ADVERTISEMENT

ಜಂಗಮಕೋಟೆ: ಕೈಗಾರಿಕೆ ಪ್ರದೇಶದಿಂದ ತಾಲ್ಲೂಕು ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 1 ಮೇ 2025, 13:48 IST
Last Updated 1 ಮೇ 2025, 13:48 IST
ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯ ಡಾ. ಬಿ.ಆರ್.ಅಂಬೇಡ್ಕರ್ ಸಾರ್ವಜನಿಕ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಕೆಐಎಡಿಬಿ ಗೆ ಜಮೀನು ನೀಡಲು ಸಿದ್ದರಿರುವ ಜಮೀನುಗಳ ರೈತರ ಹೋರಾಟ ಸಮಿತಿಯ ರೈತರು ಸುದ್ದಿಗೋಷ್ಟಿ ನಡೆಸಿದರು
ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯ ಡಾ. ಬಿ.ಆರ್.ಅಂಬೇಡ್ಕರ್ ಸಾರ್ವಜನಿಕ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಕೆಐಎಡಿಬಿ ಗೆ ಜಮೀನು ನೀಡಲು ಸಿದ್ದರಿರುವ ಜಮೀನುಗಳ ರೈತರ ಹೋರಾಟ ಸಮಿತಿಯ ರೈತರು ಸುದ್ದಿಗೋಷ್ಟಿ ನಡೆಸಿದರು   

ಶಿಡ್ಲಘಟ್ಟ: ತಾಲ್ಲೂಕಿನ ಜಂಗಮಕೋಟೆ ಭಾಗದಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಭೂಮಿ ನೀಡಲು ಸಿದ್ಧವಿರುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಮತ್ತು 13 ಗ್ರಾಮಗಳ ರೈತರ ಹೋರಾಟ ಸಮಿತಿ ಬೆಂಬಲ ವ್ಯಕ್ತಪಡಿಸಿವೆ.

ಕೆಐಎಡಿಬಿ ಅಧಿಸೂಚನೆಯಂತೆ ದೇವನಹಳ್ಳಿ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಜಂಗಮಕೋಟೆ ಭಾಗದಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಿದರೆ ಜಮೀನು ಬಿಟ್ಟು ಕೊಡಲು ಸಿದ್ಧ ಇರುವುದಾಗಿ 13 ಹಳ್ಳಿಗಳ ರೈತರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. 

ಕೆಐಎಡಿಬಿ ಭೂ ಸ್ವಾಧೀನಕ್ಕೆ ಅಧಿಸೂಚನೆ ನಂತರ ರಾಜ್ಯದ ಎಲ್ಲಿಯೂ ಈವರೆಗೂ ರೈತರ ಅಭಿಪ್ರಾಯ ಸಂಗ್ರಹಿಸಿ ಭೂ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ನಡೆದಿಲ್ಲ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಶಿಡ್ಲಘಟ್ಟ ಶಾಸಕ ಬಿ.ಎನ್.ರವಿಕುಮಾರ್ ನೇತೃತ್ವದಲ್ಲಿ ಮೊದಲ ಬಾರಿಗೆ ರೈತರ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ತಾಲ್ಲೂಕು ಅಭಿವೃದ್ಧಿ ಹೊಂದುವ ಜೊತೆಗೆ ಈ ಭಾಗದ ನಿರುದ್ಯೋಗ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸಿದಂತಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಹೇಳಿದರು.

ತಾಲ್ಲೂಕಿನ ಯಾವುದೇ ಭಾಗದಲ್ಲಿ ಕೈಗಾರಿಕಾ ಪ್ರದೇಶ ಮಾಡಿದರೂ ಸಹ ರೈತರ ಭೂಮಿಗಳಲ್ಲಿಯೇ ಮಾಡಬೇಕಲ್ಲ ಎಂದು ಪ್ರಶ್ನಿಸಿದರು.

ಜಂಗಮಕೋಟೆ ಭಾಗದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳ ಹಾವಳಿ ಹೆಚ್ಚಾಗಿದೆ. ಬಹುತೇಕ ರೈತರ ಕೃಷಿ ಭೂಮಿ ಇದೀಗ ರಿಯಲ್ ಎಸ್ಟೇಟ್ ಉದ್ಯಮಿಗಳ ಕೈಯಲ್ಲಿದೆ ಎಂದು ಕದಸಂಸ ತಾಲ್ಲೂಕು ಸಂಚಾಲಕ ಮಳಮಾಚನಹಳ್ಳಿ ರಾಮಾಂಜಿನಪ್ಪ ಹೇಳಿದರು.

ಕೆಐಎಡಿಬಿ ಹೋರಾಟ ಸಮಿತಿ ಪದಾಧಿಕಾರಿಗಳಾದ ನಡುಪಿನಾಯಕನಹಳ್ಳಿ ಸುಬ್ರಮಣಿ, ವಾಸುದೇವ ಮೂರ್ತಿ, ಯಣ್ಣಂಗೂರು ಪ್ರದೀಪ್, ಗಂಗಾದಾರ್, ನರಸಿಂಹಮೂರ್ತಿ, ಈರಪ್ಪ, ಬಸವಪಟ್ಟಣ ಆಂಜಿನಪ್ಪ, ರಾಮದಾಸ್ ಪ್ರಭುಗೌಡ, ಮುನೇಗೌಡ, ವೆಂಕಟೇಶ್, ಕೊಲಿಮಿಹೊಸುರು ಚಿನ್ನಪ್ಪ, ಸತೀಶ, ಬಾಬು, ಜಂಗಮಕೋಟೆಯ ಮಂಜುನಾಥ್ ಹಾಗೂ 13 ಹಳ್ಳಿಗಳ ರೈತರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.