ADVERTISEMENT

ಬೀದಿಬದಿ ವ್ಯಾಪಾರಿಗಳು ಸುಂಕ ಕಟ್ಟಬೇಡಿ: ಸಿ.ಇ.ರಂಗಸ್ವಾಮಿ

ಕರ್ನಾಟಕ ಬೀದಿಬದಿ ವ್ಯಾಪಾರಸ್ಥರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 4:17 IST
Last Updated 1 ಫೆಬ್ರುವರಿ 2021, 4:17 IST
ಶಿಡ್ಲಘಟ್ಟದಲ್ಲಿ ನಡೆದ ಕರ್ನಾಟಕ ಬೀದಿಬದಿ ವ್ಯಾಪಾರಸ್ಥರ ದಿನಾಚರಣೆ ಕಾರ್ಯಕ್ರಮದಲ್ಲಿ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಸಿ.ಇ.ರಂಗಸ್ವಾಮಿ ಮಾತನಾಡಿದರು
ಶಿಡ್ಲಘಟ್ಟದಲ್ಲಿ ನಡೆದ ಕರ್ನಾಟಕ ಬೀದಿಬದಿ ವ್ಯಾಪಾರಸ್ಥರ ದಿನಾಚರಣೆ ಕಾರ್ಯಕ್ರಮದಲ್ಲಿ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಸಿ.ಇ.ರಂಗಸ್ವಾಮಿ ಮಾತನಾಡಿದರು   

ಶಿಡ್ಲಘಟ್ಟ: ‘ಬೀದಿಬದಿ ವ್ಯಾಪಾರಿಗಳು ಸುಂಕವನ್ನು ಕಟ್ಟಬೇಡಿ. ಪಟ್ಟಣ ವ್ಯಾಪಾರ ಸಮಿತಿ ರಚನೆಯಾಗಿ ನಿಮಗೆ ಬಾಡಿಗೆ ನಿಗದಿಪಡಿಸುವರು. ಆಗ ಅಕೌಂಟಿಗೆ ಬಾಡಿಗೆಯನ್ನು ಪಾವತಿಸಿ’ ಎಂದು ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಸಿ.ಇ.ರಂಗಸ್ವಾಮಿ ತಿಳಿಸಿದರು.

ನಗರದ ಕೋಟೆ ವೃತ್ತದಲ್ಲಿ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ತಾಲ್ಲೂಕು ಘಟಕ ಭಾನುವಾರ ಆಯೋಜಿಸಿದ್ದ ಕರ್ನಾಟಕ ಬೀದಿಬದಿ ವ್ಯಾಪಾರಸ್ಥರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬೀದಿಬದಿ ವ್ಯಾಪಾರಿಗಳು ನಿರ್ದಿಷ್ಟ ಸ್ಥಳದಲ್ಲಿ ವ್ಯಾಪಾರ ಮಾಡಲು ಸರ್ಕಾರಗಳು ಅವಕಾಶ ಮಾಡಿಕೊಡಬೇಕು. ವ್ಯಾಪಾರಿಗಳಿಗೆ ಮೂಲಸೌಲಭ್ಯ ಕಲ್ಪಿಸಿ, ಕ್ರಮಬದ್ಧ ವ್ಯಾಪಾರ ವಹಿವಾಟಿಗೆ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಇದನ್ನು ಅನುಷ್ಠಾನಕ್ಕೆ ತರುವಂತೆ ರಾಜ್ಯ ಸರಕಾರ ಎಲ್ಲ ಪಾಲಿಕೆಗಳಿಗೆ ನಿರ್ದೇಶನ ನೀಡಿದೆ. ಬೀದಿಬದಿ ವ್ಯಾಪಾರಿಗಳಿಗಾಗಿ ಪಟ್ಟಣ ವ್ಯಾಪಾರ ಸಮಿತಿ ಅಡಿಯಲ್ಲಿ ಮಾರುಕಟ್ಟೆಯನ್ನು ಮಾಡಿಕೊಡಬೇಕು. ಅಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಗೋದಾಮು, ಅಂಗನವಾಡಿ ಶಿಶುವಿಹಾರ ಎಲ್ಲವನ್ನೂ ಒದಗಿಸಬೇಕು ಇದರಿಂದ ನಗರದ ಆರ್ಥಿಕ ಪ್ರಗತಿಯೂ ಸಾಧ್ಯವಾಗಲಿದೆ’ ಎಂದರು.

ADVERTISEMENT

ಶಾಸಕ ವಿ.ಮುನಿಯಪ್ಪ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಬೀದಿಬದಿ ವ್ಯಾಪಾರಿಗಳಿಗೆ ಎಲ್ಲ ಸೌಲಭ್ಯಗಳನ್ನು ನೀಡಲಾಗುವುದು. ಸಾಲ ಸೌಲಭ್ಯಕ್ಕೂ ನೆರವಾಗುವುದಾಗಿ ಭರವಸೆ ನೀಡಿದರು.

ಕಾಂಗ್ರೆಸ್ ಮುಖಂಡ ಆಂಜಿನಪ್ಪ ಪುಟ್ಟು ಮಾತನಾಡಿ, ರೈತರು ದೇಶದ ಬೆನ್ನೆಲುಬಾದರೆ, ಬೀದಿಬದಿ ವ್ಯಾಪಾರಸ್ಥರು ದೇಹದಂತೆ. ಬಿಸಿಲು, ಚಳಿ, ಮಳೆಯೆಂಬುದನ್ನು ಲೆಕ್ಕಿಸದೆ ಕಾಯಕಯೋಗಿಗಳಾದ ಇವರ ಕೊಡುಗೆ ದೇಶದ ಅಭಿವೃದ್ಧಿಗೆ ಪೂರಕವಾದುದು. ಸಂಘಟನೆಯ ಮೂಲಕ ಬೀದಿ ಬದಿ ವ್ಯಾಪಾರಿಗಳು ಒಗ್ಗೂಡಿ ತಮ್ಮ ಹಕ್ಕುಗಳನ್ನು ಪಡೆಯಿರಿ. ಕುಟುಂಬ ಭದ್ರತೆಗೆ, ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಗಮನಕೊಡುವಂತೆ ಹೇಳಿದರು.

ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಅಸ್ಲಮ್ ಪಾಷ, ತಾಲ್ಲೂಕು ಅಧ್ಯಕ್ಷ ಶ್ರೀಧರ್ ಶ್ರೀರಾಮ್, ಕೆ.ಎಸ್.ಗೋಪಾಲ್, ಇಲಿಯಾಜ್, ಸುರೇಶ್, ಮಹೇಶ್ ತಿಮ್ಮರಾಯಪ್ಪ, ಗೋವಿಂದರಾಜು, ವೆಂಕಟರೋಣಪ್ಪ, ಲಕ್ಷ್ಮೀದೇವಿ, ಮುನಿರತ್ನಮ್ಮ, ಪಾರ್ವತಮ್ಮ, ನಗರಸಭಾ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.