
ಶಿಡ್ಲಘಟ್ಟ: ನಗರದ ರೇಷ್ಮೆಗೂಡು ಮಾರುಕಟ್ಟೆಗೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಮಹಿಳಾ ರೇಷ್ಮೆ ಬೆಳೆಗಾರರು ಮಂಗಳವಾರ ಭೇಟಿ ನೀಡಿದರು. ರೀಲರು, ರೇಷ್ಮೆ ಬೆಳೆಗಾರರು ಹಾಗೂ ಮಾರುಕಟ್ಟೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಹಲವು ಮಾಹಿತಿಗಳನ್ನು ಪಡೆದುಕೊಂಡರು.
ಕೃಷಿ ಅಧ್ಯಯನ ಪ್ರವಾಸಕ್ಕೆ ಆಗಮಿಸಿದ್ದ ಸುಮಾರು 50ಕ್ಕೂ ಹೆಚ್ಚು ಮಹಿಳಾ ರೈತರು ರೇಷ್ಮೆಗೂಡು ಮಾರುಕಟ್ಟೆಯ ಎಲ್ಲ ಗೋದಾಮುಗಳಲ್ಲಿ ಸುತ್ತಾಡಿ ರೇಷ್ಮೆಗೂಡಿನ ಗುಣಮಟ್ಟ, ಹರಾಜಿನಲ್ಲಿ ಸಿಕ್ಕ ಬೆಲೆ ಬಗ್ಗೆ ರೈತರು ಮತ್ತು ರೀಲರುಗಳಿಂದ ತಿಳಿದುಕೊಂಡರು.
ಹೊಸದುರ್ಗ ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಆಸುಪಾಸಿನಲ್ಲಿ ಬಿತ್ತನೆಗೂಡು ಬೆಳೆಯಲಾಗುತ್ತದೆ. ನಮ್ಮಲ್ಲಿ ಮಿಶ್ರತಳಿ ರೇಷ್ಮೆಗೂಡು ಬೆಳೆಯುವುದಿಲ್ಲ. ಇಲ್ಲಿ ಉತ್ತಮ ಗುಣಮಟ್ಟದ ಗೂಡು ಬೆಳೆದಿದ್ದಾರೆ ಎಂದ ಮಹಿಳಾ ರೈತರು ರೇಷ್ಮೆಗೂಡನ್ನು ಕೈಯ್ಯಲ್ಲಿಡಿದು ಸೆಲ್ಫಿ ತೆಗೆದುಕೊಂಡರು.
ಈ ವೇಳೆ ಹೊಸದುರ್ಗ ರೇಷ್ಮೆ ವಿಸ್ತರಣಾ ಕೇಂದ್ರದ ವಿಸ್ತರಣಾಧಿಕಾರಿ ಬಿ.ಉಮಾಪತಿ ಮಾತನಾಡಿ, ಮಹಿಳಾ ರೈತರ ಕೃಷಿ ಅಧ್ಯಯನ ಪ್ರವಾಸ ಕಾರ್ಯಕ್ರಮದಡಿ ಎರಡು ದಿನಗಳ ಅಧ್ಯಯನ ಪ್ರವಾಸ ಕೈಗೊಂಡಿದ್ದು, ರೇಷ್ಮೆಗೂಡು ಮಾರುಕಟ್ಟೆ, ಹಿಪ್ಪುನೇರಳೆ ತೋಟ, ರೀಲಿಂಗ್ ಘಟಕಗಳಿಗೆ ಭೇಟಿ ನೀಡುತ್ತಿದ್ದೇವೆ ಎಂದರು.
ಈ ಭಾಗದ ರೈತರು, ರೀಲರುಗಳು, ಅಧಿಕಾರಿಗಳ ಜತೆ ಚರ್ಚೆ, ಸಂವಾದ, ಪ್ರಾತ್ಯಕ್ಷಿತೆ, ಖುದ್ದು ವೀಕ್ಷಣೆ ಮೂಲಕ ಎಲ್ಲ ವಿಚಾರ ಹಾಗೂ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ ಎಂದು ವಿವರಿಸಿದರು. ರೇಷ್ಮೆ ಇಲಾಖೆ ಸಿಬ್ಬಂದಿ ಶೋಭ ಇನ್ನಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.