ಚಿಕ್ಕಬಳ್ಳಾಪುರ: ಸ್ಕಂದಗಿರಿಯಲ್ಲಿನ ಅಕ್ರಮಗಳು ಮತ್ತು ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಐದು ಅಧಿಕಾರಿಗಳ ಸಮಿತಿ ರಚನೆಗೆ ಸೂಚಿಸಿದ್ದಾರೆ.
ಪ್ರವಾಸೋದ್ಯಮ ಇಲಾಖೆ ಸಹಾಯ ನಿರ್ದೇಶಕರು, ವಲಯ ಅರಣ್ಯ ಅಧಿಕಾರಿ, ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಡಿವೈಎಸ್‌ಪಿ ತನಿಖೆಯ ತಂಡದಲ್ಲಿ ಇದ್ದಾರೆ.
ಅಕ್ರಮಗಳಿಗೆ ಸಂಬಂಧಿಸಿದಂತೆ ಬಂದಿರುವ ದೂರುಗಳನ್ನು ಆಧರಿಸಿ ತಂಡ ಸ್ಕಂದಗಿರಿಗೆ ಭೇಟಿ ನೀಡಲಿದೆ. ಅಲ್ಲಿನ ಚಟುವಟಿಕೆಗಳ ಬಗ್ಗೆ ಸಮಗ್ರವಾಗಿ ಮಾಹಿತಿ ಕಲೆ ಹಾಕಲಿದೆ. ಈ ಸಂಬಂಧ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಸಭೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದಾರೆ.
ಸ್ಕಂದಗಿರಿಗೆ ಬರುವ ಚಾರಣಿಗರು ಮತ್ತು ಪ್ರವಾಸಿಗರಿಗೆ ನಕಲಿ ಟಿಕೆಟ್ ಮತ್ತು ನಿಗದಿತ ಮಿತಿಗಿಂತ ಹೆಚ್ಚು ಟಿಕೆಟ್ ನೀಡಲಾಗುತ್ತಿದೆ. ನಕಲಿ ಟಿಕೆಟ್‌ಗೆ ₹ 1 ಸಾವಿರದವರೆಗೂ ವಸೂಲಿ ಮಾಡಲಾಗುತ್ತಿದೆ. ಟಿಕೆಟ್ ಕಾಯ್ದಿರಿಸದವರಿಗೂ ನಕಲಿ ಟಿಕೆಟ್ ನೀಡಿ ಹೆಚ್ಚಿನ ಹಣ ಪಡೆದು ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.
ವಾಹನಗಳ ನಿಲುಗಡೆಗೆ ಪಾಪಾಘ್ನಿ ಮಠದವರು ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಆದರೆ ಈ ಜಾಗ ಅರಣ್ಯ ಇಲಾಖೆಗೆ ಸೇರಿದೆ ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಕೆಲವರು ದೂರು ನೀಡಿದ್ದರು.
ಹೀಗೆ ರಾಜ್ಯದಲ್ಲಿಯೇ ಪ್ರಸಿದ್ಧ ಚಾರಣ ಸ್ಥಳಗಳಲ್ಲಿ ಒಂದಾದ ಸ್ಕಂದಗಿರಿಯ ಅಕ್ರಮದ ವಿಚಾರವು ಸರ್ಕಾರದ ಮಟ್ಟಕ್ಕೆ ಮುಟ್ಟಿದ್ದು ಜಿಲ್ಲಾಧಿಕಾರಿ ತನಿಖೆಗೆ ಸೂಚನೆ ನೀಡಿದ್ದಾರೆ.
ಪಾಪಾಗ್ನಿ ಮಠದಿಂದ ವಾಹನ ನಿಲುಗಡೆ ಶುಲ್ಕ ವಸೂಲಿ ವಿಚಾರವಾಗಿ ಕೆಲವು ತಿಂಗಳ ಹಿಂದೆ ವಿವಾದ ಸಹ ಜರುಗಿತ್ತು. ಮಹಿಳೆಯೊಬ್ಬರು ವಾಹನ ನಿಲುಗಡೆ ಶುಲ್ಕ ವಸೂಲಿಗೆ ಮುಂದಾದಾಗ ವಾಗ್ವಾದಗಳು ಸಹ ನಡೆದಿದ್ದವು.
ಈ ಹಿಂದಿನಿಂದಲೂ ಅವ್ಯವಹಾರ: ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಅರಣ್ಯ ಸಚಿವರಿಗೆ ದೂರು ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಸ್ಕಂದಗಿರಿಯಲ್ಲಿ ಈ ಟಿಕೆಟ್ ಬುಕ್ಕಿಂಗ್, ನಕಲಿ ಟಿಕೆಟ್ ಹಗರಣ ಈ ಹಿಂದಿನಿಂದಲೂ ನಡೆಯುತ್ತಿದ್ದವು ಎನ್ನುತ್ತವೆ ಅರಣ್ಯ ಇಲಾಖೆಯ ಮೂಲಗಳು.
‘ಕೆಲವು ವರ್ಷಗಳ ಹಿಂದೆ ಸ್ಕಂದಗಿರಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಮಾಧ್ಯಮದವರು ವಿಡಿಯೊಗಳನ್ನು ನಮಗೆ ನೀಡಿದ್ದರು. ಆ ವಿಡಿಯೊಗಳನ್ನು ಆಧರಿಸಿ ನಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಅಕ್ರಮಗಳು ನಡೆಯುತ್ತಿರುವುದು ಕಂಡು ಬಂದಿತ್ತು’ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಟಿಕೆಟ್ ಇಲ್ಲದಿದ್ದರೂ ಸ್ಥಳಕ್ಕೆ ಬಂದವರಿಂದ ಹಣ ಪಡೆದು ಪ್ರವೇಶ ನೀಡಲಾಗುತ್ತಿತ್ತು. ಅಕ್ರಮಗಳ ತಡೆಗೆ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಯಿತು. ಸಂಬಂಧಿಸಿದವರಿಗೆ ಎಚ್ಚರಿಕೆ ನೀಡಲಾಯಿತು. ನಾವು ಸಹ ನಿಯಮಿತವಾಗಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದೆವು. ಇದರಿಂದ ಅಕ್ರಮಕ್ಕೆ ತಡೆ ಬಿದ್ದಿತು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.