ADVERTISEMENT

ಶಿಕ್ಷಕ ವಿಶ್ವನಾಥ್ ಕೊಲೆ: ಮೂವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 14:09 IST
Last Updated 8 ಜುಲೈ 2021, 14:09 IST
ಮನು
ಮನು   

ಗೌರಿಬಿದನೂರು: ತಾಲ್ಲೂಕಿನ ಶಿಕ್ಷಕ ವಲಯದಲ್ಲಿ ತಲ್ಲಣಕ್ಕೆ ಕಾರಣವಾಗಿದ್ದ ಶಿಕ್ಷಕ ಎನ್.ವಿಶ್ವನಾಥ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ.

ಮನು, ಮಂಜುನಾಥ್ ಮತ್ತು ಶ್ರೀಕಾಂತ್ ಬಂಧಿತರು. ಮತ್ತೊಬ್ಬ ಆರೋಪಿ ಆಕಾಶ್ ನಾಪತ್ತೆ ಆಗಿದ್ದು ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಡಿ.ಪಾಳ್ಯ ಹೋಬಳಿಯ ಬಿ.ಬೊಮ್ಮಸಂದ್ರದ ‌‌ಎನ್.ವಿಶ್ವನಾಥ್ ಮಂಚೇನಹಳ್ಳಿ ಹೋಬಳಿಯ ಭೂಮೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ನಗರದ ಸದಾಶಿವ ಬಡಾವಣೆಯಲ್ಲಿ ವಾಸವಾಗಿದ್ದರು.

ವಿಶ್ವನಾಥ್ ಜೂ. 4 ರಂದು ರಾತ್ರಿ 8 ಗಂಟೆ ಸುಮಾರಿಗೆ ಬೈಕ್ ನಿಲ್ಲಿಸುವುದಾಗಿ ಪತ್ನಿಗೆ ಹೇಳಿ ಮನೆಯಿಂದ ಹೊರ ಹೋಗಿದ್ದಾರೆ. ರಾತ್ರಿ ಮನೆಗೆ ಮರಳಿರಲಿಲ್ಲ. ಅವರ ಪತ್ನಿ ನಗರ ಪೊಲೀಸ್ ಠಾಣೆಯಲ್ಲಿ ಕಾಣಿಯಾಗಿರುವ ಬಗ್ಗೆ ದೂರು ನೀಡಿದ್ದರು. ವಿಶ್ವನಾಥ್ ಮೃತದೇಹ ನಗರದ ಹೊರವಲಯದಲ್ಲಿರುವ ಬೈಪಾಸ್ ರಸ್ತೆಯ ನರ್ಸಿಂಗ್ ಕಾಲೇಜು ಎದುರಿನ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿತ್ತು.

ADVERTISEMENT

ಅವರ ದೇಹ ಸಂಪೂರ್ಣ ಬೆತ್ತಲಾಗಿತ್ತು. ಪ್ಯಾಂಟ್ ನಿಂದ ಕಾಲುಗಳನ್ನ ಕಟ್ಟಲಾಗಿತ್ತು. ದುಷ್ಕರ್ಮಿಗಳು ತೀವ್ರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.

ಸಲಿಂಗಕಾಮ: ಶಿಕ್ಷಕ ವಿಶ್ವನಾಥ್ ಹಾಗೂ ಕೊಲೆ ಆರೋಪಿ ಆಕಾಶ್ ‘ಗ್ರಿಂಡರ್’ ಆ್ಯಪ್‌ ಮೂಲಕ ಪರಿಚಯವಾಗಿದ್ದರು. ಇಬ್ಬರ ನಡುವೆ ದೈಹಿಕ ಸಂಪರ್ಕವಿತ್ತು. ದೈಹಿಕ ಸಂಪರ್ಕಕ್ಕಾಗಿ ಆಕಾಶ್‌ ಜೂ.4ರಂದು ವಿಶ್ವನಾಥ್‌ ಅವರನ್ನು ಕರೆಸಿಕೊಂಡಿದ್ದ. ವಿಶ್ವನಾಥ್ ಅವರಿಂದ ಹಣ ಕೀಳಲು ಯೋಜನೆ ಸಹ ಹಾಕಿಕೊಂಡಿದ್ದ.

ಹಣ ಕೀಳಲು ತನ್ನ ಸ್ನೇಹಿತರಾದ ಮಂಜು ಹಾಗೂ ಮನು ಎಂಬುವರನ್ನೂ ಆಕಾಶ್ ಕರೆಸಿಕೊಂಡಿದ್ದಾನೆ. ವಿಶ್ವನಾಥ್‌ಗೆ ತಿಳಿಯದಂತೆ ಅವರು ನಿರ್ಜನ ಪ್ರದೇಶದಲ್ಲಿ ಅವಿತಿದ್ದಾರೆ. ಮಂಜು, ಮನು ಹಾಗೂ ಆಕಾಶ್, ವಿಶ್ವನಾಥ್ ಮೊಬೈಲ್ ಕಸಿದುಕೊಂಡಿದ್ದಾರೆ. ವಿಶ್ವನಾಥ್ ಅವರಿಂದ ಆನ್‌ಲೈನ್‌ ಮೂಲಕ ದೊಡ್ಡಬಳ್ಳಾಪುರದ ಭಾಸ್ಕರ್‌ ಎಂಬುವವರಿಗೆ ₹ 31 ಸಾವಿರ ಹಣವನ್ನು ಒತ್ತಾಯವಾಗಿ ವರ್ಗಾವಣೆ ಮಾಡಿಸಿದ್ದಾರೆ.

ಆರಂಭದಲ್ಲಿ ಪಾಸ್‌ವರ್ಡ್‌ ನೀಡಲಿಲ್ಲ ಎಂಬ ಕಾರಣಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ನಗರದ ಠಾಣೆಯಲ್ಲಿ ಗುರುವಾರ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.