ADVERTISEMENT

ಚಿಂತಾಮಣಿ | ಹಂದಿಜ್ವರ: 57 ಹಂದಿಗಳ ಸಂಹಾರ

ಸ್ವೈನ್‌ ಫ್ಲೂ–ಜನರು ಗಾಬರಿಪಡಬೇಕಿಲ್ಲ: ತಹಶೀಲ್ದಾರ್

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 3:01 IST
Last Updated 30 ಆಗಸ್ಟ್ 2025, 3:01 IST
ಚಿಂತಾಮಣಿ ತಾಲ್ಲೂಕಿನ ಹೆಬ್ಬರಿ ಗ್ರಾಮದಲ್ಲಿ ಹಂದಿಜ್ವರ ಹಬ್ಬಿರುವ ಫಾರ್ಮ್
ಚಿಂತಾಮಣಿ ತಾಲ್ಲೂಕಿನ ಹೆಬ್ಬರಿ ಗ್ರಾಮದಲ್ಲಿ ಹಂದಿಜ್ವರ ಹಬ್ಬಿರುವ ಫಾರ್ಮ್   

ಚಿಂತಾಮಣಿ: ತಾಲ್ಲೂಕಿನ ಹೆಬ್ಬರಿ ಗ್ರಾಮದ ಹಂದಿ ಫಾರ್ಮ್‌ನಲ್ಲಿ ಪಶುಸಂಗೋಪನಾ ಇಲಾಖೆ ವೈದ್ಯರು ಮತ್ತು ಸಿಬ್ಬಂದಿ ಶುಕ್ರವಾರ ವಿದ್ಯುತ್ ಶಾಕ್‌ ನೀಡಿ 57 ಹಂದಿಗಳನ್ನು ಹತ್ಯೆ ಮಾಡಿ, ಮಣ್ಣಿನಲ್ಲಿ ಹೂತು ಹಾಕಿದರು. 

ಹೆಬ್ಬರಿ ಗ್ರಾಮದ ಹಂದಿ ಫಾರ್ಮ್‌ನಲ್ಲಿ ಕಳೆದ ಕೆಲವು ದಿನಗಳಿಂದ ಸುಮಾರು 100 ಹಂದಿಗಳು ಮೃತಪಟ್ಟಿವೆ. ಫಾರ್ಮ್‌ನಲ್ಲಿ ಆಗಸ್ಟ್ 15ರಿಂದ ಪ್ರತಿ ದಿನವೂ ಹಂದಿಗಳು ಸಾಯುತ್ತಿದ್ದವು. ಪಶುವೈದ್ಯರು ಜ್ವರ ಬಂದಿರುವ ಹಂದಿಗಳ ಸ್ಯಾಂಪಲ್ ಪಡೆದು, ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ಹಕ್ಕಿಜ್ವರ ತಪಾಸಣೆ ಪ್ರಯೋಗಾಲಯಕ್ಕೆ ರವಾನಿಸಿದ್ದರು. ಹಂದಿಗಳಿಂದ ಸಂಗ್ರಹಿಸಿದ ಮಾದರಿಯಲ್ಲಿ ಹಂದಿಜ್ವರದ ಸೋಂಕು ಇರುವುದು ಖಚಿತವಾಗಿದೆ. ಹೀಗಾಗಿ, ಹಂದಿ ಜ್ವರ ವ್ಯಾಪಿಸಿರುವ ಹಂದಿಗಳನ್ನು ಕೊಲ್ಲಲು ತೀರ್ಮಾನಿಸಲಾಯಿತು ಎಂದು ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ರಂಗಪ್ಪ ತಿಳಿಸಿದರು.

ಹಂದಿಜ್ವರವು ಮನುಷ್ಯರ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹಂದಿಜ್ವರ ಮನುಷ್ಯರಲ್ಲಿ ಹರಡಿರುವ ಯಾವುದೇ ಪ್ರಕರಣ ಈವರೆಗೆ ಕಂಡುಬಂದಿಲ್ಲ. ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. 

ADVERTISEMENT

ಪಶುಸಂಗೋಪನಾ ಇಲಾಖೆಯ ವೈದ್ಯರು, ಸಿಬ್ಬಂದಿ ಶುಕ್ರವಾರ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಉಳಿದಿದ್ದ ಎಲ್ಲ ಹಂದಿಗಳನ್ನು ಕೊಂದು ಹಾಕಿದರು.  ಫಾರ್ಮ್ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಕ್ಲೋರಿನೇಷನ್ ಮಾಡಿ ಸ್ವಚ್ಛಗೊಳಿಸಿದರು.

ಸತ್ತ ಹಂದಿಗಳನ್ನು ಕೆರೆಗೆ ಎಸೆಯಲಾಗಿದೆ: ಫಾರ್ಮ್‌ನಲ್ಲಿ ಕಳೆದ 15 ದಿನಗಳಿಂದ ಹಂದಿಜ್ವರದಿಂದ ಸತ್ತಿರುವ ಹಂದಿಗಳನ್ನು ಗ್ರಾಮದ ಸಮೀಪದ ಕೆರೆಯಲ್ಲಿ ಎಸೆಯಲಾಗಿದೆ. ಸತ್ತ ಹಂದಿಗಳು ಕೊಳೆತು ನಾರುತ್ತಿದ್ದು, ಸುತ್ತಮುತ್ತ ದುರ್ನಾತ ಬೀರುತ್ತಿದೆ. ಕೆಲವು ಹಂದಿಗಳು ಊದಿಕೊಂಡು ನೀರಿನಲ್ಲಿ ತೇಲುತ್ತಿದ್ದರೆ, ಕೆಲವು ಕೊಳೆತು ನಾರುತ್ತಿವೆ. ಕೆರೆಯ ಮೀನುಗಳು ಸಹ ಸತ್ತ ಹಂದಿಗಳನ್ನು ತಿಂದಿವೆ ಎಂದು ಗ್ರಾಮಸ್ಥರು ಆರೋಪಿಸಿದರು.

ತಹಶೀಲ್ದಾರ್ ಸುದರ್ಶನ ಯಾದವ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ರಂಗಪ್ಪ ಕೆರೆ ಬಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಸಿಬ್ಬಂದಿ ನೆರವಿನಿಂದ ನೀರಿನಲ್ಲಿ ತೇಲುತ್ತಿದ್ದ ಹಂದಿಗಳ ಕಳೆಬರವನ್ನು ತೆಗೆದು ಮಣ್ಣಿನ ಗುಂಡಿಯಲ್ಲಿ ಹಾಕಿ ಮುಚ್ಚಿಸಿದರು. ಕ್ಲೋರಿನೇಷನ್ ಮಾಡಿ ನೀರನ್ನು ಶುದ್ಧಿಕರಿಸಲು ಕ್ರಮಕೈಗೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಒಂದು ವಾರ ಕುರಿ, ಮೇಕೆ ಮತ್ತಿತರ ಪ್ರಾಣಿಗಳ ಮೈತೊಳೆಯಲು ನೀರಿನಲ್ಲಿ ಇಳಿಯಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಸತ್ತ ಹಂದಿಗಳನ್ನು ಕೆರೆಯಲ್ಲಿ ಎಸೆದಿರುವುದು
ಚಿಂತಾಮಣಿ ತಾಲ್ಲೂಕಿನ ಕೆರೆಯಲ್ಲಿ ಸತ್ತ ಹಂದಿಗಳನ್ನು ಎಸೆದಿರುವುದು

100ಕ್ಕೂ ಹೆಚ್ಚು ಹಂದಿಗಳು ಸಾವು ಸತ್ತ ಹಂದಿಗಳು ಕೆರೆಯಲ್ಲಿ ವಿಲೇವಾರಿ

ಮಾಲೀಕರ ವಿರುದ್ಧ ಕ್ರಮ

ಸತ್ತ ಹಂದಿಗಳನ್ನು ಮಣ್ಣಿನಲ್ಲಿ ಗುಂಡಿ ತೋಡಿ ಮುಚ್ಚಬೇಕಾಗಿತ್ತು. ಮಾಲೀಕರು ಬೇಜವಾಬ್ದಾರಿತನದಿಂದ ಕೆರೆಗೆ ಎಸೆದಿದ್ದು ಇದು ಅಪರಾಧ. ನೀರನ್ನು ಮಲಿನಗೊಳಿಸಿ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿರುವ ಫಾರ್ಮ್ ಮಾಲೀಕರ ವಿರುದ್ಧ ಪಶು ಸಂಗೋಪನಾ ಇಲಾಖೆಯಿಂದ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು. ಕೆರೆಯ ನೀರಿಗೆ ಕ್ಲೋರಿನೇಷನ್ ಮಾಡಿ ಶುದ್ಧಿಕರಿಸಲು ಕ್ರಮಕೈಗೊಳ್ಳಲಾಗಿದೆ. ಮಳೆ ಬೀಳುತ್ತಿರುವುದರಿಂದ ನೀರು ಬದಲಾವಣೆಯಾಗಿ ಶುದ್ಧಿಕರಣಗೊಳ್ಳುತ್ತದೆ. ಒಂದು ವಾರ ಸತತವಾಗಿ ನಿಗಾವಹಿಸಿ ಸಾಧ್ಯವಾದಷ್ಟು ಶುದ್ಧೀಕರಣ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ತಿಳಿಸಿದರು