ADVERTISEMENT

ಚಿಕ್ಕಬಳ್ಳಾಪುರ: ನರೇಗಾ ಯೋಜನೆ ಸದ್ಭಳಕೆ ಮಾಡಿಕೊಳ್ಳಿ- ಎಂ.ಪಿ.ಮುನಿವೆಂಕಟಪ್ಪ

ನಾಯನಹಳ್ಳಿಯಲ್ಲಿ ಉದ್ಯೋಗ ಚೀಟಿ ವಿತರಣಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 13:37 IST
Last Updated 19 ಆಗಸ್ಟ್ 2020, 13:37 IST
ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಉದ್ಯೋಗ ಚೀಟಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಉದ್ಯೋಗ ಚೀಟಿಗಳನ್ನು ವಿತರಿಸಲಾಯಿತು.   

ಚಿಕ್ಕಬಳ್ಳಾಪುರ: ‘ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆ ಗ್ರಾಮೀಣ ಕೃಷಿ ಕೂಲಿಕಾರ ಬದುಕಿಗೆ ಆಸರೆಯಾಗಿದೆ. ಕೋವಿಡ್‌ ಸಂಕಷ್ಟದ ಸಮಯದಲ್ಲಿ ಗ್ರಾಮೀಣ ಪ್ರದೇಶದ ಬಡವರು, ಕೃಷಿ ಕೂಲಿಕಾರರು ಈ ಯೋಜನೆಯನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡರೆ ಕನಿಷ್ಠ ಬದುಕಿಗೆ ಪೂರಕವಾದ ಕೂಲಿ ಪಡೆಯಬಹುದು’ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಪಿ.ಮುನಿವೆಂಕಟಪ್ಪ ಹೇಳಿದರು.

ತಾಲ್ಲೂಕಿನ ಅಜ್ಜವಾರ ಪಂಚಾಯಿತಿ ವ್ಯಾಪ್ತಿಯ ನಾಯನಹಳ್ಳಿಯಲ್ಲಿ ಬುಧವಾರ ಆಯೋಜಿಸಿದ್ದ ನರೇಗಾ ಯೋಜನೆ ಉದ್ಯೋಗ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮ ಜಿಲ್ಲೆಯಲ್ಲಿ ಇನ್ನೂ ಕೃಷಿ ಕೂಲಿಕಾರರಿಗೆ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ಸಾಧ್ಯವಾಗಿಲಲ. ಆದ್ದರಿಂದ, ಹಲವು ಪ್ರಭಾವಿ ಜನರು ನರೇಗಾ ಯೋಜನೆ ಅಡಿ ಯಂತ್ರಗಳನ್ನು ಉಪಯೋಗಿಸಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಇದನ್ನು ಪ್ರತಿಯೊಬ್ಬರೂ ಖಂಡಿಸಬೇಕು’ ಎಂದು ತಿಳಿಸಿದರು.

ADVERTISEMENT

‘ನರೇಗಾದಲ್ಲಿ ಭ್ರಷ್ಟಾಚಾರ ತಡೆಯಬೇಕಾದರೆ ಕೃಷಿ ಕೂಲಿಕಾರರಲ್ಲಿ ಜಾಗೃತಿ ಮೂಡಿಸಬೇಕಿದೆ. ನಮ್ಮ ಕಾನೂನನ್ನು ಸಮರ್ಪಕವಾಗಿ ಬಳಸದ ಕಾರಣ ಪ್ರಭಾವಿಗಳು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಆದ್ದರಿಂದ ಕೃಷಿ ಕೂಲಿಕಾರರು ನರೇಗಾ ಯೋಜನೆ ಸಮರ್ಪಕ ಜಾರಿಗೆ ಮುಂದಾಗಬೇಕಿದೆ’ ಎಂದರು.

‘ಕೊರೊನಾ ಸಂಕಷ್ಟದಿಂದಾಗಿ ಗ್ರಾಮೀಣ ಭಾಗದ ಯುವ ಜನತೆ ಅದರಲ್ಲಿಯೂ ಪದವೀಧರರು ಉದ್ಯೋಗ ಮಾಡುತ್ತಿದ್ದವರು ಹಳ್ಳಿಗಳಲ್ಲಿ ನರೇಗಾ ಕಾಮಗಾರಿಗಳಲ್ಲಿ ಕೆಲಸ ಮಾಡಿ ಬದುಕುತ್ತಿದ್ದಾರೆ. ಆದ್ದರಿಂದ, ಸಂಕಷ್ಟ ಪರಿಹಾರ ರೂಪದಲ್ಲಿ ಕೇಂದ್ರ ಸರ್ಕಾರ ಗ್ರಾಮೀಣ ಕುಟುಂಬಗಳಿಗೆ ತಲಾ ₹7,500 ರಂತೆ ಕನಿಷ್ಠ 6 ತಿಂಗಳು ನೀಡಬೇಕು. ನರೇಗಾ ಕೂಲಿಯನ್ನು ₹600ಕ್ಕೆ ಏರಿಕೆ ಮಾಡಬೇಕು‘ ಎಂದು ಆಗ್ರಹಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಮಾತನಾಡಿ, ‘ನಾಗರಿಕರು ನರೇಗಾ ಉದ್ಯೋಗ ಚೀಟಿಗಾಗಿ ಪಂಚಾಯಿತಿಗೆ ಅರ್ಜಿ ನಮೂನೆ 1 ಸಲ್ಲಿಸಬೇಕು. ಚೀಟಿ ಪಡೆದ ಬಳಿಕ ಕೆಲಸಕ್ಕಾಗಿ ಅರ್ಜಿ ನಮೂನೆ 6ರಲ್ಲಿ ಅರ್ಜಿ ಸಲ್ಲಿಸಿದರೆ 15 ದಿನಗಳ ಒಳಗಾಗಿ ಕೆಲಸ ನೀಡಲಾಗುತ್ತದೆ’ ಎಂದು ಹೇಳಿದರು.

ಪಂಚಾಯಿತಿ ಕಾರ್ಯದರ್ಶಿ ವೆಂಕಟೇಶ್, ನೊಡಲ್ ಅಧಿಕಾರಿ ರಾಮದಾಸ್, ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಸಮಿತಿ ಸದಸ್ಯೆ ಬಿ ಸಾವಿತ್ರಮ್ಮ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ.ಮುನಿಕೃಷ್ಣಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.