ಚಿಕ್ಕಬಳ್ಳಾಪುರ: ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರು ಚಿಕ್ಕಬಳ್ಳಾಪುರಕ್ಕೆ ಹೆಸರು ಮತ್ತು ಹೆಮ್ಮೆ ತಂದ ಪುತ್ರರತ್ನ. ತಾಲ್ಲೂಕಿನ ಮುದ್ದೇನಹಳ್ಳಿಯ ಅವರ ನಿವಾಸ, ಸಮಾಧಿ ಮತ್ತು ವಸ್ತುಸಂಗ್ರಹಾಲಯಕ್ಕೆ ರಾಜ್ಯದ ವಿವಿಧ ಭಾಗಗಳ ಗಣ್ಯರು, ವಿದ್ಯಾರ್ಥಿಗಳು ನಿತ್ಯ ಭೇಟಿ ನೀಡುವರು. ಇದು ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳವೂ ಆಗಿದೆ.
ಸರ್.ಎಂ.ವಿಶ್ವೇಶ್ವರಯ್ಯ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವಸ್ತುಸಂಗ್ರಹಾಲಯ, ಸಮಾಧಿಯನ್ನು ನಿರ್ವಹಿಸುತ್ತಿದೆ. ವಸ್ತುಸಂಗ್ರಹಾಲಯಕ್ಕೆ ದಿನದಿಂದ ದಿನಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕಿರಿದಾಗಿರುವ ವಸ್ತುಸಂಗ್ರಹಾಲಯವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸಲು ವಿಶ್ವೇಶ್ವರಯ್ಯ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಮುಂದಾಗಿದೆ. ಈ ಸಂಬಂಧ ಈಗಾಗಲೇ ಕೆಲಸಗಳೂ ಆರಂಭವಾಗಿವೆ.
ವಿಶ್ವೇಶ್ವರಯ್ಯ ಅವರ ಮನೆಯಿಂದ ಸಮಾಧಿಯ ಸ್ಥಳಕ್ಕೆ ತೆರಳುವಾಗ ಇರುವ ಆಂಜನೇಯ ಸ್ವಾಮಿ ದೇವಾಲಯದ ಪಕ್ಕದಲ್ಲಿರುವ ಜಾಗದಲ್ಲಿ ಹೊಸ ವಸ್ತು ಸಂಗ್ರಹಾಲಯಕ್ಕೆ ಯೋಜಿಸಲಾಗಿದೆ.
ಈಗ ಇರುವ ವಸ್ತುಸಂಗ್ರಹಾಲಯವು ಕಿರಿದಾಗಿದೆ. ಈ ವಸ್ತು ಸಂಗ್ರಹಾಲಯದಲ್ಲಿ ಭಾರತರತ್ನ ಸೇರಿದಂತೆ ಸರ್.ಎಂ.ವಿ ಅವರಿಗೆ ಸಂದಿರುವ ಪುರಸ್ಕಾರಗಳು, ಗೌರವ ಡಾಕ್ಟರೇಟ್‌ಗಳು, ಅವರು ಬಳಸುತ್ತಿದ್ದ ಪೆನ್ನು, ಪುಸ್ತಕ, ರೇಡಿಯೊ ಸೇರಿದಂತೆ ಹಲವು ವಸ್ತುಗಳನ್ನು ಕಾಣಬಹುದು. ಸರ್.ಎಂ.ವಿ ಅವರ ಬದುಕಿನ ಹಂತಗಳನ್ನು ಮತ್ತು ಅವರಿಗೆ ಸಂಬಂಧಿಸಿದ ಮಾಹಿತಿಗಳನ್ನು ತಿಳಿಯಲು ಈ ವಸ್ತು ಸಂಗ್ರಹಾಲಯವೇ ಪ್ರಮುಖ ಆಧಾರ. ಸರ್.ಎಂ.ವಿಶ್ವೇಶ್ವರಯ್ಯ ಅವರ ಸಾಧನೆಗಳು, ಅವರ ಬಗ್ಗೆ ಪ್ರಕಟವಾಗಿರುವ ಪತ್ರಿಕಾ ವರದಿಗಳೂ ಇಲ್ಲಿವೆ.
ಹೀಗೆ ವಿಶ್ವೇಶ್ವರಯ್ಯ ಅವರ ಬದುಕನ್ನು ಕಾಣಿಸುವ ವಸ್ತು ಸಂಗ್ರಹಾಲಯಕ್ಕೆ ನಿತ್ಯ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಬೆಂಗಳೂರಿನಿಂದ ಶನಿವಾರ ಮತ್ತು ಭಾನುವಾರ ಚಿಕ್ಕಬಳ್ಳಾಪುರದ ಕೆಲವು ಪ್ರವಾಸಿ ತಾಣಕ್ಕೆ ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿವೆ. ಈ ತಾಣಗಳಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಅವರ ನಿವಾಸವೂ ಸೇರಿದೆ.
ಶನಿವಾರ ಮತ್ತು ಭಾನುವಾರ ದೊಡ್ಡ ಸಂಖ್ಯೆಯಲ್ಲಿ ಸರ್.ಎಂ.ವಿ ನಿವಾಸಕ್ಕೆ ಪ್ರವಾಸಿಗರು ಭೇಟಿ ನೀಡುವರು. ಒಂದು ಬಿಎಂಟಿಸಿ ಬಸ್‌ನಲ್ಲಿ ಸುಮಾರು 40ರಿಂದ 50 ಪ್ರಯಾಣಿಕರು ಇರುತ್ತಾರೆ. ಒಮ್ಮೊಮ್ಮೆ ಎರಡು ಮೂರು ಬಸ್‌ಗಳು ಏಕಕಾಲಕ್ಕೆ ಬರುತ್ತಿವೆ. ಆಗ ಒಂದೇ ಸಮಯದಲ್ಲಿ ಎಲ್ಲ ಪ್ರವಾಸಿಗರು ವಸ್ತು ಸಂಗ್ರಹಾಲಯದ ಒಳಗೆ ತೆರಳಿದಾಗ ಜಾಗ ಕಿರಿದಾದ ಕಾರಣ ಸಮಸ್ಯೆ ಎದುರಾಗುತ್ತಿದೆ.
ಹೊಸ ವಸ್ತು ಸಂಗ್ರಹಾಲಯ ನಿರ್ಮಾಣದಿಂದ ಈ ಪ್ರವಾಸಿ ತಾಣವು ಮತ್ತಷ್ಟು ಅಭಿವೃದ್ಧಿಯಾಗುವುದು ಖಚಿತ. ಅಲ್ಲದೆ ಸರ್.ಎಂ.ವಿ ಅವರಿಗೆ ಸಂಬಂಧಿಸಿದ ಮತ್ತಷ್ಟು ವಿಚಾರಗಳೂ ಇಲ್ಲಿ ಅಡಕವಾಗುವ ಸಾಧ್ಯತೆ ಇರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.