ADVERTISEMENT

ಶೀಘ್ರದಲ್ಲೇ ಕೋಚಿಮುಲ್, ಡಿಸಿಸಿ ಬ್ಯಾಂಕ್ ಪ್ರತ್ಯೇಕ: ಡಾ.ಕೆ.ಸುಧಾಕರ್

ತಾಂಡ್ರಮರದಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 12:13 IST
Last Updated 13 ಫೆಬ್ರುವರಿ 2020, 12:13 IST
ಸಚಿವ ಡಾ.ಕೆ.ಸುಧಾಕರ್ ಅವರು ತಾಂಡ್ರಮರದಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿದರು.
ಸಚಿವ ಡಾ.ಕೆ.ಸುಧಾಕರ್ ಅವರು ತಾಂಡ್ರಮರದಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿದರು.   

ಚಿಕ್ಕಬಳ್ಳಾಪುರ: ‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿರುವ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಕೋಚಿಮುಲ್‌) ಮತ್ತು ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್‌ನ್ನು ಆದಷ್ಟು ಬೇಗ ಕೋಲಾರದಿಂದ ಪ್ರತ್ಯೇಕಿಸಲಾಗುತ್ತದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ತಾಲ್ಲೂಕಿನ ತಾಂಡ್ರಮರದಹಳ್ಳಿಯಲ್ಲಿ ಗುರುವಾರ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆ ಮತ್ತು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ಗ್ರಾಮದಲ್ಲಿ ₹5 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿರುವ ಕಾಂಕ್ರಿಟ್‌ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೋಲಾರದಿಂದ ಕೋಚಿಮುಲ್, ಡಿಸಿಸಿ ಬ್ಯಾಂಕ್‌ ಪ್ರತ್ಯೇಕಗೊಳಿಸಬೇಕು ಎಂದು ಬೇಡಿಕೆ ಅನೇಕ ವರ್ಷಗಳಿಂದ ಕೇಳಿ ಬರುತ್ತಿವೆ. ಪ್ರತ್ಯೇಕಿಸಲು ಕೆಲ ತಾಂತ್ರಿಕ ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸಲು ಕಳೆದ ಮೂರು ತಿಂಗಳಿಂದ ಅನೇಕ ಸಚಿವರ ಜತೆಗೆ ಚರ್ಚೆ ನಡೆಸಿದ್ದೇವೆ. ಆದಷ್ಟು ಬೇಗ ಪ್ರತ್ಯೇಕಿಸಲಾಗುತ್ತದೆ. ಇದರಿಂದ ನಮ್ಮ ಭಾಗದ ಜನರಿಗೆ ಹೆಚ್ಚಿನ ಪ್ರಯೋಜನವಾಗಲಿದೆ’ ಎಂದು ತಿಳಿಸಿದರು.

ADVERTISEMENT

‘ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯಲ್ಲಿ ಕಾರಣ ನೀರಿನ ಅಭಾವದ ಕಾರಣದಿಂದಾಗಿ ಹೈನುಗಾರಿಕೆ ಉಪಕಸಬು ಎನ್ನುವುದಕ್ಕಿಂತಲೂ ಹೆಚ್ಚಾಗಿ ನಿಜವಾದ ಜೀವನಾಡಿಯಾಗಿದೆ. ನೀರಿನ ಬವಣೆ ತಪ್ಪಿಸುವ ನಿಟ್ಟಿನಲ್ಲಿ ಕೊಟ್ಟ ಮಾತಿನಂತೆ ಎಚ್‌.ಎನ್.ವ್ಯಾಲಿ ಯೋಜನೆ ಅಡಿ ಈಗಾಗಲೇ ಕಂದವಾರ ಕೆರೆಗೆ ನೀರು ಹರಿಸುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಕೆರೆಗಳನ್ನು ತುಂಬುವ ಕೆಲಸ ಮಾಡುತ್ತೇನೆ’ ಎಂದರು.

‘ರೈತರು ಸಂತೃಪ್ತಿಯಿಂದ ಇರಬೇಕಾದರೆ ಹಾಲಿನ ಉತ್ಪಾದನೆ ಹೆಚ್ಚಬೇಕು. ಬೂಸಾ, ಚಕ್ಕೆ ಬೆಲೆ ಕಡಿಮೆ ಆಗಿ, ರೈತರಿಗೆ ಹೆಚ್ಚಿನ ಆದಾಯ ಸಿಗಬೇಕು. ಇಲ್ಲದಿದ್ದರೆ ಹೈನುಗಾರಿಕೆ ಲಾಭದಾಯಕವಾಗುವುದಿಲ್ಲ. ಇದೇ ಕಾರಣಕ್ಕೆ ಈಗಾಗಲೇ ಜಿಲ್ಲೆಯಲ್ಲಿ ಎರಡು ಲಕ್ಷ ಲೀಟರ್‌ ಹಾಲಿನ ಉತ್ಪಾದನೆ ಇಳಿಕೆಯಾಗಿದೆ. ಹಾಲಿನ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕಿದೆ’ ಎಂದು ಹೇಳಿದರು.

‘ಉತ್ತರ ಕರ್ನಾಟಕ ಭಾಗದಲ್ಲಿ ಸಹಕಾರ ಕ್ಷೇತ್ರ ಮುಂದುವರಿದಿದೆ. ನಮ್ಮಲ್ಲಿ ರಾಜಕೀಯ ಪ್ರಜ್ಞೆ ಹೆಚ್ಚಿದ್ದರೂ ನಮ್ಮ ಸಹಕಾರ ಕ್ಷೇತ್ರ ಹಿಂದೆ ಉಳಿದಿರುವುದು ಯಕ್ಷಪ್ರಶ್ನೆಯಾಗಿದೆ. ರೈತರೆಲ್ಲರೂ ಸಹಕಾರ ಕ್ಷೇತ್ರದಲ್ಲಿ ಒಟ್ಟಾಗಿ ಕೆಲಸ ಮಾಡುತ್ತ ಉಳಿದೆಲ್ಲ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಮುಂದೆ ಬರಬೇಕಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರ ಸಂಘಗಳ ರಚನೆ ಮಾಡಬೇಕಿದೆ’ ಎಂದು ತಿಳಿಸಿದರು.

‘ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದ್ರಾಕ್ಷಿ, ಹೂವು ಬೆಳೆಯಲಾಗುತ್ತದೆ. ಹೀಗಾಗಿ, ದ್ರಾಕ್ಷಿ, ಹೂವು ಬೆಳೆಗಾರರ ಸಂಘ ರಚಿಸಿ, ಪ್ರತ್ಯೇಕ ಬ್ಯಾಂಕ್‌ ಸ್ಥಾಪಿಸುವ ಅಗತ್ಯವಿದೆ. ಆ ಮೂಲಕ ನಬಾರ್ಡ್‌ನಿಂದ ಕಡಿಮೆ ಬಡ್ಡಿ ದರದಲ್ಲಿ ರೈತರಿಗೆ ಹೆಚ್ಚಿನ ಸಾಲಸೌಲಭ್ಯ ಒದಗಿಸಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಆ ಕೆಲಸ ಮಾಡೋಣ’ ಎಂದರು.

‘ಈ ಭಾಗದಲ್ಲಿ ಏನೆಲ್ಲ ಅಭಿವೃದ್ಧಿಯಾಗಬೇಕೋ ಮುಂದಿನ ದಿನಗಳಲ್ಲಿ ಮಾಡಿ ಕೊಡುತ್ತೇನೆ. ಈ ಸಂಘಕ್ಕೆ ₹3 ಲಕ್ಷ ಅನುದಾನ ಬಿಡುಗಡೆ ಮಾಡಲು ಹೇಳಿರುವೆ. ಉತ್ತಮವಾದ ಕಟ್ಟಡ ನಿರ್ಮಿಸಲಾಗಿದೆ. ಸಂಘವನ್ನು ಚೆನ್ನಾಗಿ ನಿರ್ವಹಿಸಿಕೊಂಡು ಹೆಚ್ಚಿನ ಆದಾಯ ಗಳಿಸಿ, ರೈತರಿಗೆ ಹಂಚುವ ಕೆಲಸ ಮಾಡಿ’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮೀನಾ ದೇವರಾಜ್, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ಮುಖಂಡರಾದ ಕೆ.ವಿ.ನಾಗರಾಜ್, ಮರಳಕುಂಟೆ ಕೃಷ್ಣಮೂರ್ತಿ, ಮೋಹನ್, ಮುನಿರೆಡ್ಡಿ, ನಾಗರಾಜ್, ಗಿಡ್ನಹಳ್ಳಿ ನಾರಾಯಣಸ್ವಾಮಿ, ಕೃಷ್ಣಾರೆಡ್ಡಿ, ಕೋಚಿಮುಲ್ ಉಪ ವ್ಯವಸ್ಥಾಪಕ ಪಾಪೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.