ಚಿಕ್ಕಬಳ್ಳಾಪುರ: ನಗರದ ವಿವಿಧ ಕೊಳಗೇರಿಗಳಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸುತ್ತಿರುವ ಮನೆಗಳ ಕಾಮಗಾರಿ ಎರಡು ಮೂರು ವರ್ಷಗಳಿಂದ ಕುಂಟುತ್ತ ಸಾಗಿದೆ.
ಕೆಲವು ಮನೆಗಳು ಲಿಂಟಲ್, ಮತ್ತಷ್ಟು ಮನೆಗಳು ಮೋಲ್ಡಿಂಗ್ ಹಂತದಲ್ಲಿಯೇ ನಿಂತಿವೆ. ‘ನಮ್ಮ ಮನೆಯ ಕಾಮಗಾರಿ ಪೂರ್ಣಗೊಳಿಸಿ. ಮನೆಗಳನ್ನು ನೀಡಿ’ ಎಂದು ಕೊಳಗೇರಿಗಳ ನಿವಾಸಿಗಳು ಸಂಬಂಧಿಸಿದ ಎಂಜಿನಿಯರ್‌ಗಳಿಗೆ ಮನವಿ ಮಾಡಿದರೂ ಅವರು ದಿನ ತಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ಚಿಕ್ಕಬಳ್ಳಾಪುರ ನಗರಸಭೆ ಸಹ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಾ.ಕೆ.ಸುಧಾಕರ್ ಸಚಿವರಾಗಿದ್ದ ವೇಳೆ ವಿವಿಧ ಕೊಳಗೇರಿಗಳ ನಿವಾಸಿಗಳಿಗೆ 760 ಮನೆಗಳು ಮಂಜೂರಾಗಿದ್ದವು. ಇವುಗಳಲ್ಲಿ 300 ಮನೆಗಳ ಕಾಮಗಾರಿ ಆರಂಭವೂ ಆಗಿದೆ. ಆದರೆ ಕಾಮಗಾರಿ ಆರಂಭವಾಗಿ ಎರಡು ವರ್ಷ ದಾಟಿದ್ದರೂ ಪೂರ್ಣವಾಗಿಲ್ಲ. ಕೊಳಗೇರಿಗಳಲ್ಲಿ ವಾಸಿಸುತ್ತಿರುವವರು ಬಡವರು, ಪರಿಶಿಷ್ಟ ಜಾತಿಯ ಜನರೇ ಅಧಿಕವಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಈ ಕುರಿತು ಮಾಹಿತಿ ನೀಡಿದ ಕೊಳಗೇರಿ ನಿವಾಸಿಗಳು ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
‘ನಮ್ಮದು ನಿಮ್ಮಾಕಲಕುಂಟೆ. 7ನೇ ವಾರ್ಡ್‌ನಲ್ಲಿ ಮನೆ ಮಂಜೂರಾಗಿದೆ. ನಮ್ಮ ಮನೆಯನ್ನು ಕೆಡವಿದರು. ಎರಡು ವರ್ಷದ ಹಿಂದೆ ಮನೆ ಕಾಮಗಾರಿ ಆರಂಭವಾಗಿತ್ತು. ಆದರೆ ಇಂದಿಗೂ ಪೂರ್ಣವಾಗಿಲ್ಲ’ ಎಂದು ಮುನಿಲಕ್ಷ್ಮಿ ತಿಳಿಸುವರು.
‘ಈಗಾಗಲೇ ಎರಡು ಕಂತುಗಳಲ್ಲಿ ₹ 70 ಸಾವಿರ ಪಾವತಿಸಿದ್ದೇವೆ. ಮೋಲ್ಡ್ ಹಾಕಿದ ಮೇಲೆ 35 ಸಾವಿರ ಪಾವತಿಸಬೇಕು ಎಂದಿದ್ದಾರೆ. ಮನೆ ಪೂರ್ಣ ಮಾಡಿಕೊಡಿ ಎಂದು ಎಂಜಿನಿಯರ್ ಕೇಳಿದರೆ ಈಗ ಆಗುತ್ತದೆ ನಾಳೆ ಆಗುತ್ತದೆ ಎನ್ನುತ್ತಾರೆ. ಕೊನೆಗೆ ಕರೆ ಸ್ವೀಕರಿಸುವುದೇ ಇಲ್ಲ’ ಎಂದು ದೂರಿದರು.
‘ಒಂದು ಕೊಠಡಿ, ನಡುಮನೆ, ಅಡುಗೆ ಕೋಣೆ, ಶೌಚಾಲಯ ನಿರ್ಮಿಸಿಕೊಡುತ್ತೇವೆ ಎಂದು ಹೇಳಿದರು. ನಮ್ಮ ಮನೆಯಲ್ಲಿ ನಡುಮನೆ ಮತ್ತು ಒಂದು ಕೊಠಡಿ ನಿರ್ಮಿಸಿದ್ದಾರೆ. ಉಳಿಯದ ಯಾವ ಕೆಲಸಗಳೂ ಆಗಿಲ್ಲ’ ಎಂದು ಗಾಯತ್ರಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಸುಮಾ ಸಹ ಧ್ವನಿಗೂಡಿಸಿದರು.
‘ಸಮಸ್ಯೆ ಪರಿಹರಿಸದಿದ್ದರೆ ಹೋರಾಟ’
ಕೊಳಗೇರಿಗಳಲ್ಲಿ ಪರಿಶಿಷ್ಟ ಜಾತಿಯ ಜನರೇ ಹೆಚ್ಚಿದ್ದಾರೆ. ಇಂತಹ ಜನರಿಗೆ ಮನೆಗಳನ್ನು ನಿರ್ಮಿಸಿಕೊಡದಿದ್ದರೆ ಹೇಗೆ? ನಗರಸಭೆ ಅಧ್ಯಕ್ಷರು ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನವಹಿಸಿ ಸಮಸ್ಯೆ ಪರಿಹರಿಸಬೇಕು. ಕೊಳಗೇರಿ ನಿವಾಸಿಗಳ ಜೊಯ ಹೋರಾಟ ನಡೆಸುತ್ತೇವೆ’ ಎಂದು ನಗರಸಭೆ ಸದಸ್ಯ ಸತೀಶ್ ಎಚ್ಚರಿಸಿದರು. ಮನೆ ನಿರ್ಮಾಣವಾಗದ ಕಾರಣ ಬಡವರು ಬಾಡಿಗೆ ಮನೆಗಳಲ್ಲಿ ಇದ್ದಾರೆ. ಬಾಡಿಕೆ ಕಟ್ಟಲು ಸಹ ಸಾಧ್ಯವಾಗುತ್ತಿಲ್ಲ. ಒಂದೊಂದು ಮನೆಯದ್ದೂ ಒಂದೊಂದು ರೀತಿ ಕಾಮಗಾರಿಗಳು ಆಗಿವೆ. ಬಡವರು ಮತ್ತು ಕೊಳಗೇರಿ ನಿವಾಸಿಗಳ ಸಮಸ್ಯೆಗಳನ್ನು ಮೊದಲು ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.