸ್ ಶಾಸಕರಿದ್ದರೂ ಅವರು ನಮಗೆ ಪೂರ್ಣ ಸಹಕಾರ ನೀಡುತ್ತಿದ್ದಾರೆ. ಜೆಡಿಎಸ್ ಶಾಸಕರ ಕ್ಷೇತ್ರದಲ್ಲಿ ಇಷ್ಟು ದೊಡ್ಡ ಮಟ್ಟದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದೇವೆ’ ಎಂದು ಮುಖ್ಯಮಂತ್ರಿ ತಿಳಿಸಿದರು.