ADVERTISEMENT

ಮುನ್ನೆಚ್ಚರಿಕೆ ವಹಿಸಿ ಬಕ್ರೀದ್ ಆಚರಿಸಿ

ವಿಡಿಯೊ ಸಂವಾದದಲ್ಲಿ ಮುಸಲ್ಮಾನ ಸಮುದಾಯದ ಮುಖಂಡರಿಗೆ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 11:18 IST
Last Updated 30 ಜುಲೈ 2020, 11:18 IST
ವಿಡಿಯೊ ಸಂವಾದದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿದರು.
ವಿಡಿಯೊ ಸಂವಾದದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿದರು.   

ಚಿಕ್ಕಬಳ್ಳಾಪುರ: ‘ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಮುಸ್ಲಿಮರು ಈ ವರ್ಷ ಬಕ್ರೀದ್ ಹಬ್ಬವನ್ನು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳೊಡನೆ ಆಚರಿಸಬೇಕು’ ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು.

ಬಕ್ರೀದ್‌ ಪೂರ್ವಭಾವಿಯಾಗಿ ಏರ್ಪಡಿಸಿದ್ದ ತಾಲ್ಲೂಕು ಅಧಿಕಾರಿಗಳು ಮತ್ತು ಮುಸಲ್ಮಾನ ಸಮುದಾಯದ ಮುಖಂಡರ ವಿಡಿಯೊ ಸಂವಾದದಲ್ಲಿ ಅವರು ಮಾತನಾಡಿದರು.

‘ಶನಿವಾರ (ಆ.1) ನಡೆಯುವ ಬಕ್ರೀದ್ ಹಬ್ಬದಂದು ಪ್ರಾರ್ಥನೆಗಾಗಿ ಸಾರ್ವಜನಿಕ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯ ಜನರು ಒಟ್ಟು ಗೂಡುವುದನ್ನು ನಿಷೇಧಿಸಲಾಗಿದೆ. ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿರ್ವಹಿಸುವ ಮೊದಲು ಆಡಳಿತ ಮಂಡಳಿಯವರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

‘ಶುಕ್ರವಾರ ವರಮಹಾಲಕ್ಷ್ಮೀ ಹಬ್ಬ ಇರುವುದರಿಂದ ತಾಲ್ಲೂಕುಗಳಲ್ಲಿರುವ ನಗರ ಮಾರುಕಟ್ಟೆಗಳಲ್ಲಿ ಸ್ವಚ್ಚತೆಯನ್ನು ಕಾಪಾಡಬೇಕು. ಮಾರುಕಟ್ಟೆ ಪ್ರದೇಶದಲ್ಲಿ ಹೆಚ್ಚು ಜನ ಸೇರದಂತೆ ನಗರಸಭೆ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಸಮರ್ಪಕವಾಗಿ ಕಸ ವಿಲೇವಾರಿ ಮಾಡಬೇಕು’ ಎಂದು ಸೂಚಿಸಿದರು.

‘ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಮಸೀದಿಗಳ ಗಾತ್ರಕ್ಕೆ ಅನುಗುಣವಾಗಿ ಹೆಚ್ಚು ಜನ ಸೇರದಂತೆ ದೊಡ್ಡ ಮಸೀದಿಗಳಾದರೆ ಗರಿಷ್ಠ 50 ಜನರು ಮೀರದಂತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಬಹುದು. ಒಂದೊಮ್ಮೆ ಹೆಚ್ಚು ಜನರು ಮಸೀದಿಗೆ ಬಂದರೆ, ಎರಡು ಅಥವಾ ಮೂರು ತಂಡಗಳಾಗಿ ವಿಂಗಡಣೆ ಮಾಡಿ ಪ್ರಾರ್ಥನೆ ಸಲ್ಲಿಸಬೇಕು’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ‘ಮಸೀದಿ ಪ್ರವೇಶಿಸುವ ಮೊದಲು ಪ್ರತಿಯೊಬ್ಬರೂ ದೇಹದ ಉಷ್ಣತೆ ತಪಾಸಣೆ ನಡೆಸಬೇಕು. ಕೈಗಳನ್ನು ಸಾಬೂನು ಅಥವಾ ಸಾನಿಟೈಸರ್‌ನಿಂದ ಸ್ವಚ್ಛಗೊಳಿಸಬೇಕು’ ಎಂದು ಹೇಳಿದರು.

‘ಮಸೀದಿಗಳಲ್ಲಿರುವ ಧಾರ್ಮಿಕ ಗ್ರಂಥಗಳನ್ನು ಮುಟ್ಟಬಾರದು. ಹಸ್ತಲಾಘವ ಮತ್ತು ಆಲಿಂಗನಕ್ಕೆ ಅವಕಾಶ ಇಲ್ಲ. ಅಪರಿಚಿತರು ಪ್ರಾರ್ಥನೆ ಸಲ್ಲಿಸಲು ಬಂದರೆ ಅವರ ಬಗ್ಗೆ ನಿಗಾ ವಹಿಸಬೇಕು. ಮಸೀದಿಗಳಲ್ಲಿ ನಮಾಜ್‍ಗೆ ಕಡ್ಡಾಯವಾಗಿ ತಮ್ಮ ತಮ್ಮ ಮನೆಗಳಲ್ಲಿ ವಜೂ ಮಾಡಿಕೊಂಡು ಬರಬೇಕು’ ಎಂದು ತಿಳಿಸಿದರು.

‘ಮಸೀದಿಯಲ್ಲಿ ಇದ್ದ ಚಾಪೆ ಹಾಗೂ ಜಮಾಖಾನೆಗಳನ್ನು ತೆಗೆದು ತಮ್ಮ ಮನೆಗಳಿಂದಲೇ ಚಾಪೆ ಅಥವಾ ಜಾನಿ ಮಾಜ್ ತಂದು ನಮಾಜ್ ಮಾಡಬೇಕು. ಮಸೀದಿಗಳಲ್ಲಿನ ಟೋಪಿ ಮತ್ತು ಟವಲ್‍ಗಳನ್ನು ಬಳಕೆ ಮಾಡಬಾರದು.
ಮಸೀದಿ ಹೊರತುಪಡಿಸಿ ಇತರ ಯಾವುದೇ ಸ್ಥಳಗಳಲ್ಲಿ (ಸಭಾಂಗಣ, ಸಮುದಾಯ ಭವನ, ಶಾದಿ ಮಹಲ್ ಮತ್ತಿತರ ಕಡೆ) ಬಕ್ರೀದ್ ಸಾಮಾಹಿಕ ಪ್ರಾರ್ಥನೆ ಆಯೋಜಿಸಬಾರದು’ ಎಂದರು.

‘ಸರ್ಕಾರದ ಆದೇಶವನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. 60 ವರ್ಷ ದಾಟಿದವರು ಮತ್ತು 10 ವರ್ಷ ಒಳಗಿನ ಮಕ್ಕಳು ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಬೇಕು. ಪ್ರಾರ್ಥನೆ ಸಲ್ಲಿಸುವ ವೇಳೆ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಬೇಕು’ ಎಂದು ತಿಳಿಸಿದರು.

‘ಕೈಗೆ ಕೈ (ಮುಸಾಫಾ) ಕೊಡಬಾರದು. ಮಸೀದಿಯ ನೆಲವನ್ನು ಆಗಾಗ ಸ್ವಚ್ಚ ಮಾಡುತ್ತಾ ಇರಬೇಕು. ಮಸೀದಿಯ ಮೂತ್ರಾಲಯ ಹಾಗೂ ಶೌಚಾಲಯಗಳಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಕೆಮ್ಮು, ನೆಗಡಿ, ಜ್ವರ ಇದ್ದವರು ಮಸೀದಿಗೆ ಬರಬಾರದು’ ಎಂದು ಹೇಳಿದರು.

‘ಮಸೀದಿಯಲ್ಲಿ ಒಟ್ಟಾಗಿ ಸೇರಿ ಧಾರ್ಮಿಕ ಗ್ರಂಥಗಳನ್ನು ಓದುವುದಾಗಲೀ, ಗುಂಪು ಚರ್ಚೆ ಮಾಡುವುದಾಗಲಿ ನಿಷೇಧಿಸಲಾಗಿದೆ. ಮಸೀದಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಸದ್ಯದ ಮಟ್ಟಿಗೆ ಬಂದ್ ಮಾಡುವುದು. ಮಸೀದಿಯ ಒಳಗೆ ಏಸಿ,ಕೂಲರ್ ಗಳನ್ನು ಉಪಯೋಗಿಸುವಂತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.