ADVERTISEMENT

ಒತ್ತಡ ನಿವಾರಣೆಗೆ ಕ್ರೀಡೆ ಮದ್ದು: ಶಾಸಕ ಎಂ. ಕೃಷ್ಣಾರೆಡ್ಡಿ

ಸರ್ಕಾರಿ ನೌಕರರ ಸಂಘದಿಂದ ತಾಲ್ಲೂಕುಮಟ್ಟದ ಕ್ರೀಡಾಕೂಟ ಆಯೋಜನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 2:56 IST
Last Updated 14 ಫೆಬ್ರುವರಿ 2021, 2:56 IST
ಚಿಂತಾಮಣಿಯಲ್ಲಿ ಶನಿವಾರ ಆಯೋಜಿಸಿದ್ದ ಸರ್ಕಾರಿ ನೌಕರರ ತಾಲ್ಲೂಕುಮಟ್ಟದ ಕ್ರೀಡಾಕೂಟವನ್ನು ಶಾಸಕ ಎಂ. ಕೃಷ್ಣಾರೆಡ್ಡಿ ಗುಂಡು ಎಸೆಯುವ ಮೂಲಕ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ರೇಖಾ ಉಮೇಶ್ ಇದ್ದರು
ಚಿಂತಾಮಣಿಯಲ್ಲಿ ಶನಿವಾರ ಆಯೋಜಿಸಿದ್ದ ಸರ್ಕಾರಿ ನೌಕರರ ತಾಲ್ಲೂಕುಮಟ್ಟದ ಕ್ರೀಡಾಕೂಟವನ್ನು ಶಾಸಕ ಎಂ. ಕೃಷ್ಣಾರೆಡ್ಡಿ ಗುಂಡು ಎಸೆಯುವ ಮೂಲಕ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ರೇಖಾ ಉಮೇಶ್ ಇದ್ದರು   

ಚಿಂತಾಮಣಿ: ಸರ್ಕಾರಿ ನೌಕರರು ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಒತ್ತಡದಿಂದ ಮುಕ್ತರಾಗಲು ನಿಯಮಿತವಾಗಿ ಕ್ರೀಡೆಗಳಲ್ಲಿ ಭಾಗವಹಿಸುವುದು ಅವಶ್ಯಕ ಎಂದು ಶಾಸಕ ಎಂ. ಕೃಷ್ಣಾರೆಡ್ಡಿ ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದಿಂದ ನಗರದ ಝಾನ್ಸಿ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನೌಕರರು ಸದಾ ಯಾವುದಾದರೊಂದು ಕ್ರೀಡೆಯಲ್ಲಿ ಕಡ್ಡಾಯವಾಗಿ ತೊಡಗಿಸಿಕೊಳ್ಳಬೇಕು. ದಿನನಿತ್ಯ ವ್ಯಾಯಾಮ, ಯೋಗ, ಪ್ರಾಣಾಯಾಮ ಮಾಡುವುದು ಆರೋಗ್ಯಕ್ಕೆ ಬಹಳ ಮುಖ್ಯ. ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿದ್ದರೆ ಚೆನ್ನಾಗಿ ಕೆಲಸ ಮಾಡಬಹುದು ಎಂದರು.

ADVERTISEMENT

ಸಾರ್ವಜನಿಕರೊಂದಿಗೆ ಉತ್ತಮವಾಗಿ ಸಂಬಂಧ ಇರಬೇಕು. ಸಂಪರ್ಕ ಸಾಧಿಸಿ ಅವರ ಕೆಲಸ ಮಾಡಿಕೊಡುವ ಮೂಲಕ ಒಳ್ಳೆಯ ಹೆಸರನ್ನು ಪಡೆಯಬೇಕು. ತಾಲ್ಲೂಕು ಮಟ್ಟದಿಂದ ಆಯ್ಕೆಯಾಗಿ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲೂ ಭಾಗವಹಿಸಿ ತಾಲ್ಲೂಕಿಗೆ ಕೀರ್ತಿ ತರಬೇಕು ಎಂದು ಹಾರೈಸಿದರು.

ನಗರಸಭೆ ಅಧ್ಯಕ್ಷೆ ರೇಖಾ ಉಮೇಶ್ ಮಾತನಾಡಿ, ನೌಕರರು ಪ್ರತಿನಿತ್ಯ ಒತ್ತಡದಲ್ಲಿ ಸಿಲುಕಿರುತ್ತಾರೆ. ಹೀಗಾಗಿ ಅವರು ಆರೋಗ್ಯದ ಕಡೆಗೂ ಹೆಚ್ಚಿನ ಗಮನಹರಿಸಬೇಕು. ಕೆಲಸದ ಒತ್ತಡದಿಂದ ಅವರಿಗೆ ಸಮಯವೂ ಸಿಗುವುದಿಲ್ಲ. ವರ್ಷಕ್ಕೆ 2ರಿಂದ 3 ಬಾರಿಯಾದರೂ ಸ್ಥಳೀಯವಾಗಿ ಕ್ರೀಡಾಕೂಟಗಳನ್ನು ಏರ್ಪಡಿಸಿದರೆ ಅನುಕೂಲವಾಗುತ್ತದೆ. ಕ್ರೀಡಾಕೂಟದಲ್ಲಿ ಭಾಗ ವಹಿಸುವುದರಿಂದ ಉತ್ಸಾಹ, ಚೈತನ್ಯ ಮೂಡುತ್ತದೆ ಎಂದು ಹೇಳಿದರು.

ಸಂಘದ ಅಧ್ಯಕ್ಷ ಜನಾರ್ದನ ರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಸುಮಾರು 1.50 ಲಕ್ಷ ನೌಕರರ ಹುದ್ದೆಗಳು ಖಾಲಿ ಇವೆ. ಇರುವ ನೌಕರರೇ ಹೆಚ್ಚಿನ ಹೊರೆ ನಿರ್ವಹಿಸುತ್ತಿದ್ದಾರೆ. ಸರ್ಕಾರ ಪ್ರತಿವರ್ಷ ಸರ್ಕಾರಿ ನೌಕರರ ದಿನಾಚರಣೆ ಆಚರಿಸಲು ಆದೇಶ ಮಾಡಿದೆ. ನೌಕರರು ಅಕಾಲಿಕವಾಗಿ ಮರಣ ಹೊಂದಿದರೆ ಶವ ಸಂಸ್ಕಾರಕ್ಕಾಗಿ ನೀಡುತ್ತಿದ್ದ ಹಣವನ್ನು ₹ 5 ಸಾವಿರದಿಂದ ₹ 15 ಸಾವಿರಕ್ಕೆ ಏರಿಸಲಾಗಿದೆ. ಸಾಂದರ್ಭಿಕ ರಜೆವನ್ನು 10 ರಿಂದ 15 ದಿನಗಳಿಗೆ ಏರಿಸಲಾಗಿದೆ. ರದ್ದು ಮಾಡಿದ್ದ ರಜೆ ನಗದೀಕರಣ ಸೌಲಭ್ಯವನ್ನು ಮತ್ತೆ ಮಂಜೂರು ಮಾಡಿದೆ ಎಂದು ತಿಳಿಸಿದರು.

ಎನ್‌ಪಿಎಸ್ ರದ್ದು ಮಾಡಿ ಓಪಿಎಸ್ ಜಾರಿಗೆ ತರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವೇತನ ತಾರತಮ್ಯ ನಿವಾರಣೆಯಾಗಬೇಕು. ದೇಶದ ತೆಲಂಗಾಣದಲ್ಲಿ ಅತಿಹೆಚ್ಚು ಹಾಗೂ ರಾಜ್ಯದಲ್ಲಿ ಅತಿ ಕಡಿಮೆ ವೇತನ ನೀಡಲಾಗುತ್ತಿದೆ. ರಾಜ್ಯ ಸರ್ಕಾರಿ ನೌಕರರ ಸಂಘ ತಾರತಮ್ಯದ ನಿವಾರಣೆಗಾಗಿ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. 2023ಕ್ಕೆ ವೇತನ ತಾರತಮ್ಯ ನಿವಾರಣೆಯಾಗುವ ಭರವಸೆ ಸಿಕ್ಕಿದೆ. ಸಾರ್ವಜನಿಕರು ಸರ್ಕಾರಿ ನೌಕರರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಾವು ಹಕ್ಕುಗಳು, ಬೇಡಿಕೆಗಳನ್ನು ಕೇಳುವ ಜೊತೆಗೆ ಕರ್ತವ್ಯವನ್ನು ಪಾಲಿಸಬೇಕು ಎಂದರು.

ತಹಶೀಲ್ದಾರ್ ಹನುಮಂತರಾಯಪ್ಪ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ನಾರಾಯಣಸ್ವಾಮಿ, ಕಾರ್ಯ ನಿರ್ವಹಣಾಧಿಕಾರಿ ಜಿ.ಆರ್. ಮಂಜುನಾಥ್, ನಗರಸಭೆ ಪೌರಾಯುಕ್ತ ಉಮಾಶಂಕರ್, ನೌಕರರ ಸಂಘದ ನಿರ್ದೇಶಕ ಮುನಿರೆಡ್ಡಿ, ನಗರ ಠಾಣೆಯ ಇನ್‌ಸ್ಪೆಕ್ಟರ್ ಆನಂದಕುಮಾರ್, ನಗರಸಭೆ ಸದಸ್ಯ ಮಂಜುನಾಥ್, ವಿವಿಧ ಇಲಾಖೆಯ ನೌಕರರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.