ADVERTISEMENT

ಕಿವಿಗಳನ್ನು ಕಡೆಗಣಿಸದೆ ಕಾಳಜಿ ವಹಿಸಿ

ಆರೋಗ್ಯ ಇಲಾಖೆ ವತಿಯಿಂದ ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣ ಕಾರ್ಯಕ್ರಮದ ಜನಜಾಗೃತಿ ಜಾಥಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 11:40 IST
Last Updated 8 ಮಾರ್ಚ್ 2020, 11:40 IST
ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅನಿಲ್ ಕುಮಾರ್ ಅವರು ಶ್ರವಣದೋಷ ಉಳ್ಳವರಿಗೆ ಯಂತ್ರಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅನಿಲ್ ಕುಮಾರ್ ಅವರು ಶ್ರವಣದೋಷ ಉಳ್ಳವರಿಗೆ ಯಂತ್ರಗಳನ್ನು ವಿತರಿಸಿದರು.   

ಚಿಕ್ಕಬಳ್ಳಾಪುರ: ‘ಮಕ್ಕಳಿಗೆ ಸರಿಯಾದ ಸಮಯದಲ್ಲಿ ಎಲ್ಲಾ ಬಗೆಯ ಲಸಿಕೆಗಳನ್ನು ಹಾಕಿಸುವ ಜತೆಗೆ ಆರೋಗ್ಯಕರ ಪೌಷ್ಟಿಕ ಆಹಾರ ನೀಡುವುದರಿಂದ ಶ್ರವಣದೋಷವನ್ನು ತಡೆಯಬಹುದು’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅನಿಲ್ ಕುಮಾರ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣ ಕಾರ್ಯಕ್ರಮದ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮನುಷ್ಯನ ಕಿವಿಯ ಪದರಗಳು ಅತೀ ಸೂಕ್ಷ್ಮತೆಯಿಂದ ಕೂಡಿರುತ್ತವೆ. ಅದರ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಅಗತ್ಯ. ಶ್ರವಣದೋಷ ಕೆಲವರಲ್ಲಿ ವಂಶವಾಹಿನಿಯ ಮೂಲಕ ಬಂದರೆ ಇನ್ನು ಕೆಲವರಿಗೆ ಸ್ವಯಂಕೃತ ತಪ್ಪು ಕೆಲಸಗಳಿಂದ ಉಂಟಾಗುತ್ತದೆ. ಶ್ರವಣ ದೋಷ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಹುಟ್ಟಿನಿಂದಲೇ ಮಗುವು ಶ್ರವಣದೋಷ ಹೊಂದಿದ್ದರೆ ಅದಕ್ಕೆ ವಂಶವಾಹಿನಿ ಅಥವಾ ಬಸಿರಿನ ಸಮಯದಲ್ಲಿ ಸರಿಯಾದ ಆರೈಕೆಯ ಕೊರತೆ ಕಾರಣವಾಗಿರುತ್ತದೆ. ಜ್ವರ ಇನ್ನಿತರ ಆರೋಗ್ಯದ ತೊಂದರೆಗಳು ಉಂಟಾದಾಗ ವೈದ್ಯರಲ್ಲಿ ಸರಿಯಾದ ಚಿಕಿತ್ಸೆಯನ್ನು ಪಡೆಯದಿರುವುದು ಶ್ರವಣದೋಷಕ್ಕೆ ಕಾರಣವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾದ ಶಬ್ದಮಾಲಿನ್ಯವು ಸಹ ಶ್ರವಣದೋಷ ಉಂಟು ಮಾಡುತ್ತಿದೆ’ ಎಂದರು.

‘140 ಡೆಸಿಬಲ್‌ಗಿಂತ ಹೆಚ್ಚಿನ ಶಬ್ದವು ನಮ್ಮ ಪಂಚೇಂದ್ರಿಯಗಳಾದ ಕಣ್ಣು ಕಿವಿ,ಮೂಗು, ನಾಲಿಗೆ ಚರ್ಮದ ಜತೆಗೆ ನಮ್ಮ ಮೆದುಳಿಗೂ ತೊಂದರೆ ಉಂಟು ಮಾಡುತ್ತದೆ. ನಮ್ಮ ದೇಶದಲ್ಲಿ ಸುಮಾರು 5 ಲಕ್ಷ ಮಂದಿ ಶ್ರವಣದೋಷ ಹೊಂದಿದ್ದು, ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದ ಅವಶ್ಯಕತೆ ಇದೆ’ ಎಂದು ಹೇಳಿದರು.

ಜಿಲ್ಲಾ ಆಸ್ಪತ್ರೆ ನಿವಾಸಿ ವೈದ್ಯಾಧಿಕಾರಿ ಡಾ.ರಮೇಶ್‌ ಮಾತನಾಡಿ, ‘ಶ್ರವಣದೋಷವು ವ್ಯಕ್ತಿಯು ಸಮರ್ಪಕವಾದ ಸಂವಹನ ಪ್ರಕ್ರಿಯೆಯನ್ನು ಮೊಟುಕುಗೊಳಿಸಿ ವ್ಯಕ್ತಿಯ ಮಾನಸಿಕ ದೈರ್ಯವನ್ನು ಕುಂಠಿತಗೊಳಿಸುತ್ತದೆ. ಇಂತಹ ಲೋಪದೋಷಗಳಿರುವ ಜನರು ಸರಿಯಾದ ಸಮಯದಲ್ಲಿ ವೈದ್ಯರನ್ನು ಭೇಟಿ ಮಾಡುವ ಮೂಲಕ ಸೂಕ್ತ ಚಿಕಿತ್ಸೆಯನ್ನು ಪಡೆದು, ಆಧುನಿಕ ಶ್ರವಣ ಯಂತ್ರಗಳ ಬಳಕೆಯನ್ನು ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜ್ಯೋತಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹರೀಶ್, ಜಿಲ್ಲಾ ಆರೋಗ್ಯ ಉಪ ಶಿಕ್ಷಣಾಧಿಕಾರಿ ಸುಧಾ, ಕಿವಿ ವಿಭಾಗದ ತಜ್ಞ ವೈದ್ಯ ಡಾ.ಧರ್ಮೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.