
ಶಿಡ್ಲಘಟ್ಟ: ಶಿಡ್ಲಘಟ್ಟ ಪಟ್ಟಣವು ಮಂಗಳವಾರ ಮುಂಜಾನೆ ಸದ್ದಿಲ್ಲದೆ ಮಂಜಿನಲ್ಲಿ ಮೀಯುತ್ತಿತ್ತು. ಪಟ್ಟಣದಲ್ಲಿ ದಟ್ಟ ಮಂಜು ಆವರಿಸಿಕೊಂಡಿದ್ದರಿಂದಾಗಿ, ಪಕ್ಕದಲ್ಲೇ ಇರುವ ವಾಹನಗಳು ಕಾಣಿಸುತ್ತಿರಲಿಲ್ಲ. ಹೀಗಾಗಿ, ಅನಿವಾರ್ಯವಾಗಿ ವಾಹನಗಳು ದೀಪ ಉರಿಸಿಕೊಂಡೇ ಸಂಚರಿಸಿದವು.
ಮಂಜಾನೆಯ ಮಂಜಿನ ವಾತಾವರಣವು ಹಲವರಿಗೆ ಕಣ್ಣು ಮತ್ತು ಮನಸ್ಸಿಗೆ ಮುದ ಕೊಟ್ಟಿರುವುದು ಹೌದು. ಆದರೆ, ಬೆಳಗ್ಗಿನ ಕೆಲಸ–ಕಾರ್ಯಗಳಿಗೆ ಹೋಗುವವರಿಗೆ ಈ ಚಳಿಯ ವಾತಾವರಣವು ಕಿರಿಕಿರಿಯನ್ನೂ ಮಾಡಿದೆ.
ಬೆಳಗ್ಗೆ ನಿದ್ದೆಯಿಂದ ಎದ್ದು ಹೊರಗೆ ಬಂದವರಿಗೆ ಮತ್ತೊಂದು ಬಿಳಿಯ ಕನಸಿನ ಲೋಕ ಕಣ್ಮುಂದೆ ತೆರೆದುಕೊಂಡಿತ್ತು. ಅದು ಕನಸಲ್ಲ, ಉದ್ದಕ್ಕೂ ಹಬ್ಬಿದ ಇಬ್ಬನಿಯ ಇಹಲೋಕದ ಸ್ವರ್ಗದಂತೆ ಭಾಸವಾಯಿತು.
ಕಳೆದ ಎರಡು ದಿನಗಳಿಂದ ಸೂರ್ಯೋದಯ ತಡವಾಗುತ್ತಿದ್ದು, ಮಂಜು ಆವರಿಸತೊಡಗಿದೆ. ವಾಹನಗಳು ದೀಪ ಹಾಕಿಕೊಂಡು ಹೋಗುವ ಸ್ಥಿತಿಯಿದೆ. ವಾಕಿಂಗ್ ಹೋಗುವವರು ಸ್ವೆಟರ್, ಶಾಲೆಗೆ ಹೋಗುವವರು ಟೋಪಿಗಳಲ್ಲಿ ಬಂಧಿಯಾದರೆ, ಎತ್ತರದ ಮರಗಳು ಮಂಜಿನ ಉಡುಗೆ ತೊಟ್ಟುಕೊಂಡಂತಿದೆ. ನಗರದ ಕಟ್ಟಡಗಳೆಲ್ಲ ಮಂಜಿನ ಮುಸುಕುಧಾರಿಯಂತಾಗಿವೆ.
ವಾಹನಗಳಲ್ಲಿ ಸಂಚರಿಸುತ್ತಿದ್ದವರ ತಲೆಕೂದಲು ಹಾಗೂ ಮುಖದ ಮೇಲೆಲ್ಲಾ ಮಂಜಿನ ಹನಿಗಳು ಮೂಡಿದ್ದರೆ, ದಾರಿಯುದ್ದಕ್ಕೂ ಬೆಳೆದ ಹುಲ್ಲು, ಗರಿಕೆ, ವನ ಕುಸುಮಗಳ ಮೇಲೆ ಇಬ್ಬನಿಯು ಮುತ್ತುಗಳಂತೆ ಕಂಗೊಳಿಸುತ್ತಿತ್ತು. ಗಿಡಗಂಟಿಗಳ ಮೇಲೆ ಹಬ್ಬಿದ ಜೇಡರ ಬಲೆಗಳ ಮೇಲೂ ಮಂಜಿನ ಹನಿಗಳು ಮಣಿಗಳಂತೆ ಮೂಡಿ ಕಿರು ಬಿಸಿಲಿಗೆ ಹೊಳೆಯುತ್ತಿದ್ದವು.
ಮುಂಜಾನೆಯ ಪ್ರಕೃತಿ ಆರಾಧಕರು ಹಾಗೂ ವಾಯು ವಿಹಾರಿಗಳಿಗೆ ಮಂಜಿನ ಆಗಮನ ಆಹ್ಲಾದ ತಂದರೆ, ಮುಂಜಾನೆ ಕಾಯಕದಲ್ಲಿ ನಿರತರಾದ ಪೌರ ಕಾರ್ಮಿಕರು, ಹಾಲು, ಪೇಪರ್ ಹಂಚುವವರು ಮತ್ತು ಇತರರಿಗೆ ಬೇಸರ ಮೂಡಿಸಿದೆ.
ಈ ಮಂಜನ್ನು ಭೂಮಟ್ಟದ ಮೋಡವೆನ್ನಬಹುದು. ಈ ಚಳಿಗಾಲದ ರಾತ್ರಿಗಳಲ್ಲಿ ಭೂಮಿಯ ಉಷ್ೞತೆ ರಕ್ಷಿಸುವ ಮೋಡದ ಮುಸುಕು ಇರುವುದಿಲ್ಲ. ಆಗ ಭೂಮಿಯಿಂದ ಹೊರಬಿದ್ದ ಶಾಖ ವಾತಾವರಣದಲ್ಲಿ ಸೇರಿಹೋಗುತ್ತದೆ. ಭೂಮಿ ಬೇಗ ತಂಪುಗೊಂಡು ತನಗೆ ಹತ್ತಿರದ ಗಾಳಿಯನ್ನೂ ತಂಪು ಮಾಡುತ್ತದೆ. ಮಂಜುಂಟಾಗುವುದು ಹೀಗೆ. ಅದನ್ನು ಸವಿಯದಿದ್ದರೆ ಹೇಗೆ ಎನ್ನುತ್ತಾರೆ ಪರಿಸರ ಪ್ರೇಮಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.