ADVERTISEMENT

ಬಾಗೇಪಲ್ಲಿ | ಬೀದಿನಾಯಿ ಕಾಟ; ಸವಾರರ ಪರದಾಟ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 3:05 IST
Last Updated 10 ಸೆಪ್ಟೆಂಬರ್ 2025, 3:05 IST
ಬಾಗೇಪಲ್ಲಿಯ ಗೂಳೂರು ರಸ್ತೆಯಲ್ಲಿ ಸುರಿದ ತ್ಯಾಜ್ಯ, ತಿಂಡಿ ತಿನಿಸು ಸೇವಿಸಲು ಬೀದಿನಾಯಿಗಳು ಗುಂಪು ಕಟ್ಟಿರುವುದು
ಬಾಗೇಪಲ್ಲಿಯ ಗೂಳೂರು ರಸ್ತೆಯಲ್ಲಿ ಸುರಿದ ತ್ಯಾಜ್ಯ, ತಿಂಡಿ ತಿನಿಸು ಸೇವಿಸಲು ಬೀದಿನಾಯಿಗಳು ಗುಂಪು ಕಟ್ಟಿರುವುದು   

ಬಾಗೇಪಲ್ಲಿ: ಪಟ್ಟಣದ ಡಿವಿಜಿ ಹಾಗೂ ಗೂಳೂರು ರಸ್ತೆ ಸೇರಿದಂತೆ ಬೀದಿಗಳಲ್ಲಿ ಬೀದಿನಾಯಿ ಕಾಟ ಹೆಚ್ಚಾಗಿದೆ. ಮಕ್ಕಳ, ಮಹಿಳೆಯರ, ವೃದ್ಧರ ಹಾಗೂ ವಾಹನಗಳ ಸವಾರರ ಸುಗಮ ಸಂಚಾರಕ್ಕೆ ತೊಂದರೆ ಆಗಿದೆ.

ಪಟ್ಟಣದ ಡಿವಿಜಿ ಮುಖ್ಯರಸ್ತೆಯಲ್ಲಿ ಹಾಗೂ ಗೂಳೂರು ರಸ್ತೆ, ಡಾ.ಎಚ್.ಎನ್.ವೃತ್ತದಲ್ಲಿ ಬೀದಿಬದಿ ವ್ಯಾಪಾರ ಹೆಚ್ಚಿದೆ. ಬೆಳಿಗ್ಗೆ ಹಾಗೂ ಸಂಜೆ ಗೋಬಿಮಂಜೂರಿ, ಕಬಾಬ್, ಬಜ್ಜಿ, ಬೊಂಡಾ, ವಡೆ, ಇಡ್ಲಿ, ದೋಸೆ ಸೇರಿದಂತೆ ವಿವಿಧ ತಿಂಡಿತಿನಿಸು ಮಾರಾಟವು ಹೆಚ್ಚಾಗಿದೆ. ಮಾಂಸದ ತುಂಡು, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬೀಸಾಡಲಾಗುತ್ತಿದೆ. ಇಲ್ಲಿ ಬೀದಿನಾಯಿಗಳ ಕಾಟವೂ ಹೆಚ್ಚಾಗಿದೆ.

ಬೀದಿನಾಯಿಗಳ ಹಿಂಡು ತ್ಯಾಜ್ಯಗಳನ್ನು ಚಲ್ಲಾಪಿಲ್ಲಿ ಮಾಡಿ ರಸ್ತೆಗೆ ಹಾಕುತ್ತಿವೆ. ಕೆಲವೊಮ್ಮೆ ನಾಯಿಗಳು ಕಾದಾಡಿಕೊಂಡು ದಾರಿಹೋಕರ ಮೇಲೆ ದಾಳಿ ಮಾಡುತ್ತಿವೆ. 

ADVERTISEMENT

ದಾರಿಗಳಲ್ಲಿ ಸಂಚರಿಸುವ ಮಕ್ಕಳ, ಮಹಿಳೆಯರ, ವೃದ್ಧರ ಮೇಲೆ ದಾಳಿ ಮಾಡುತ್ತಿವೆ. ದ್ವಿಚಕ್ರ ವಾಹನಗಳ ಸವಾರರ ಮೇಲೆ ದಾಳಿಗೂ ಬರುತ್ತಿವೆ.

ಡಿವಿಜಿ ಮುಖ್ಯರಸ್ತೆಯ ವಿಭಜಕದ ಮೇಲೆ ಸೇರಿದಂತೆ ಬಸ್ ನಿಲ್ದಾಣದ ಮುಂದೆ, ಡಾ.ಎಚ್.ಎನ್.ವೃತ್ತ, ಕೊತ್ತಪಲ್ಲಿ, ಸಂತೆಮೈದಾನ, ಆವುಲಮಂದೆ, ಗೂಳೂರು ರಸ್ತೆಗಳು ಸೇರಿದಂತೆ ವಿವಿಧ ವೃತ್ತಗಳಲ್ಲಿ ಬೀದಿನಾಯಿಗಳ ಹಿಂಡು ಹೆಚ್ಚಾಗಿವೆ.

ಪಟ್ಟಣದಲ್ಲಿ ಬೀದಿನಾಯಿಗಳು ಹೆಚ್ಚಾದರೂ ಸಂಬಂಧಪಟ್ಟ ಪುರಸಭೆ ಮುಖ್ಯಾಧಿಕಾರಿ, ಆಡಳಿತ ಮಂಡಳಿ ಕ್ರಮ ತೆಗೆದುಕೊಂಡಿಲ್ಲ. ಭಯದಲ್ಲಿ ಸಂಚರಿಸುತ್ತಿದ್ದೇವೆ. ಮಕ್ಕಳ, ಮಹಿಳೆಯರ, ವೃದ್ಧರು ರಸ್ತೆಗಳಲ್ಲಿ ಸಂಚರಿಸಲು ಕಷ್ಟವಾಗುತ್ತಿದೆ ಎಂದು ಪಟ್ಟಣದ ನಿವಾಸಿ ಮಂಜುಳಮ್ಮ ತಿಳಿಸಿದರು.

ಗೂಳೂರು ರಸ್ತೆಯ ಹೋಟೆಲ್ ತ್ಯಾಜ್ಯ ರಸ್ತೆಯಲ್ಲಿ ಹಾಕಿದ್ದಾರೆ. ತಿಂಡಿ, ತ್ಯಾಜ್ಯಗಳು ಸೇವಿಸಲು ಬೀದಿನಾಯಿಗಳ ಹಿಂಡು ಸೇರುತ್ತಿವೆ ಎಂದು ಗೂಳೂರು ರಸ್ತೆಯ ನಿವೃತ್ತ ಶಿಕ್ಷಕ ಇಲಾಹಿ ತಿಳಿಸಿದ್ದಾರೆ.

ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುವುದನ್ನು ಪುರಸಭೆ ಅಧಿಕಾರಿಗಳು ತಡೆಯಬೇಕು. ತ್ಯಾಜ್ಯ ಸುರಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಬೀದಿನಾಯಿಗಳ ಕಾಟ ತಪ್ಪಿಸಬೇಕು ಎಂದು ವಕೀಲ ನವೀನ್ ಮನವಿ ಮಾಡಿದರು.

ಬೀದಿನಾಯಿಗಳ ತಡೆಗೆ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ, ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಬಾಗೇಪಲ್ಲಿ ಪಟ್ಟಣದ ಡಿವಿಜಿ ಮುಖ್ಯರಸ್ತೆಯಲ್ಲಿ ಗುಂಪು ಕಟ್ಟಿದ ಬೀದಿನಾಯಿಗಳ ಪಕ್ಕದಲ್ಲಿ ಭಯದಲ್ಲಿ ವಿದ್ಯಾರ್ಥಿನಿಯರು ಸಂಚರಿಸುತ್ತಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.