ADVERTISEMENT

ಚಿಕ್ಕಬಳ್ಳಾಪುರ | ಪಟಾಕಿ ಅಂಗಡಿಯಾದ ಕ್ರೀಡಾಂಗಣ: ಕ್ರೀಡಾಪಟುಗಳ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 6:54 IST
Last Updated 26 ಅಕ್ಟೋಬರ್ 2025, 6:54 IST
ಜಿಲ್ಲಾ ಕ್ರೀಡಾಂಗಣದಲ್ಲಿ ಪಟಾಕಿ ಅಂಗಡಿಗಳನ್ನಿಟ್ಟ ಸ್ಥಳದ ಸ್ಥಿತಿ
ಜಿಲ್ಲಾ ಕ್ರೀಡಾಂಗಣದಲ್ಲಿ ಪಟಾಕಿ ಅಂಗಡಿಗಳನ್ನಿಟ್ಟ ಸ್ಥಳದ ಸ್ಥಿತಿ   

ಚಿಕ್ಕಬಳ್ಳಾಪುರ: ‘ಛೇ...ಹೇಗಿತ್ತು ಈ ಸ್ಥಳ. ಇಲ್ಲಿ ಈಗ ಆಟವಾಡಲು ಸಾಧ್ಯವೇ. ಅಧಿಕಾರಿಗಳಿಗೆ ಜವಾಬ್ದಾರಿ ಬೇಡವೇ. ಈ ಹಿಂದಿನ ವರ್ಷಗಳಲ್ಲಿ ನೀಡಿದಂತೆ ಕ್ರೀಡಾಂಗಣದ ಮುಂಭಾಗದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಬೇಕಾಗಿತ್ತು’–ಹೀಗೆ ಶನಿವಾರ ಬೆಳಿಗ್ಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವಾಯು ವಿಹಾರಕ್ಕೆ ಬಂದಿದ್ದವರು ಅಸಮಾಧಾನ ವ್ಯಕ್ತಪಡಿಸಿದ್ದರು.

ದೀಪಾವಳಿ ಅಂಗವಾಗಿ ಸರ್‌ ಎಂ.ವಿ ಜಿಲ್ಲಾ ಕ್ರೀಡಾಂಗಣದಲ್ಲಿ ಪಟಾಕಿ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ಹಬ್ಬ ಮುಗಿದ ನಂತರ ಈ ಪಟಾಕಿ ಅಂಗಡಿಗಳು ಇಲ್ಲಿಂದ ತೆರವುಗೊಂಡವು. 

ಆದರೆ ಆ ತೆರವಾದ ಸ್ಥಳದಲ್ಲಿನ ಚಿತ್ರಣ ನಾಗರಿಕರಲ್ಲಿ ಬೇಸರ ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ. ಕ್ರೀಡಾಂಗಣದ ಪೆವಿಲಿಯನ್‌ನ ಪಕ್ಕದಲ್ಲಿರುವ ಜಾಗದಲ್ಲಿ ಪಟಾಕಿ ಅಂಗಡಿಗಳನ್ನು ಹಾಕಿಕೊಳ್ಳಲು ಅವಕಾಶ ನೀಡಲಾಗಿತ್ತು. 

ADVERTISEMENT

ಐದಾರು ದಿನ ವ್ಯಾಪಾರ ನಡೆಸಿ ವ್ಯಾಪಾರಿಗಳು ಅಲ್ಲಿಂದ ಕಾಲ್ಕಿತ್ತರು. ಆದರೆ ಈ ಮುಂಚೆ ಇದ್ದ ಸ್ಥಿತಿ ಮತ್ತು ಇಂದಿನ ಸ್ಥಿತಿಯನ್ನು ನೋಡಿದರೆ ‘ಇಲ್ಲಿ ಏಕಾದರೂ ಪಟಾಕಿ ಅಂಗಡಿಗೆ ಅವಕಾಶ ನೀಡಿದರೊ’ ಎನ್ನುವಂತಿತ್ತು.

ಇಡೀ ಆವರಣ ಕೆಸರು ಗದ್ದೆಯಂತೆ ಆಗಿದೆ. ಅಲ್ಲದೆ ಮದ್ಯದ ಬಾಟಲಿಗಳು ರಾಶಿ ರಾಶಿಯಾಗಿ ಬಿದ್ದಿವೆ. ಪೇಪರ್, ಕಸರದ ರಾಶಿಯೂ ಹೆಚ್ಚಿದೆ. ಈ ಸ್ಥಳದಲ್ಲಿ ಆಟಗಳಿಗೆ ನೆಟ್ಟಿದ್ದ ಕಂಬಗಳೂ ಡೊಂಕಿವೆ. 

ಇಲ್ಲಿ ಬೆಳಿಗ್ಗೆ ವಾಯು ವಿಹಾರಕ್ಕೆ ಬಂದವರು ಫುಟ್‌ಬಾಲ್ ಆಡುತ್ತಿದ್ದರು. ಮಕ್ಕಳು ಕ್ರಿಕೆಟ್ ಆಡುತ್ತಿದ್ದರು. ಆಟಕ್ಕೆ ಇದು ಪ್ರಶಸ್ತ ಎನ್ನುವಂತಿತ್ತು. ಆದರೆ ಈಗ ಆ ಜಾಗ ಅಧ್ವಾನ ಎನ್ನುವಂತಿದೆ. ವಾಯು ವಿಹಾರಕ್ಕೆ ಬಂದವರು ಇಲ್ಲಿನ ಸ್ಥಿತಿ ನೋಡಿ ಅಸಮಾಧಾನ ಹೊರಹಾಕಿದರು.

ಈ ಹಿಂದಿನ ವರ್ಷ ಮಾಧ್ಯಮದವರು ಸ್ಥಳಕ್ಕೆ ಭೇಟಿ ನೀಡಿ ಚಿತ್ರಗಳನ್ನು ತೆಗೆದ ನಂತರ ಸ್ಥಳವನ್ನು ಸ್ವಚ್ಛಗೊಳಿಸುವ ಕೆಲಸ ನಡೆಯಿತು. 

ಕಸ ಮತ್ತು ಬಿಯರ್ ಬಾಟಲಿಗಳು
ಪಟಾಕಿ ಅಂಗಡಿಗಳನ್ನಿಟ್ಟ ಜಾಗದ ಸ್ಥಿತಿ

‘ಕನಿಷ್ಠ ಪ್ರಜ್ಞೆಯೂ ಇಲ್ಲ’

ಕ್ರೀಡಾಂಗಣ ಈ ಹಿಂದಿನಿಂದಲೂ ಅಧ್ವಾನ ಎನ್ನುವಂತೆ ಇದೆ. ಅದರ ನಡುವೆಯೂ ಇಲ್ಲಿ ಚಟುವಟಿಕೆಗಳು ನಡೆಯುತ್ತಿದ್ದವು. ಆದರೆ ಇಲ್ಲಿ ಪಟಾಕಿ ಅಂಗಡಿಗಳಿಗೆ ಅವಕಾಶ ನೀಡಬಾರದಿತ್ತು’ ಎಂದು ಅಥ್ಲೆಟಿಕ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಮಂಚನಬಲೆ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು. ಪಟಾಕಿ ಅಂಗಡಿಗಳನ್ನು ಇಟ್ಟ ಸ್ಥಳ ಕೆಸರು ಗದ್ದೆಯಾಗಿದೆ. ಈ ಮುಂಚಿನ ಸ್ಥಿತಿಗೆ ಬರಬೇಕು ಎಂದರೆ ಅಲ್ಲಿನ ಕೆಸರು ಕಸ ಮಣ್ಣನ್ನು ತೆರವುಗೊಳಿಸಬೇಕು. ಇನ್ನಾದರೂ ಅನ್ಯ ಚಟುವಟಿಕೆಗಳಿಗೆ ಇಲ್ಲಿ ಅವಕಾಶ ನೀಡಬಾರದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.