ಶಿಡ್ಲಘಟ್ಟ: ಕಳೆದ ವಾರದಿಂದ ಬೆಳಗ್ಗೆ ಆಗೊಮ್ಮೆ, ಈಗೊಮ್ಮೆ ಬರುತ್ತಿದ್ದ ಮಳೆಯು ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಕೈಗೆ ಬಂದ ಹೂವಿನ ಫಸಲು ರೈತರ ಕೈಗೆ ಸಿಗದಂತಾಗಿದೆ.
ಮಾರುಕಟ್ಟೆಯಲ್ಲಿ ಹೂವಿಗೆ ಅಷ್ಟೇನೂ ದರವಿರಲಿಲ್ಲ. ಇದರಿಂದಾಗಿ ಗ್ರಾಹಕರು ನಿರಾಳವಾಗಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ತಾಲ್ಲೂಕಿನಾದ್ಯಂತ ಕತ್ತಲಲ್ಲೂ ಬೆಳಕು ಸೂಸುವ ದೀಪ, ಪಟಾಕಿಗಳ ಸದ್ದು, ಕೈಗೆ ನೋಮುದಾರ ಕಟ್ಟಿಕೊಂಡು ರುಚಿಯಾದ ಕಜ್ಜಾಯದ ಸವಿ ಸವಿಯುತ್ತಾ ಹಬ್ಬದಾಚರಣೆ ಮಾಡಲಾಯಿತು.
ಮನೆ ಮುಂದೆ ಸಾರಿಸಿ ರಂಗೋಲೆ ಹಾಕಿ ತಾವೂ ಸ್ನಾನ ಮಾಡಿ ಶುಭ್ರ ಬಟ್ಟೆ ಧರಿಸಿ ಬಿಸಿ ಕಜ್ಜಾಯ ಸೇರಿದಂತೆ ನಾನಾ ಅಡುಗೆಗಳನ್ನು ಮಾಡಲಾಗಿತ್ತು. ದೇವಾಲಯಕ್ಕೆ ತೆರಳಿ ದೇವರಿಗೆ ಕಜ್ಜಾಯದ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಲಾಯಿತು. ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು.
ಹೆಂಗೆಳೆಯರು, ಮುತ್ತೈದೆಯರು ಕಳಶ ಹೊತ್ತು ಶುಭದ ಸಂಕೇತ ವೀಳ್ಯದ ಎಲೆ ಬಟ್ಟಲು, ಅಡಿಕೆ ಹಾಗೂ ನೋಮುದಾರವನ್ನು ಭಗವಂತನ ಪಾದದ ಬಳಿ ಇಟ್ಟು ಪೂಜೆ ಸಲ್ಲಿಸಿ, ಕಜ್ಜಾಯವನ್ನು ಪ್ರಸಾದವಾಗಿ ಹಂಚಲಾಯಿತು.
ನಂತರ ಮನೆಗೆ ವಾಪಸ್ಸಾಗಿ ನೋಮುದಾರಗಳನ್ನು ಮನೆ ಮಂದಿಯ ಕೈ ತೋಳಿಗೆ ಕಟ್ಟಿಕೊಂಡು ಸಂಭ್ರಮಿಸಿದರು. ಹೊಸದಾಗಿ ಮದುವೆಯಾದ ನವವಧು, ವರರು ಅರ್ಧ ದಿನ ಹೆಣ್ಣಿನ ತವರು ಮನೆಯಲ್ಲೂ ಇನ್ನರ್ಧ ದಿನ ಗಂಡನ ಮನೆಯಲ್ಲಿ ಕಾಲಿರಿಸಿ ದೀಪಾವಳಿಯನ್ನು ವಿಶೇಷವಾಗಿ ಆಚರಿಸಿದರು.
ಮನೆಗಳಲ್ಲಿ ಮಣ್ಣಿನ ಎಣ್ಣೆ ದೀಪಗಳನ್ನು ಬೆಳಗಿಸಲಾಯಿತು. ಪೇಟೆಯಲ್ಲಿ ಖರೀದಿಸಿದ ವಿವಿದ ಬಗೆಯ ಪಟಾಕಿ ಸಿಡಿಮದ್ದು, ರಾಕೆಟ್ ಹೂ ಮಳೆ, ಸುರುಸುರು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.
ಅಮಾವಾಸ್ಯೆ ಕಾರಣ ಕೆಲವು ಮಂದಿ ಸೋಮವಾರ ಹಬ್ಬದಾಚರಣೆ ಮಾಡಿದರೆ, ಮಂಗಳವಾರ ಬಹಳಷ್ಟು ಮಂದಿ ಹಬ್ಬ ಆಚರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.