
ಪ್ರಾತಿನಿಧಿಕ ಚಿತ್ರ
ಶಿಡ್ಲಘಟ್ಟ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಸ್ತಿಗಳ ಇ–ಖಾತೆ ಅಭಿಯಾನ ಡಿಸೆಂಬರ್ 18, 2025ರಿಂದ ಆರಂಭವಾಗಿದೆ. ಸರ್ಕಾರ ಈ ಬಗ್ಗೆ ವ್ಯಾಪಕ ಪ್ರಚಾರ ನಡೆಸಿದೆ. ನವೆಂಬರ್ 28ರಂದು ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ಅಧ್ಯಕ್ಷರಿಗೆ ಇ-ಖಾತೆ ಅಭಿಯಾನದ ಬಗ್ಗೆ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಇ–ಖಾತೆ ಕುರಿತು ಸರ್ಕಾರ ಹೊರಡಿಸಿರುವ ಆದೇಶ ಮತ್ತು ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಿಗೆ ಇರುವ ಅಧಿಕಾರ ಹಾಗೂ ಜವಾಬ್ದಾರಿ ಕುರಿತು ಸಮಗ್ರವಾಗಿ ಮಾಹಿತಿಯೊಂದಿಗೆ ತರಬೇತಿ ಸಹ ನೀಡಲಾಗಿತ್ತು. ಅಧಿಕಾರ ವಿಕೇಂದ್ರೀಕರಣಕ್ಕಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಇ-ಖಾತೆ ವಿಲೇವಾರಿ ಮಾಡಲು ಸರ್ಕಾರ ಅಧಿಕಾರ ನೀಡಿದೆ. ಸಾರ್ವಜನಿಕರಿಗೆ ತ್ವರಿತವಾಗಿ ನಿವೇಶನಗಳಿಗೆ ಅಥವಾ ಕಟ್ಟಡಗಳಿಗೆ ಸಂಬಂಧಿಸಿದಂತೆ ಇ-ಖಾತೆ ನೀಡಲು ಸರ್ಕಾರ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದೆ.
ಈ ಹಿಂದೆ ಇ-ಖಾತೆ ನೀಡಲು 45 ದಿನಗಳನ್ನು ನಿಗದಿಪಡಿಸಲಾಗಿತ್ತು. ಈಗ ಕೇವಲ 15 ದಿನದೊಳಗೆ ಇ-ಖಾತೆ ವಿತರಿಸಲು ಸರ್ಕಾರ ಆದೇಶ ಹೊರಡಿಸಿದೆ. ಸಾರ್ವಜನಿಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಅದನ್ನು ಮೊದಲ ಎರಡು ದಿನಗಳು ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಸಾರ್ವಜನಿಕರು ಸಲ್ಲಿಸಿದ ದಾಖಲೆ ಪರಿಶೀಲಿಸಿ ಆ ನಂತರ ಗ್ರಾಮ ಪಂಚಾಯಿತಿ ಅಧ್ಯಕ್ಷರ ಲಾಗಿನ್‌ಗೆ ಕಳುಹಿಸಬೇಕು.
ಗ್ರಾಮ ಪಂಚಾಯಿತಿ ಅಧ್ಯಕ್ಷರು ಸಾರ್ವಜನಿಕರಿಂದ ಆನ್‌ಲೈನ್ ಮೂಲಕ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಕಾನೂನು ಚೌಕಟ್ಟಿನಲ್ಲಿ ಪರಿಶೀಲಿಸಿ, ನಾಲ್ಕು ದಿನ ಒಳಗೆ ವಿಲೇವಾರಿ ಮಾಡಬೇಕು. ನಂತರ ಇಒ ಪರಿಶೀಲಿಸಬೇಕು. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಎರಡು ದಿನದೊಳಗೆ ಪಿಡಿಒ ಸಲ್ಲಿಕೆಯಾಗಿರುವ ದಾಖಲೆಗಳನ್ನು ಪರಿಶೀಲಿಸಿ ಇ-ಖಾತೆ ನೀಡಲು ಅಧಿಕಾರ ನೀಡಲಾಗಿದೆ.
ಇ-ಖಾತೆ 2.1 ತಂತ್ರಾಂಶದ ತಾಂತ್ರಿಕ ಸಮಸ್ಯೆಗಳು, ದಾಖಲೆಗಳಲ್ಲಿನ ಗೊಂದಲ ಮತ್ತು ಕೊರತೆಯಿಂದ ಇ–ಖಾತೆ ಅಭಿಯಾನಕ್ಕೆ ತೊಡಕಾಗಿದೆ. ಆದರೂ, ತಾಲ್ಲೂಕಿನಲ್ಲಿ ಒಂದಷ್ಟು ಪ್ರಗತಿ ಕಂಡಿದೆ. ಇನ್ನಷ್ಟು ವೇಗವಾಗಿ ನಡೆಯಲು ಜನರ ಸಮಸ್ಯೆ ಗಮನದಲ್ಲಿಟ್ಟುಕೊಂಡು ತಂತ್ರಾಂಶವನ್ನು ಬಳಕೆಯ ಸ್ನೇಹಿಯಾಗಿ ಬದಲಿಸಬೇಕು. ದಾಖಲೆಗಳ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಎರಡೂ ಸೇರಿದರೆ ಮಾತ್ರ ಉದ್ದೇಶ ಈಡೇರಲು ಸಾಧ್ಯ ಎನ್ನುತ್ತಾರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.