ಶಿಡ್ಲಘಟ್ಟ: ತೊಗರಿ ಸೇರಿದಂತೆ ಕೆಲವು ಬೆಳೆಗಳನ್ನು ಈಗಾಗಲೆ ಬಿತ್ತನೆ ಮಾಡಲಾಗಿದೆ. ಬಿತ್ತನೆ ಅವಧಿ ಮುಗಿದ ಬಳಿಕ ಇಲಾಖೆಯಿಂದ ಬಿತ್ತನೆಯ ತೊಗರಿ ಸೇರಿ ಇನ್ನಿತರೆ ಬೀಜ ವಿತರಿಸಲಾಗುತ್ತಿದೆ. ಇದರಿಂದ ಏನು ಉಪಯೋಗ? ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು.
ತಾಲ್ಲೂಕಿನ ಹನುಮಂತಪುರ ಬಳಿಯ ಕೃಷಿ ಇಲಾಖೆಯ ನೂತನ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ಬಿತ್ತನೆ ಬೀಜ, ಕೃಷಿ ಪರಿಕರಗಳ ವಿತರಣೆ ಹಾಗೂ ತಜ್ಞರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃಷಿ ಇಲಾಖೆಯಿಂದ ಕಾಲಕಾಲಕ್ಕೆ ರೈತರಿಗೆ ಬಿತ್ತನೆ ಬೀಜ ಮತ್ತು ಪರಿಕರವನ್ನು ವಿತರಿಸಬೇಕು. ಸಕಾಲಕ್ಕೆ ಅರ್ಹರನ್ನು ಗುರುತಿಸಿ ಸೌಲಭ್ಯ ಒದಗಿಸಬೇಕು. ಇಲಾಖೆಯಲ್ಲಿರುವ ಸಾಕಷ್ಟು ಯೋಜನೆಗಳ ಬಗ್ಗೆ ಅರಿವು ಮೂಡಿಸಬೇಕೆಂದು ಹೇಳಿದರು.
ಅತಿವೃಷ್ಟಿ, ಅನಾವೃಷ್ಟಿಯಂತ ಪ್ರಕೃತಿ ವಿಕೋಪ, ಹವಾಮಾನ ಏರುಪೇರಿನಂತ ಪರಿಸ್ಥಿತಿಯಲ್ಲಿ ಬೆಳೆ ಹಾಳಾಗುವುದರಿಂದ ಆಗುವ ನಷ್ಟದಿಂದ ಪಾರಾಗಲು ರೈತರು ಮುಖ್ಯವಾಗಿ ಬೆಳೆ ವಿಮೆ ಮಾಡಿಸಬೇಕು. ಈ ಬಗ್ಗೆ ರೈತರಲ್ಲಿ ಇಲಾಖೆ ಅಧಿಕಾರಿಗಳು ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ಮಳೆ ಆಶ್ರಯದಲ್ಲಿ ರಾಗಿ, ನೆಲಗಡಲೆಮ ಜೋಳವನ್ನು ಪ್ರಧಾನವಾಗಿ ಬೆಳೆಯುವ ಈ ಭಾಗದಲ್ಲಿ ಆಗಸ್ಟ್ ಮೊದಲ ವಾರದಿಂದ ಕಡೆಯ ವಾರದವರೆಗೂ ಹೆಚ್ಚು ಪ್ರಮಾಣದಲ್ಲಿ ಬಿತ್ತನೆ ಕಾರ್ಯ ನಡೆಯಲಿದೆ. ಜತೆಗೆ ಈಗಾಗಲೆ ಬಿತ್ತನೆ ಮಾಡಿದ ಬೆಳೆಗಳು ಕೂಡ ನವೆಂಬರ್‌ನಲ್ಲಿ ಜಡಿ ಮಳೆಗೆ ಸಿಲುಕಿ ಹಾಳಾಗುವುದೆ ಹೆಚ್ಚು. ಜತೆಗೆ ಅನೇಕ ಕಾರಣಗಳಿಂದಲೂ ಬೆಳೆಗಳು ಹಾಳಾಗುವ ಕಾರಣ ರೈತರು ನಷ್ಟಕ್ಕೆ ತುತ್ತಾಗುವುದನ್ನು ತಪ್ಪಿಸಲು ಎಲ್ಲರು ಕೂಡ ಬೆಳೆ ವಿಮೆ ಮಾಡಿಸಬೇಕು ಎಂದರು.
ಆದರೆ ಬಹಳಷ್ಟು ರೈತರು ಬೆಳೆ ವಿಮೆಯ ಮಹತ್ವ ತಿಳಿಯದೆ ಬೆಳೆ ವಿಮೆ ಮಾಡಿಸುತ್ತಿಲ್ಲ. ಅಂತಹ ಎಲ್ಲರಿಗೂ ಅರಿವು ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆ ಮಾಡಿಸುವಂತಾಗಬೇಕು ಎಂದು ಹೇಳಿದರು.
ರಿಯಾಯಿತಿ ದರದಲ್ಲಿ ಬಿತ್ತನೆ ಬೀಜದ ಕಿಟ್, ಟಾರ್ಪಲ್, ಮೇವು ಕತ್ತರಿಸುವ ಯಂತ್ರ, ಮಿನಿ ಟಿಲ್ಲರ್ ಇನ್ನಿತರೆ ಪರಿಕರಗಳನ್ನು ರೈಗತರಿಗೆ ವಿತರಿಸಲಾಯಿತು.
ಕೃಷಿ ಉಪ ನಿರ್ದೇಶಕಿ ಭವ್ಯಾರಾಣಿ, ಕೃಷಿ ಸಹಾಯಕ ನಿರ್ದೇಶಕ ರವಿ, ಕೃಷಿಕ ಸಮಾಜದ ಉಪಾಧ್ಯಕ್ಷ ಪಾಪಣ್ಣ, ಕೆಂಪೇಗೌಡ, ನಾಗಮಂಗಲ ಶ್ರೀನಿವಾಸಗೌಡ, ಡಿಎಸ್‌ಎನ್ ರಾಜು, ಭಕ್ತರಹಳ್ಳಿ ವೆಂಕಟೇಶ್, ಮಂಜುನಾಥ್, ಇಲಾಖೆಯ ತಜ್ಞ ತನ್ವೀರ್, ಸುದರ್ಶನ್, ಸುನಿಲ್, ಮುಖಂಡ ತಾದೂರು ರಘು, ರೈತ ಸಂಘಟನೆಗಳ ಮುಖಂಡರು, ರೈತರು ಹಾಜರಿದ್ದರು.
ಸಭಾಂಗಣದ ಹೊರಗೆ ನಿಂತ ಅನ್ನದಾತ
ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಟಾರ್ಪಲಿನ್ ಇನ್ನಿತರೆ ಪರಿಕರಗಳ ವಿತರಣೆ ಕಾರ್ಯಕ್ರಮಕ್ಕೆ ತಾಲ್ಲೂಕಿನ ನಾನಾ ಕಡೆಯಿಂದ ನೂರಾರು ರೈತರು ಆಗಮಿಸಿದ್ದು ಕೃಷಿ ಇಲಾಖೆ ಸಭಾಂಗಣದಲ್ಲಿ ಜಾಗದ ಕೊರತೆಯಿಂದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅನೇಕ ರೈತರು ಸಭಾಂಗಣದ ಹೊರಗಡೆ ನಿಂತಿದ್ದರು. ಒಳಗೆ ಇದ್ದ ಅನೇಕ ರೈತರಿಗೂ ಕೂರಲು ಖುರ್ಚಿ ಇರಲಿಲ್ಲ. ಅಧಿಕಾರಿಗಳಿಗೆ ಶಾಸಕ ತರಾಟೆ: ಜತೆಗೆ ಕಾರ್ಯಕ್ರಮ ಮುಗಿಯುವಷ್ಟರಲ್ಲಿ ಮಧ್ಯಾಹ್ನವಾಗಿತ್ತು. ಊಟದ ವ್ಯವಸ್ಥೆ ಮಾಡದಿದ್ದಕ್ಕೆ ಶಾಸಕ ಬಿ.ಎನ್.ರವಿಕುಮಾರ್ ಅವರು ಕಾರ್ಯಕ್ರಮ ಆಯೋಜಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ‘ವಯಸ್ಸಾದ ಬಿ.ಪಿ ಶುಗರ್ ಇರುವ ಅನೇಕ ರೈತರಿದ್ದು ಅವರಿಗೆ ಸೂಕ್ತ ವ್ಯವಸ್ಥೆ ಮಾಡಬೇಕಿತ್ತು. ಮುಂದಿನ ಸಲ ಪೆಂಡಾಲ್ ಹಾಕಿ ಖುರ್ಚಿ ವ್ಯವಸ್ಥೆ ಮಾಡಿ ಊಟದ ವ್ಯವಸ್ಥೆ ಮಾಡಿ ನಿಮ್ಮಿಂದ ಆಗದಿದ್ದಲ್ಲಿ ನನಗೆ ಹೇಳಿ ನಾನು ಮಾಡುತ್ತೇನೆ. ವಯಸ್ಸಾದ ರೈತರು ನಿಲ್ಲುವುದು ಹಸಿದ ಹೊಟ್ಟೆಯಲ್ಲಿ ಹೋಗುವುದು ಬೇಡ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.