ADVERTISEMENT

ಶ್ರೀರಾಮರೆಡ್ಡಿ ಆದರ್ಶ ಅನುಕರಣೀಯ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 2:36 IST
Last Updated 30 ಏಪ್ರಿಲ್ 2022, 2:36 IST
ಚೇಳೂರಿನಲ್ಲಿ ಶುಕ್ರವಾರ ಮಾಜಿ ಶಾಸಕ ದಿ.ಜಿ.ವಿ.ಶ್ರೀರಾಮರೆಡ್ಡಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಚೇಳೂರಿನಲ್ಲಿ ಶುಕ್ರವಾರ ಮಾಜಿ ಶಾಸಕ ದಿ.ಜಿ.ವಿ.ಶ್ರೀರಾಮರೆಡ್ಡಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು   

ಚೇಳೂರು: ಜಿ.ವಿ.ಶ್ರೀರಾಮರೆಡ್ಡಿ ಅವರು ಜಾತ್ಯತೀತ ಜನ ಮೆಚ್ಚಿದ ನಾಯಕ ಎಂದು ನೀರಾವರಿ ಹೋರಾಟಗಾರ ಡಾ.ಮಧುಸೀತಪ್ಪ ಹೇಳಿದರು.

ಚೇಳೂರಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀರಾಮರೆಡ್ಡಿ ಇಡೀ ಜೀವನವೇ ಕ್ಷೇತ್ರದ ದೀನ ದಲಿತರಿಗೆ ಕೃಷಿ ಕಾರ್ಮಿಕರ ಸಮಸ್ಯೆಗಳ ಪರ ಹೋರಾಟದಲ್ಲೇ ಕಳೆದರು. ಇಂತಹ ಅಪ್ರತಿಮ ನಾಯಕನ ನಿಧನವು ನಾಡಿಗೆ ಹೇಳಲಾಗದಷ್ಟು ನಷ್ಟವನ್ನುಂಟು ಮಾಡಿದೆ. ಅವರ ತತ್ವ ಸಿದ್ಧಾಂತಗಳು ಕ್ಷೇತ್ರದ ಅಭಿಮಾನಿಗಳು ಮುಂದುವರಿಸಿಕೊಂಡು ಹೋಗಬೇಕು ಎಂದರು.

ADVERTISEMENT

ಶಾಶ್ವತ ನೀರಾವರಿ ಹೋರಾಟ ನಾಯಕ ಇನ್ನಿಲ್ಲ. ಈ ಭಾಗದಲ್ಲಿ ಯಾವುದೇ ಕೋಮು ಗಲಭೆಗೆ ಅವಕಾಶ ಇಲ್ಲದೇ ಜಾತ್ಯತೀತ ಆದರ್ಶವಾದ ಕ್ಷೇತ್ರದಲ್ಲಿ ಇಂತಹ ನಾಯಕರನ್ನು ಚುನಾವಣೆಯಲ್ಲಿ ಕೇವಲ ಐದಾರು ಸಾವಿರ ಮತಗಳಲ್ಲಿ ಸೋಲಿಸಿದ್ದು ದುರಂತವೇ ಎನ್ನಬಹುದು. ಸದಾ ಕ್ಷೇತ್ರದ ಜನಪರ, ಕೃಷಿ ಕೂಲಿಕಾರ್ಮಿಕರ ಪರ ಹೋರಾಟ ನಡೆಸುತ್ತಿದ್ದ ವ್ಯಕ್ತಿಯನ್ನು ನಾವುಕಳೆದುಕೊಂಡಿದ್ದೇವೆ ಎಂದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಎನ್.ರಾಮಕೃಷ್ಣಾರೆಡ್ಡಿ ಮಾತನಾಡಿ, ಶ್ರೀರಾಮರೆಡ್ಡಿ ಕೇವಲ ಈ ಕ್ಷೇತ್ರದ ನಾಯಕ ಅಲ್ಲ, ಒಂದು ಶಕ್ತಿ. ವಿದ್ಯಾರ್ಥಿ ದೆಸೆಯಿಂದಲೇ ಹೋರಾಟದ ಮನೋಭಾವನೆ ಹೊಂದಿದ್ದ ಶ್ರೀರಾಮರೆಡ್ಡಿ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ನಾಯಕರಾಗಿ, ಸಿಪಿಎಂ ಮುಖಂಡರಾಗಿ ಎರಡು ಬಾರಿ ಈ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಜನಪರವಾದ ಕೆಲಸಗಳನ್ನು ಮಾಡಿ, ಜನನಾಯಕರಾಗಿದ್ದರು. ಶಾಸಕರಾಗಿದ್ದಾಗ ವಿಧಾನಸಭಾ ಅಧಿವೇಶನದಲ್ಲಿ ಕ್ಷೇತ್ರದ ಶಾಶ್ವತ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಮಾಡಿದ್ದರು. ನಾಡಿನ ಸಮಸ್ಯೆಗಳ ಬಗ್ಗೆಯೂ ಧ್ವನಿ ಎತ್ತಿದ್ದಾರೆ
ಎಂದರು.

ಶ್ರೀರಾಮರೆಡ್ಡಿ ಅಧಿಕಾರಕ್ಕಾಗಿ ರಾಜಕೀಯ ಮಾಡುವ ಮನುಷ್ಯರಾಗಿರಲಿಲ್ಲ. ಈ ಭಾಗದ ಜನಸಾಮಾನ್ಯರ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಟ ಮಾಡಿದವರು. ಅವರು ನಾಳಿನ ಚುನಾವಣೆಯ ಮತಪೆಟ್ಟಿಗೆಯ ಬಗ್ಗೆ ಯೋಚಿಸುತ್ತಿರಲಿಲ್ಲ, ಮತವನ್ನು ಮಾರಾಟಕ್ಕೆ ಇಡಬೇಡಿ ಎಂದು ಮತದಾರರ ಸ್ವಾಭಿಮಾನವನ್ನು ಬಡಿದೆಚ್ಚರಿಸಿದ ಧೀಮಂತರು ಎಂದರು.

ಪ್ರಜಾ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಚನ್ನರಾಯರಾಯಪ್ಪ, ಗೋಪಾಲಕೃಷ್ಣ, ಜಿ.ಎಂ.ರಾಮಕೃಷ್ಣಪ್ಪ, ಆರ್.ಚಂದ್ರಶೇಖರ ರೆಡ್ಡಿ, ವೆಂಕಟೇಶ್, ವೆಂಕಟೇಶ್, ರಘು, ಸುಬ್ಬಿರೆಡ್ಡಿ, ಬೈರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.