
ಚಿಂತಾಮಣಿ: ತಾಲ್ಲೂಕಿನ ತಳಗವಾರ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ಮತ್ತು ನಿಯಮ ಬಾಹಿರ ಚಟುವಟಿಕೆ ನಡೆಯುತ್ತಿವೆ. ಪಿಡಿಒ ಅವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿ ತಳಗವಾರ ಗ್ರಾಮಸ್ಥರು ಪಂಚಾಯಿತಿ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದರು.
ಗ್ರಾಮೀಣ ಅಭಿವೃದ್ಧಿ ಕಾಯ್ದೆ 1973ರ ಪ್ರಕಾರ ಪ್ರತಿ 3 ವರ್ಷಕ್ಕೊಮ್ಮೆ ಗ್ರಾಮ ಪಂಚಾಯಿತಿ ಮಳಿಗೆಯನ್ನು ಬಹಿರಂಗವಾಗಿ ಹರಾಜು ಮಾಡಬೇಕು. ಆದರೆ ಇಲ್ಲಿನ ಪಿಡಿಒ ಕೆಲ ಪ್ರಭಾವಿ ಸದಸ್ಯರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಒಂದೇ ಕುಟುಂಬಕ್ಕೆ ಮಳಿಗೆ ಮತ್ತು ಮನೆ ನೀಡಿದ್ದಾರೆ. ಮೇಲಧಿಕಾರಿಗಳ ಮತ್ತು ಶಾಸಕರ ಸೂಚನೆಗೂ ಬೆಲೆ ನೀಡದೆ ಬಹಿರಂಗ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿದ್ದಾರೆ ಎಂದು ಆರೋಪಿಸಿದರು.
ಪಂಚಾಯಿತಿಯಲ್ಲಿ ಇ-ಸ್ವತ್ತು ಮಾಡಿಕೊಡಲು ಸಾರ್ವಜನಿಕರಿಂದ ₹20 ರಿಂದ ₹30 ಸಾವಿರ ಲಂಚ ಪಡೆಯುತ್ತಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರನ್ನೇ ಬ್ರೋಕರ್‌ಗಳನ್ನಾಗಿ ಬಳಸಿಕೊಂಡು ವಸೂಲಿ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಸ್ವಚ್ಛತಾ ಪರಿಕರ ಮತ್ತು ಬ್ಲೀಚಿಂಗ್ ಪೌಡರ್ ಖರೀದಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದೆ. ದಾಖಲೆಯಲ್ಲಿ ಖರೀದಿ ತೋರಿಸಲಾಗಿದ್ದರೂ, ಯಾವುದೇ ಪರಿಕರ ಬಳಕೆಯಾಗಿಲ್ಲ ಎಂದು ಆರೋಪಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ 263 ನಿವೇಶನ ರಹಿತರು ಅರ್ಜಿ ಸಲ್ಲಿಸಿದ್ದರೂ, ಲಭ್ಯವಿರುವ ಜಾಗವನ್ನು ಅರ್ಹರಿಗೆ ನೀಡದೆ ಅಕ್ರಮ ದಾಖಲೆ ಸೃಷ್ಟಿಸಿ ಪ್ರಭಾವಿಗಳಿಗೆ ಖಾತೆ ಮಾಡಿಕೊಡಲಾಗಿದೆ. ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಪಿಡಿಒ ಅವರನ್ನು ಅಮಾನತು ಮಾಡಬೇಕು. ನಿವೇಶನ ರಹಿತ ಬಡವರಿಗೆ ಕೂಡಲೇ ಜಾಗ ಹಂಚಿಕೆ ಮಾಡಬೇಕೆಂದು ಆಗ್ರಹಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ಭೇಟಿ ನೀಡಿ ಮನವಿ ಸ್ವೀಕರಿಸಿದರು.
ತಾಲ್ಲೂಕು ಗ್ಯಾರಂಟಿ ಸಮಿತಿ ಸದಸ್ಯ ವಿಜಯ್, ಪುಟ್ಟಣ್ಣ , ಟಿ.ಎಂ.ಜಯಪಾಲ್, ಶಿವಣ್ಣ, ವಡ್ಡಹಳ್ಳಿ ಪೃಥ್ವಿರಾಜ್, ಲೋಕೇಶ್, ಸಮಿಉಲ್ಲಾ, ಬೀರಪ್ಪ, ಜೈಪಾಲ್, ರಮೇಶ್, ನಾರಾಯಣಸ್ವಾಮಿ, ವಿಜಯ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.