ADVERTISEMENT

ಅನೈತಿಕ ಸಂಬಂಧ ಸಂಶಯ: ಮಹಿಳೆ ಕೊಲೆಗೈದು ಯುವಕ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 3:17 IST
Last Updated 27 ಜನವರಿ 2026, 3:17 IST
ಬಾವಾಜಾನ್
ಬಾವಾಜಾನ್   

ಚೇಳೂರು: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರನ್ನು ಕತ್ತು ಕೊಯ್ದು ಕೊಲೆ ಮಾಡಿದ ಆರೋಪಿ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ಸಂಜೆ ನಡೆದಿದೆ.

ಪಟ್ಟಣದ ಗೆರಿಗಿರೆಡ್ಡಿಪಾಳ್ಯ ಬಡಾವಣೆಯ ಸಲ್ಮಾ (40) ಅವರನ್ನು ಹತ್ಯೆಗೈದ ಪದ್ಮನಾಭರಾವ್ ಬಡಾವಣೆ ನಿವಾಸಿ ಬಾವಾಜಾನ್ (42) ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆಯ ವಿವರ: ಬಾವಾಜಾನ್ ಸೀಮೆ ಹಸು ಕರುಗಳ ವ್ಯಾಪಾರ ಮಾಡುತ್ತಿದ್ದರು. ಅವರಿಗೆ ವಿವಾಹವಾಗಿ ಮೂವರು ಗಂಡುಮಕ್ಕಳಿದ್ದಾರೆ. ಕೆಲವು ವರ್ಷಗಳಿಂದ ಸಲ್ಮಾ ಜೊತೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ನಡುವೆ ಸಲ್ಮಾ ಮತ್ತೊಬ್ಬ ಪುರುಷನೊಂದಿಗೆ ಸಂಬಂಧ ಹೊಂದಿದ್ದರು ಎಂಬ ಸಂಶಯ ಬಾವಾಜಾನ್‌ಗೆ ಮೂಡಿತ್ತು. ಇದೇ ವಿಷಯವಾಗಿ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಭಾನುವಾರ ಸಂಜೆ ಸಲ್ಮಾ ಮನೆಗೆ ತೆರಳಿದ ಬಾವಾಜಾನ್, ಅಕ್ರಮ ಸಂಬಂಧದ ಕುರಿತು ಪ್ರಶ್ನಿಸಿದ್ದಾರೆ. ಗಲಾಟೆ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಆಕೆಯ ಮೇಲೆ ಹಲ್ಲೆ ನಡೆಸಿ, ಕತ್ತು ಕೊಯ್ದು ಕೊಲೆ ಮಾಡಿದ್ದಾರೆ. ಬಳಿಕ ಅಲ್ಲಿಂದ ಪದ್ಮನಾಭರಾವ್ ಬಡಾವಣೆಯಲ್ಲಿರುವ ತನ್ನ ಬಾಡಿಗೆ ಮನೆಗೆ ಬಂದು ನೇಣುಹಾಕಿಕೊಂಡಿದ್ದಾರೆ.

ಪರಸ್ಪರ ದೂರು ದಾಖಲು: ಘಟನೆಗೆ ಸಂಬಂಧಿಸಿದಂತೆ ಚೇಳೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಾಗಿವೆ. ನನ್ನ ಪತ್ನಿಯನ್ನು ಬಾವಾಜಾನ್ ಕೊಲೆ ಮಾಡಿದ್ದಾನೆ ಎಂದು ಮೃತರ ಪತಿ ಮಸ್ತಾನ್ ದೂರು ನೀಡಿದ್ದಾರೆ.

ಇತ್ತ ಬಾವಾಜಾನ್ ಪತ್ನಿ ತಸ್ಲೀಮ್ ದೂರು ನೀಡಿ, ‘ಸಲ್ಮಾ ನನ್ನ ಗಂಡನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ನಮ್ಮನ್ನು ದೂರ ಮಾಡಿದ್ದರು. ನನ್ನ ಪತಿಯ ಸಾವಿಗೆ ಆಕೆಯೇ ಪ್ರಚೋದನೆ ನೀಡಿದ್ದಾಳೆ’ ಎಂದು ಆರೋಪಿಸಿದ್ದಾರೆ.

ಸ್ಥಳಕ್ಕೆ ಡಿವೈಎಸ್‌ಪಿ ಪ್ರಕಾಶ್ ಭೇಟಿ ನೀಡಿ ಪರಿಶೀಲಿಸಿದರು. ಚೇಳೂರು ವೃತ್ತ ನಿರೀಕ್ಷಕ ಎಂ. ಶ್ರೀನಿವಾಸ್ ಮತ್ತು ಪಿಎಸ್ಐ ಹರೀಶ್ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.