ADVERTISEMENT

ಸಮೀಕ್ಷೆಯಿಂದ ಪಡಿತರ ಚೀಟಿ ರದ್ದಾಗದು: ಜಿ.ಎನ್. ಶ್ರೀಕಂಠಯ್ಯ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 2:47 IST
Last Updated 1 ಅಕ್ಟೋಬರ್ 2025, 2:47 IST
ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ’ಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಜೆ.ಎನ್. ಶ್ರೀಕಂಠಯ್ಯ ಮಾತನಾಡಿದರು
ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ’ಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಜೆ.ಎನ್. ಶ್ರೀಕಂಠಯ್ಯ ಮಾತನಾಡಿದರು   

ಚಿಕ್ಕಬಳ್ಳಾಪುರ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ’ಯನ್ನು ಮಂಗಳವಾರ ಹಮ್ಮಿಕೊಳ್ಳಲಾಯಿತು. 

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಜಿ.ಎನ್. ಶ್ರೀಕಂಠಯ್ಯ ಮಾತನಾಡಿ, ‘ರಾಜ್ಯದಾದ್ಯಂತ ಚುರುಕಿನಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಿಂದ ಬಿಪಿಎಲ್ ಕಾರ್ಡ್ ಸೇರಿದಂತೆ ಯಾವುದೇ ರೀತಿಯ ಸೌಲಭ್ಯಗಳು ರದ್ದಾಗುವುದಿಲ್ಲ. ಈ ಬಗ್ಗೆ ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು’ ಎಂದು ಹೇಳಿದರು. 

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡುವುದರಿಂದ ಬಿಪಿಎಲ್ ಕಾರ್ಡ್ ಸೇರಿದಂತೆ ಇನ್ನಿತರ ಸೌಲಭ್ಯಗಳು ರದ್ದಾಗಲಿವೆ ಎಂದು ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಇಂಥ ಮಾತುಗಳಿಗೆ ಜನರು ಕಿವಿಗೊಡಬಾರದು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಮೀಕ್ಷೆ ಕಾರ್ಯ ಭರದಿಂದ ಸಾಗುತ್ತಿದ್ದು, ಪ್ರಗತಿ ಹರ್ಷದಾಯಕವಾಗಿದೆ. ಬೆಂಗಳೂರು ನಗರ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಮೀಕ್ಷಾ ಕಾರ್ಯ  ಚುರುಕಿನಿಂದ ಹಾಗೂ ಗುಣಾತ್ಮಕವಾಗಿ ಸಾಗುತ್ತಿದೆ ಎಂದು ಹೇಳಿದರು.

ADVERTISEMENT

ಸೆ. 22ರಂದು ಆರಂಭವಾದ ಸಮೀಕ್ಷಾ ಕಾರ್ಯವು ಆರಂಭದ 3 ದಿನಗಳಲ್ಲಿ ಕೆಲವು ಅನಿವಾರ್ಯ ಕಾರಣಗಳಿಂದ ನಿರೀಕ್ಷಿತ ಮಟ್ಟದ ಪ್ರಗತಿ ಕಾಣಲಿಲ್ಲ. ಪ್ರಸ್ತುತ ಎಲ್ಲ ಕಡೆ ಸಮೀಕ್ಷೆ ಬಹಳ ಸಮರ್ಪಕವಾಗಿ ಹಾಗೂ ಶರವೇಗದಲ್ಲಿ ನಡೆಯುತ್ತಿದೆ. ನಿಗದಿತ ಅ.7ರಂದು ಸಮೀಕ್ಷಾ ಕಾರ್ಯ ಪೂರ್ಣಗೊಳ್ಳುವ ಭರವಸೆ ಇದೆ ಎಂದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 3.20 ಲಕ್ಷ ಕುಟುಂಬಗಳನ್ನು ಸಮೀಕ್ಷೆಗೆ ಒಳಪಡಿಸಲು 2,913 ಬ್ಲಾಕ್‌ಗಳನ್ನು ಮಾಡಿ 2,879 ಸಮೀಕ್ಷೆದಾರರು ಹಾಗೂ 157 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಸಮೀಕ್ಷಾ ಕಾರ್ಯದ ಬಗ್ಗೆ ಜಾಗೃತಿ ಮೂಡಿಸಲು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎನ್.ಆರ್.ಎಲ್.ಎಂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಸಿಬ್ಬಂದಿ ಉತ್ತಮ ಕಾರ್ಯ ಮಾಡಿದ್ದಾರೆ ಎಂದರು.

ಸಮೀಕ್ಷೆದಾರರಾಗಿ ಕೆಲಸ ಮಾಡುತ್ತಿರುವ ಶಿಕ್ಷಕರು ಮತ್ತು ಇತರ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಡಳಿತದಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ. ಇದೇ ರೀತಿ ಸಮನ್ವಯತೆಯಿಂದ ತಂಡದ ರೀತಿ ಕೆಲಸ ಮಾಡಬೇಕು. ಈ ಮೂಲಕ ನಿಗದಿತ ಅವಧಿಯೊಳಗೆ ಸಮೀಕ್ಷಾ ಕಾರ್ಯ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಸೆಪ್ಟೆಂಬರ್ 30ರವರೆಗೆ 1,09,111 ಕುಟುಂಬಗಳ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಈ ವೇಳೆ ಜಿಲ್ಲಾಧಿಕಾರಿ ಮಾತನಾಡಿ, ದಿನದಿಂದ ದಿನಕ್ಕೆ ಸಮೀಕ್ಷಾ ಕಾರ್ಯದ ವೇಗ ಹೆಚ್ಚುತ್ತಿದೆ. ಕಳೆದ ಶನಿವಾರ 25,000, ಭಾನುವಾರ 32,071 ಮನೆಗಳ ಸಮೀಕ್ಷೆ ಮಾಡಲಾಗಿದೆ. ಮಂಗಳವಾರ 35 ಸಾವಿರಕ್ಕೂ ಹೆಚ್ಚು ಮನೆಗಳ ಸಮೀಕ್ಷೆ ಕಾರ್ಯ ಆಗಿದೆ ಎಂದರು.

ಸಿರ್ಬಿ ಜಾತಿ ನಮೂದಿಲ್ಲ

ಪ್ರಸ್ತುತ ನಡೆಯುತ್ತಿರುವ ಸಮೀಕ್ಷೆಯಲ್ಲಿ ಜಾತಿಗಳ ಪಟ್ಟಿಯಲ್ಲಿ ಸಿರ್ಬಿ ಜಾತಿ ನಮೂದಾಗಿಲ್ಲ. ಸಿರ್ಬಿ ಜಾತಿಯ ಒಂದು ಕುಟುಂಬ ಜಿಲ್ಲೆಯಲ್ಲಿ ಕಂಡುಬಂದಿದ್ದು, ಈ ಕುಟುಂಬದವರನ್ನು ಸೇರ್ಪಡೆ ಮಾಡಲು ಆಯೋಗದಿಂದ ಕ್ರಮ ತೆಗೆದುಕಿಕೊಳ್ಳಲಾಗುವುದು. ಈ ಕುರಿತು ಜಿಲ್ಲಾಡಳಿತವು ಗಮನಕ್ಕೆ ತಂದಿದ್ದು, ಅಗತ್ಯ ಕ್ರಮ ವಹಿಸಲಾಗುವುದು ಎಂದು ಜಿ.ಎನ್. ಶ್ರೀಕಂಠಯ್ಯ ಹೇಳಿದರು.

ಗುಣಾತ್ಮಕವಾಗಿರಲಿ

ಸಮೀಕ್ಷಾ ಕಾರ್ಯವನ್ನು ಕರಾರುವಕ್ಕಾಗಿ ಮಾಡಲು ಅಗತ್ಯ ತರಬೇತಿ, ಸಿದ್ಧತೆ ಮಾಡಿಕೊಂಡಿರುವ ಆಯೋಗವು, ಕಾಲೋಚಿತವಾಗಿ ನಿರ್ದೇಶನ ನೀಡುತ್ತಿದೆ. ಮೇಲ್ವಿಚಾರಕರು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಮೀಕ್ಷಾ ಕಾರ್ಯವನ್ನು ಕ್ಷೇತ್ರ ಮಟ್ಟದಲ್ಲಿ ಪರಿಶೀಲಿಸಬೇಕು. ನಾನು ಸಹ ಜಿಲ್ಲೆಯ ಚಿಂತಾಮಣಿ, ಶಿಡ್ಲಘಟ್ಟ ಹಾಗೂ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಪರಿಶೀಲಿಸಿದ್ದೇನೆ. ಸಮೀಕ್ಷಾ ಕಾರ್ಯ ಸಮರ್ಪಕವಾಗಿ ಹಾಗೂ ಗುಣಾತ್ಮಕವಾಗಿ ಆಗುತ್ತಿದೆ ಎಂದು ಜಿ.ಎನ್. ಶ್ರೀಕಂಠಯ್ಯ ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ವೈ.ನವೀನ್ ಭಟ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮುನಿರತ್ನಮ್ಮ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.