ADVERTISEMENT

ದೈಹಿಕ ಸಂಪತ್ತಿಗೆ ಕ್ರೀಡೆ ಮುಕುಟಮಣಿ: ಮಂಗಳನಾಥ ಸ್ವಾಮೀಜಿ

ಬಾಲಗಂಗಾಧರನಾಥ ಸ್ವಾಮೀಜಿ ಜನ್ಮದಿನದ ಪ್ರಯುಕ್ತ ಮಂಚನಬಲೆ ಬಿಜಿಎಸ್ ಶಾಲೆಯಲ್ಲಿ ಜಿಲ್ಲಾಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 13:08 IST
Last Updated 23 ಜನವರಿ 2020, 13:08 IST
ಓಟದ ಸ್ಪರ್ಧೆಯಲ್ಲಿ ಗುರಿಯತ್ತ ಮುನ್ನುಗಿದ ವಿದ್ಯಾರ್ಥಿಗಳು
ಓಟದ ಸ್ಪರ್ಧೆಯಲ್ಲಿ ಗುರಿಯತ್ತ ಮುನ್ನುಗಿದ ವಿದ್ಯಾರ್ಥಿಗಳು   

ಚಿಕ್ಕಬಳ್ಳಾಪುರ: ‘ಸದೃಢ ದೇಹದಲ್ಲಿ ಆರೋಗ್ಯ ಪೂರ್ಣ ಮನಸ್ಸು ಸದಾ ಜಾಗೃತವಾಗಿರುತ್ತದೆ. ದೈಹಿಕ ಸಂಪತ್ತಿಗೆ ಕ್ರೀಡೆ ಮುಕುಟಮಣಿಯಂತೆ. ಆರೋಗ್ಯ ಮೂಲದ ಗುಟ್ಟು ಅರಿತವರು ಕ್ರೀಡೆಗೆ ಮಹತ್ವ ನೀಡುತ್ತಾರೆ. ಮಕ್ಕಳು ಆರೋಗ್ಯವಂತರಾಗಿರಲು ಆಟೋಟಗಳು ಬಹಳ ಅವಶ್ಯಕ’ ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಪೀಠಾಧ್ಯಕ್ಷ ಮಂಗಳನಾಥ ಸ್ವಾಮೀಜಿ ಹೇಳಿದರು.

ಬಾಲಗಂಗಾಧರನಾಥ ಸ್ವಾಮೀಜಿ ಅವರ 75ನೇ ಜನ್ಮದಿನದ ಪ್ರಯುಕ್ತ ತಾಲ್ಲೂಕಿನ ಮಂಚನಬಲೆಯ ಬಿಜಿಎಸ್ ಶಾಲೆಯಲ್ಲಿ ಗುರುವಾರ ಹಿರಿಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್‌ ಅವರು ಆಯೋಜಿಸಿದ್ದ ಜಿಲ್ಲಾಮಟ್ಟದ ಗುಡ್ಡಗಾಡು (ಕ್ರಾಸ್‌ ಕಂಟ್ರಿ) ಓಟದ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ, ಮಾನಸಿಕವಾಗಿ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ. ದೊಡ್ಡವರಾದ ಮೇಲೆ ಆಟವಾಡಲು ಆಗುವುದಿಲ್ಲ. ಆದ್ದರಿಂದ ಚಿಕ್ಕವರಿರುವಾಗಲೇ ಮಕ್ಕಳು ಮನಸ್ಸಿಗೆ ಮುದ ನೀಡುವ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಆಟವಾಡಬೇಕು. ಗ್ರಾಮೀಣ ಭಾಗದ ಮಕ್ಕಳು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳದೆ ಸದಾ ಓದಿನ ಭಯದಲ್ಲೇ ಇರುತ್ತಾರೆ. ಅದು ಸರಿಯಲ್ಲ. ಓದಿನಷ್ಟೇ ಕ್ರೀಡೆಗೂ ಮಹತ್ವ ನೀಡಬೇಕು’ ಎಂದು ತಿಳಿಸಿದರು.

ADVERTISEMENT

‘ಮನುಷ್ಯನ ದೇಹ ಮತ್ತು ಮನಸ್ಸಿನ ಸಮತೋಲನ ಸಾಧಿಸುವಲ್ಲಿ ಕ್ರೀಡೆಯ ಪ್ರಾಮುಖ್ಯ ಬಹಳಷ್ಟಿದೆ. ಮಕ್ಕಳು ಚಿಕ್ಕಂದಿನಲ್ಲೇ ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿಸಿದರೆ ಸದೃಢವಾದ ವ್ಯಕ್ತಿ ಮತ್ತು ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ಏಕಾಗ್ರತೆ, ಶಿಸ್ತು, ಸಮಯ ಪ್ರಜ್ಞೆ ಅಳವಡಿಸಿಕೊಂಡಾಗ ಮಾತ್ರ ಭವಿಷ್ಯದ ಜೀವನದ ಯಶಸ್ವಿಯಾಗುತ್ತದೆ’ ಎಂದರು.

ಬಿಜಿಎಸ್‌ ಶಿಕ್ಷಣ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಎನ್‌.ಶಿವರಾಂ ರೆಡ್ಡಿ ಮಾತನಾಡಿ, ‘ಕ್ರೀಡೆಗಳಲ್ಲಿ ಮುಂದೆ ಇರುವವರು ಶೈಕ್ಷಣಿಕವಾಗಿ ಹಿಂದುಳಿದಿರುತ್ತಾರೆ ಎಂಬ ಒಂದು ನಂಬಿಕೆ ಇದೆ. ಅದು ನಿಜವಲ್ಲ. ಪಠ್ಯ ಮತ್ತು ಪಠ್ಯೇತರ ಎರಡರಲ್ಲೂ ಪ್ರತಿಭಾವಂತರು ಸಾಕಷ್ಟು ಜನರಿದ್ದಾರೆ. ಬರೀ ಓದಿಗೆ ಸೀಮಿತರಾಗದೆ ಎರಡನ್ನು ಸಮತೋಲನ ಮಾಡಿಕೊಂಡು ಮುಂದೆ ಸಾಗಬೇಕು. ಪೋಷಕರು ತಮ್ಮ ಮಕ್ಕಳನ್ನು ಕ್ರೀಡೆ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು’ ಎಂದು ತಿಳಿಸಿದರು.

‘ಕ್ರೀಡೆ ದೈನಂದಿನ ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸುವ ಕಲೆ ಕಲಿಸುತ್ತದೆ. ದೈಹಿಕ ಮತ್ತು ಮಾನಸಿಕವಾಗಿ ಕ್ರಿಯಾಶೀಲರಾಗಿರಲು ಕ್ರೀಡೆ ಬಹು ಮುಖ್ಯ. ಗೆದ್ದವರು ಗೆಲುವನ್ನು ಕಾಯ್ದುಕೊಳ್ಳಬೇಕು. ಸೋತವರು ಆತ್ಮವಿಶ್ವಾಸ ಕಳೆದುಕೊಳ್ಳದೆ ಗೆಲ್ಲುವ ಛಲ ಬೆಳೆಸಿಕೊಳ್ಳಬೇಕು. ಗೆಲುವು ಮತ್ತು ಸೋಲನ್ನು ಸಮಚಿತ್ತದಿಂದ ಸ್ವೀಕರಿಸುವ ಮನಸ್ಥಿತಿ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು’ ಎಂದರು.

ಸ್ಪರ್ಧೆಯಲ್ಲಿ ಸುಮಾರು 200 ವಿದ್ಯಾರ್ಥಿಗಳು ಭಾಗವಹಿಸಿದ್ದರು.16 ವರ್ಷ ವಯೋಮಿತಿಯ ಬಾಲಕರಿಗೆ 2 ಕಿ.ಮೀ, ಬಾಲಕಿಯರಿಗೆ 1 ಕಿ.ಮೀ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಮೊದಲ ಐದು ಸ್ಥಾನಗಳನ್ನು ಪಡೆದ ಕ್ರೀಡಾಪಟುಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಸಾಹಿತಿ ಶಿವರಾಂ, ಕ್ರೀಡಾಪಟುಗಳಾದ ಮಂಚನಬಲೆ ಶ್ರೀನಿವಾಸ್, ಜಯಂತಿ ಗ್ರಾಮದ ನಾರಾಯಣಸ್ವಾಮಿ, ಮುಖ್ಯ ಶಿಕ್ಷಕ ಗಂಗಾಧರ್, ಪತ್ರಕರ್ತ ನಾರಾಯಣಸ್ವಾಮಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.