ADVERTISEMENT

ಉಳಿತಾಯದ ಹಣದಲ್ಲಿ ಷೇರು ಸಂಗ್ರಹ

ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 16:24 IST
Last Updated 12 ಸೆಪ್ಟೆಂಬರ್ 2020, 16:24 IST

ಚಿಕ್ಕಬಳ್ಳಾಪುರ: ‘ಸಾಲ ಪಡೆಯುವ ಸ್ವಸಹಾಯ ಸಂಘಗಳ ಉಳಿತಾಯದ ಹಣದಲ್ಲಿ ಡಿಸಿಸಿ ಬ್ಯಾಂಕ್ ಷೇರು ಸಂಗ್ರಹಿಸಿ ಬಾಂಡ್ ನೀಡುತ್ತಿದೆಯೇ ವಿನಾ ಸಾಲದ ಹಣದಲ್ಲಿ ಷೇರು ಹಿಡಿದುಕೊಳ್ಳುತ್ತಿಲ್ಲ. ಸಾಲ ಮರುಪಾವತಿಯಾದ ಬಳಿಕ ಅವರ ಷೇರು ಹಣವನ್ನು ವಾಪಸ್‌ ನೀಡಲಾಗುತ್ತಿದೆ’ ಎಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ವಸಹಾಯ ಸಂಘಗಳಿಂದ ಷೇರು ಸಂಗ್ರಹಿಸಬಾರದು ಎಂಬ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರ ನಿಲುವು ಸರಿಯಾಗಿದೆ. ಪ್ರಸ್ತುತ ಡಿಸಿಸಿ ಬ್ಯಾಂಕ್ ₹109 ಕೋಟಿ ಷೇರು ಬಂಡವಾಳ ಹೊಂದಿದೆ. ಸಚಿವರು ರಾಜ್ಯ ಸರ್ಕಾರದಿಂದ ಬ್ಯಾಂಕಿಗೆ ₹100 ಕೋಟಿ ಷೇರು ಕೊಡಿಸಿದರೆ ಸ್ವಸಹಾಯ ಸಂಘಗಳಿಂದ ಷೇರು ಸಂಗ್ರಹಿಸುವುದು ನಿಲ್ಲಿಸಬಹುದು’ ಎಂದು ತಿಳಿಸಿದರು.

‘ಸ್ವಸಹಾಯ ಸಂಘಗಳಿಗೆ ಡಿಸಿಸಿ ಬ್ಯಾಂಕ್ ನೀಡಿರುವ ಶೂನ್ಯ ಬಡ್ಡಿ ದರದ ಸಾಲಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಸುಮಾರು ₹40 ಕೋಟಿ ಬಡ್ಡಿ ಬಾಕಿ ಬರಬೇಕಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿ ಅವರ ಬಳಿ ಚರ್ಚಿಸಿ ಬಡ್ಡಿ ಹಣವನ್ನು ಬಿಡುಗಡೆ ಮಾಡಲು ಸಹಕಾರ ನೀಡಬೇಕು’ ಎಂದರು.

ADVERTISEMENT

‘ತಪ್ಪು ಯಾರೇ ಮಾಡಲಿ ನನ್ನನ್ನು ಸೇರಿದಂತೆ ಪ್ರತಿಯೊಬ್ಬರೂ ಶಿಕ್ಷಾರ್ಹರು. ಈವರೆಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬ್ಯಾಂಕ್ ವತಿಯಿಂದ ಪಕ್ಷಾತೀತ, ಜಾತ್ಯತೀತವಾಗಿ ಸಾಲ ವಿತರಿಸಲಾಗುತ್ತಿದೆ. ಬ್ಯಾಂಕ್‌ ವಿಚಾರದಲ್ಲಿ ಯಾವತ್ತೂ ರಾಜಕಾರಣ ಮಾಡಿಲ್ಲ’ ಎಂದು ಹೇಳಿದರು.

ಡಿಸಿಸಿ ಬ್ಯಾಂಕಿನ ನಿರ್ದೇಶಕ ಮೋಹನ್‍ ರೆಡ್ಡಿ,ಕೆ.ಎಸ್.ದ್ಯಾವಪ್ಪ,ಬಿ.ಆರ್.ಅಶ್ವತ್ಥಪ್ಪ,ಬ್ಯಾಂಕಿನ ವ್ಯವಸ್ಥಾಪಕಿ ಜ್ಯೋತಿ, ಮೇಲ್ವಿಚಾರಕಿ ವಸಂತ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.