ಶಿಡ್ಲಘಟ್ಟ: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಹೆಚ್ಚು ಅಂಕ ಗಳಿಸಿರುವ ತಾಲ್ಲೂಕಿನ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಶಾಸಕ ಬಿ.ಎನ್. ರವಿಕುಮಾರ್ ಸತ್ಕರಿಸಿದರು.
ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಹಂಡಿಗನಾಳ ವಾಸಿ ಎಚ್.ಆರ್.ಜಶ್ವಂತ್ ಯಾದವ್, ದ್ವಿತೀಯ ಸ್ಥಾನ ಪಡೆದ ವಾಸವಿ ಶಾಲೆಯ ದೇಶದಪೇಟೆ ವಾಸಿ ಎಂ.ಜಾಹ್ನವಿ ಹಾಗೂ ಮುತ್ತೂರು ಬೀದಿಯ ವಾಸಿ ಬಿ.ಎಸ್.ಪ್ರಣವಿ ಅವರನ್ನು ಸನ್ಮಾನಿಸಿ, ಸಿಹಿ ತಿನಿಸಿದರು.
ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶಿಡ್ಲಘಟ್ಟ ದ್ವಿತೀಯ ಸ್ಥಾನ ಪಡೆದಿದೆ. ಮುಂದಿನ ಬಾರಿ ಮೊದಲ ಸ್ಥಾನ ಪಡೆಯಬೇಕಿದೆ. ಅದಕ್ಕೆ ಅಗತ್ಯವಾದ ಎಲ್ಲ ರೀತಿಯ ಪೂರಕ ಸಹಕಾರ ನೀಡಲಾಗುವುದು ಎಂದರು.
ರಾಜ್ಯದಲ್ಲಿ ಜಿಲ್ಲೆಗೆ 22ನೇ ಸ್ಥಾನ ದೊರೆತಿದೆ. ಇನ್ನಷ್ಟು ಪ್ರಯತ್ನಗಳು ನಡೆಯಬೇಕು. ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಫಲಿತಾಂಶ ಇನ್ನಷ್ಟು ಸುಧಾರಿಸಬೇಕು. ಅದಕ್ಕೆ ಪೂರಕವಾದ ಹೆಚ್ಚುವರಿ ತರಗತಿ, ಮಾರ್ಗದರ್ಶನ, ಪರೀಕ್ಷೆಯನ್ನು ಎದುರಿಸುವ ಬಗ್ಗೆ ಮಕ್ಕಳಿಗೆ ತರಬೇತಿ ಅಗತ್ಯವಿದೆ ಎಂದು ಹೇಳಿದರು.
ಪೋಷಕರು ಮಕ್ಕಳ ಮೇಲೆ ಹೆಚ್ಚಿನ ಅಂಕ ಗಳಿಸುವಂತೆ ಒತ್ತಡ ಹಾಕುವ ಬದಲಿಗೆ ಹೆಚ್ಚಿನ ಅಂಕ ಗಳಿಸುವಂತೆ ಅವರನ್ನು ತಯಾರು ಮಾಡಬೇಕು. ಇದಕ್ಕೆ ಪೋಷಕರಷ್ಟೆ ಅಲ್ಲ ಶಿಕ್ಷಕರು ಹಾಗೂ ನಾವೆಲ್ಲರೂ ಸಹಕರಿಸಬೇಕು ಎಂದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಅಪ್ಪೇಗೌಡನಹಳ್ಳಿ ಲಕ್ಷ್ಮಿನಾರಾಯಣರೆಡ್ಡಿ, ಮುಖಂಡರಾದ ತಾದೂರು ರಘು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.