ADVERTISEMENT

ರಾಮನ ಹೆಸರಿನಿಂದ ಕ್ರಾಂತಿಯಾಗದು: ಕೋಡಿಹಳ್ಳಿ ಚಂದ್ರಶೇಖರ್

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 7:08 IST
Last Updated 24 ಜನವರಿ 2026, 7:08 IST
ಶಿಡ್ಲಘಟ್ಟದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಆಯೋಜಿಸಿದ್ದ ‘ಮಣ್ಣಿನ ಆರೋಗ್ಯ ಮತ್ತು ರೈತರ ಭೂಮಿ ರೈತರಿಂದ ಕಳೆದುಹೋಗುತ್ತಿರುವ ಕುರಿತ ವಿಚಾರ ಸಂಕಿರಣವನ್ನು ತಹಶೀಲ್ದಾರ್ ಗಗನಸಿಂಧು ಉದ್ಘಾಟಿಸಿದರು
ಶಿಡ್ಲಘಟ್ಟದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಆಯೋಜಿಸಿದ್ದ ‘ಮಣ್ಣಿನ ಆರೋಗ್ಯ ಮತ್ತು ರೈತರ ಭೂಮಿ ರೈತರಿಂದ ಕಳೆದುಹೋಗುತ್ತಿರುವ ಕುರಿತ ವಿಚಾರ ಸಂಕಿರಣವನ್ನು ತಹಶೀಲ್ದಾರ್ ಗಗನಸಿಂಧು ಉದ್ಘಾಟಿಸಿದರು   

ಶಿಡ್ಲಘಟ್ಟ: ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯು ಮಣ್ಣಿನ ಆರೋಗ್ಯ ಮತ್ತು ರೈತರು ಭೂಮಿ ಕಳೆದುಹೋಗುತ್ತಿರುವ ಕುರಿತು ವಿಚಾರ ಸಂಕಿರಣವನ್ನು ಶುಕ್ರವಾರ ಹಮ್ಮಿಕೊಳ್ಳಲಾಯಿತು. 

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ‘ರಾಜಕಾರಣವು ಕೇವಲ ಹಣದ ವ್ಯವಹಾರವಾಗಿದೆ. ಹೆಚ್ಚು ಖರ್ಚು ಮಾಡಬಲ್ಲವರು ಅಭ್ಯರ್ಥಿಯಾಗಲು ಯೋಗ್ಯ ಎಂಬುದಾಗಿ ರಾಜಕೀಯ ಪಕ್ಷಗಳು ತೀರ್ಮಾನಿಸಿವೆ. ಗೆಲ್ಲಲು ಬಂಡವಾಳ ಹಾಕುವ ಸಾಮರ್ಥ್ಯವಿರುವ, ಜಾತಿ, ಧರ್ಮದ ಬಲ ಚುನಾವಣೆ ಸ್ಪರ್ಧೆಗೆ ಮಾನದಂಡವಾಗಿದೆ. ಭ್ರಷ್ಟ ರಾಜಕಾರಣದ ಪರ್ಯಾಯ ದಿಕ್ಕುನೆಡೆ ಚಿಂತಿಸಲು ಮಾರ್ಚ್‌ ಕೊನೆಯಲ್ಲಿ ಕಲಬುರಗಿಯಲ್ಲಿ ರೈತ ಸಂಘದಿಂದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು’ ಎಂದರು. 

ಗಾಂಧೀಜಿ ಹೆಸರನ್ನು ತೆಗೆದು ರಾಮನ ಹೆಸರು ಇಡುವುದರಿಂದ ಕ್ರಾಂತಿಯಾಗುತ್ತದೆ ಎಂಬ ಭ್ರಮೆಯಿದ್ದರೆ ಅದು ಅವರ ಮೂರ್ಖತನ ಎಂದು ಮನರೇಗಾ ಕಾಯ್ದೆಗೆ ತಿದ್ದುಪಡಿ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು. 

ADVERTISEMENT

ಯೋಜನೆಯ ಮುಖ್ಯ ಉದ್ದೇಶ ದುಡಿಯುವ ವರ್ಗಕ್ಕೆ ನೆರವಾಗಬೇಕು. ಹೆಚ್ಚು ಆರ್ಥಿಕ ಸಹಾಯ ಸಿಗುವಂತಿರಬೇಕು. ಈ ಯೋಜನೆಯನ್ನು ವಿರೋಧಿಸುತ್ತಿರುವವರು ಯಾವುದೇ ಪರ್ಯಾಯ ಕಾರ್ಯಕ್ರಮ ರೂಪಿಸುತ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧವೂ ಪರೋಕ್ಷವಾಗಿ ತಿವಿದರು. 

ರೈತರ ಜಮೀನುಗಳನ್ನು ಸರ್ಕಾರ ವಶಕ್ಕೆ ಪಡೆದು ಕೈಗಾರಿಕೆಗಳಿಗೆ ನೀಡಲು ಹೊರಟಿರುವುದು 2013ರ ಭೂಸ್ವಾಧೀನ ಕಾಯ್ದೆ ವಿರುದ್ಧದ ನಡವಳಿಕೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಪಕ್ಷದಲ್ಲಿದ್ದಾಗ ಇದನ್ನು ವಿರೋಧಿಸಿದ್ದರು. ಈಗ ಇದನ್ನು ಮುಂದುವರಿಸಿದ್ದಾರೆ. ರಾಜಕೀಯ ಉದ್ದೇಶದಿಂದ ಅವರು ಅನ್ನದಾತನನ್ನು ಕಡೆಗಣಿಸಿದ್ದಾರೆ. ಇದರಿಂದ ಕೃಷಿ ವಲಯಕ್ಕೆ ದೊಡ್ಡ ಪೆಟ್ಟು ಬಿದ್ದಿದೆ ಎಂದರು. 

ತಹಶೀಲ್ದಾರ್ ಗಗನಸಿಂಧು ಮಾತನಾಡಿ, ‘ನಮ್ಮ ತಾಲ್ಲೂಕು ಕಚೇರಿಯಲ್ಲಿ ರೈತರ ಕೆಲಸಕ್ಕೆ ಮೊದಲ ಆದ್ಯತೆ ನೀಡಿದ್ದೇವೆ. ತಾಲ್ಲೂಕು ಮಟ್ಟದ ಎಲ್ಲ ಇಲಾಖೆಗಳಿಂದಲೂ ಇದೇ ಸ್ಪಂದನೆಯಿದೆ. ರೈತರಿಗೆ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ನನ್ನ ಗಮನಕ್ಕೆ ತನ್ನಿ’ ಎಂದು ಹೇಳಿದರು.

ಕೋಲಾರ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನ ವಿಭಾಗದ ಸಹಪ್ರಾಧ್ಯಾಪಕ ಡಾ.ಎಸ್.ಅನಿಲ್ ಕುಮಾರ್ ಮಾತನಾಡಿ, ಭೂತಾಯಿಗೆ ಎಷ್ಟು ಆಹಾರ ಮತ್ತು ಯಾವ ರೀತಿಯ ಆಹಾರ ಕೊಡಬೇಕು ಎಂಬ ತಿಳಿವಳಿಕೆ ಇರಬೇಕು. ಅಸಮರ್ಪಕವಾಗಿ ಭೂಮಿಗೆ ರಾಸಾಯನಿಕ ಸುರಿದರೆ ಭೂಮಿಯಲ್ಲಿ ಉಂಟಾಗುವ ಅಸಮತೋಲನದಿಂದ ಮಣ್ಣಿನ ಆರೋಗ್ಯ ಕೆಡುತ್ತದೆ ಎಂದರು.

ರೈತ ಸಂಘಟನೆಯಿಂದ ಕೃಷಿ ಪ್ರವಾಸೋದ್ಯಮ ಮಾಡಬಹುದು. ನಗರ ಪ್ರಾಂತ್ಯದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಗ್ರಾಮೀಣ ಪರಿಸರ, ಕೃಷಿ, ಪರಿಕರಗಳು, ವಿವಿಧ ಬೆಳೆಗಳನ್ನು ತೋರಿಸಿ ವಿವರಿಸಿ, ಗ್ರಾಮೀಣ ಖಾದ್ಯವನ್ನು ಉಣಬಡಿಸಿ, ಕೃಷಿಯ ಬಗ್ಗೆ ಮುಂದಿನ ಪೀಳಿಗೆಗೆ ಸಕಾರಾತ್ಮಕ ಅನುಭವವನ್ನು ನೀಡುವ ಮೂಲಕ, ಆರ್ಥಿಕತೆಯನ್ನೂ ಹೆಚ್ಚಿಸಿಕೊಳ್ಳಬಹುದು ಎಂದು ನುಡಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ವಿಜ್ಞಾನಿ ಡಾ.ತನ್ವೀರ್ ಅಹಮದ್, ಚಿಂತಕ ಕೆ.ಎಸ್.ನಾರಾಯಣಸ್ವಾಮಿ, ರಾಜಸ್ವ ನಿರೀಕ್ಷಕ ಶಶಿಧರ್, ವೇಣು, ರಾಮನಾಥನ್, ವೇಣುಗೋಪಾಲ್, ಮುನಿನಂಜಪ್ಪ, ಎನ್.ಗೋಪಾಲ್, ನರಸಿಂಹರೆಡ್ಡಿ, ಹಿರೇಬಲ್ಲ ಕೃಷ್ಣಪ್ಪ, ಕುಪ್ಪಳ್ಳಿ ಶ್ರೀನಿವಾಸ್, ಬಿ.ನಾರಾಯಣಸ್ವಾಮಿ, ವೈ.ಎ.ರಾಮಕೃಷ್ಣಪ್ಪ, ಸೀಕಲ್ ರಮಣಾರೆಡ್ಡಿ, ರಾಮಾಂಜಿನಪ್ಪ, ಸಿ.ರಮಣಾರೆಡ್ಡಿ, ಅಗ್ನೇಶಿ, ಸುಬ್ರಮಣಿ, ಸೋಮಶೇಖರ್, ರಘುನಾಥರೆಡ್ಡಿ, ನಾಗಪ್ಪ, ತಾದೂರು ಮಂಜುನಾಥ್, ನೇರಳೆಮರದಹಳ್ಳಿ ಎ.ಜಿ.ನಾರಾಯಣಸ್ವಾಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.