
ಶಿಡ್ಲಘಟ್ಟ: ಗೌಡನ ಕೆರೆ ಅಂಗಳದಲ್ಲಿ ಸುರಿಯಲಾಗಿದ್ದ ವೈದ್ಯಕೀಯ ತ್ಯಾಜ್ಯವನ್ನು ತಾಲ್ಲೂಕು ಆರೋಗ್ಯಾಧಿಕಾರಿಗಳು ಬುಧವಾರ ತೆರವುಗೊಳಿಸಿದರು.
ಗೌಡನ ಕೆರೆ ಅಂಗಳದಲ್ಲಿ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಬಗ್ಗೆ ಪ್ರಜಾವಾಣಿಯ ಫೆಬ್ರುವರಿ 25ರ ಸಂಚಿಕೆಯಲ್ಲಿ ವಿಸ್ತೃತವಾಗಿ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶಮೂರ್ತಿ, ಔಷಧೀಯ ಸಹಾಯಕ ನಿಯಂತ್ರಕಿ ಬಿ.ಎನ್. ಸವಿತಾ ಮತ್ತು ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ.ವಿ. ಶ್ರೀನಾಥರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ತಾಲ್ಲೂಕು ವೈದ್ಯಾಧಿಕಾರಿ ಡಾ. ವೆಂಕಟೇಶಮೂರ್ತಿ, ‘ಆಸ್ಪತ್ರೆ ತ್ಯಾಜ್ಯವನ್ನು ಇಲ್ಲಿ ಸುರಿದು ಕೆಲವು ದಿನಗಳಾಗಿದೆ. ಈ ಹಿನ್ನೆಲೆಯಲ್ಲಿ ಈ ಔಷಧಗಳನ್ನು ಯಾರು ಮತ್ತು ಎಲ್ಲಿ ತಯಾರಿಸಲಾಗಿದೆ ಎಂಬುದು ತಿಳಿಯುತ್ತಿಲ್ಲ. ಆದರೆ, ಔಷಧಗಳ ಮೇಲಿನ ಹೆಸರು ನೋಡಿದಾಗ, ಔಷಧಿಗಳ ಅವಧಿ ಮುಗಿದಿದ್ದು ಗೊತ್ತಾಗಿದೆ. ಹೀಗಾಗಿ, ಅನ್ಯ ಜಿಲ್ಲೆಗಳಿಂದ ವೈದ್ಯಕೀಯ ತ್ಯಾಜ್ಯವನ್ನು ಇಲ್ಲಿಗೆ ತಂದು ಸುರಿದಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಕೆರೆಯಲ್ಲಿ ಸುರಿದ ಔಷಧಿಗಳನ್ನು ಸಂಗ್ರಹಿಸಿ ಜೈವಿಕ ತ್ಯಾಜ್ಯ ಸಂಗ್ರಹಕರಿಗೆ ನೀಡಿದ್ದೇವೆ’ ಎಂದರು.
ಎಲ್ಲೆಂದರಲ್ಲಿ ಆಸ್ಪತ್ರೆ ತ್ಯಾಜ್ಯವನ್ನು ವಿಲೇವಾರಿ ಮಾಡಬಾರದು ಎಂಬುದಾಗಿ ಸ್ಥಳೀಯ ಔಷಧ ಮಳಿಗೆಗಳು, ಕ್ಲಿನಿಕ್‌ಗಳು ಮತ್ತು ಆಸ್ಪತ್ರೆಗಳಿಗೆ ಅರಿವು ಮೂಡಿಸಲಾಗುವುದು ಎಂದರು.
‘ಕೆರೆಯ ಶುಚಿತ್ವದ ಬಗ್ಗೆ ನಗರಸಭೆ ಅಧಿಕಾರಿಗಳು ಗಮನ ಕೊಡಬೇಕು. ಗೌಡನ ಕೆರೆಯನ್ನು ಕಸ ಸುರಿಯುವ ತಾಣವಾಗಿಸಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ, ಹೋಟೆಲ್ ತ್ಯಾಜ್ಯ ರಾಶಿಯಾಗಿ ಬಿದ್ದಿದೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.