ADVERTISEMENT

ಕೋವಿಡ್‌: ಕೇಂದ್ರ, ರಾಜ್ಯದ ವೈಖರಿ ಶ್ಲಾಘನೀಯ

ಪತ್ರಿಕಾಗೋಷ್ಠಿಯಲ್ಲಿ ಸಂಸದ ಬಿ.ಎನ್.ಬಚ್ಚೇಗೌಡ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 11:51 IST
Last Updated 2 ಜೂನ್ 2020, 11:51 IST
ಬಿ.ಎನ್.ಬಚ್ಚೇಗೌಡ
ಬಿ.ಎನ್.ಬಚ್ಚೇಗೌಡ   

ಚಿಕ್ಕಬಳ್ಳಾಪುರ: ‘ಜಗತ್ತನ್ನೇ ತಲ್ಲಣಗೊಳಿಸಿದ ಮಹಾ ಮಾರಿ ಕೋವಿಡ್‌ ನಿಯಂತ್ರಿಸುವ ವಿಚಾರದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಉತ್ತಮ ರೀತಿಯಲ್ಲಿ ಆರ್ಥಿಕ ಮತ್ತು ವೈದ್ಯಕೀಯ ನೆರವು ನೀಡಿವೆ. ಕೊರೊನಾ ಸೋಂಕು ನಿಯಂತ್ರಿಸುವ ವಿಚಾರದಲ್ಲಿ ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ಸನ್ನದ್ಧರಾಗಬೇಕು’ ಎಂದು ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿದೇಶಗಳಿಂದ ಬಂದ ಕೋವಿಡ್‌ ಕಳೆದ ಆರು ತಿಂಗಳಿಂದ ಎಲ್ಲೆಡೆ ಹಬ್ಬುತ್ತ ದೊಡ್ಡ ದುರಂತ ಮಾಡುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಂಡಿರುವುದು ಶ್ಲಾಘನೀಯ’ ಎಂದು ಹೇಳಿದರು.

‘ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೊರೊನಾದಂತಹ ಕಷ್ಟದ ಸಂದರ್ಭವನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿದ್ದಾರೆ. ರಾಜ್ಯ ಸರ್ಕಾರ ಕ್ಷೌರಿಕರು, ಚಾಲಕರು, ಹೂವು ಬೆಳೆಗಾರರು, ರೈತರು, ಮಡಿವಾಳರು, ವಿಶ್ವಕರ್ಮರಿಗೆ, ಬೀದಿಬದಿ ವ್ಯಾಪಾರಿಗಳಿಗೆ, ಸಣ್ಣ ಉದ್ಯಮಿಗಳಿಗೆ ಸಹಾಯ ಧನ ನೀಡಲು ₹2,260 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ’ ಎಂದರು.

ADVERTISEMENT

‘ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್ ಯೋಜನೆ ಅಡಿ 8.09 ಕೋಟಿ ರೈತರ ಖಾತೆಗೆ ತಲಾ ₹2,000 ಜಮೆ ಮಾಡಿದೆ. ಪ್ರಧಾನ ಮಂತ್ರಿ ಉಜ್ವಲ್‌ ಯೋಜನೆ ಅಡಿ 8.30 ಕೋಟಿ ಕುಟುಂಬಗಳಿಗೆ ಉಚಿತವಾಗಿ ಮೂರು ತಿಂಗಳಿಗೆ ಎಲ್‌ಪಿಜಿ ಅಡುಗೆ ಸಿಲಿಂಡರ್‌ ವಿತರಿಸಲಾಗಿದೆ’ ಎಂದು ಹೇಳಿದರು.

‘ಸಂಘಟಿತ ವಲಯದಲ್ಲಿ 4.80 ಕೋಟಿ ಉದ್ಯೋಗಿ, ಉದ್ಯೋಗದಾತರ ಭವಿಷ್ಯನಿಧಿ ಕಂತುಗಳನ್ನು ಮುಂದಿನ ಮೂರು ತಿಂಗಳು ಕೇಂದ್ರ ಸರ್ಕಾರವೇ ಭರಿಸುತ್ತದೆ. ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ₹50 ಲಕ್ಷ ವೈದ್ಯಕೀಯ ಜೀವ ವಿಮಾ ಯೋಜನೆ ಜಾರಿಗೆ ತರಲಾಗಿದೆ’ ಎಂದು ತಿಳಿಸಿದರು.

‘3 ಕೋಟಿ ವಿಧವೆಯರು, ಅಂಗವಿಕಲರು, ವೃದ್ಧರಿಗೆ ಮೂರು ತಿಂಗಳು ಹೆಚ್ಚುವರಿ ಮಾಸಾಶನ ನೀಡಲಾಗಿದೆ. ನರೇಗಾ ಯೋಜನೆ ಅಡಿ 5 ಕೋಟಿ ಕಾರ್ಮಿಕರಿಗೆ ಕೆಲಸ ನೀಡಲಾಗಿದೆ. ದಿನಗೂಲಿಯನ್ನು ₹182 ರಿಂದ ₹270ಕ್ಕೆ ಹೆಚ್ಚಿಸಲಾಗಿದೆ’ ಎಂದರು.

‘ಪ್ರಧಾನಮಂತ್ರಿ ಜನಧನ್ ಬ್ಯಾಂಕ್ ಖಾತೆ ಹೊಂದಿರುವ 20 ಕೋಟಿ ಮಹಿಳೆಯರಿಗೆ ಮೂರು ತಿಂಗಳ ವರೆಗೆ ಪ್ರತಿ ತಿಂಗಳಿಗೆ ₹500 ರಂತೆ ನೆರವು ನೀಡಲಾಗುತ್ತಿದೆ. ಕಟ್ಟಡ ಮತ್ತು ಇತರೆ ಕ್ಷೇತ್ರದಲ್ಲಿ ದುಡಿಯುವ 3.50 ಕೋಟಿ ನೋಂದಾಯಿತ ಕಾರ್ಮಿಕರಿಗೆ ₹31,000 ಕೋಟಿ ಆರ್ಥಿಕ ಸಹಾಯ ಮೀಸಲಾಗಿಡಲಾಗಿದೆ’ ಎಂದು ಹೇಳಿದರು.

‘ಈವರೆಗೆ ಕೇಂದ್ರ ಸರ್ಕಾರ ವಿವಿಧ ಹಂತಗಳಲ್ಲಿ ₹52 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದೆ. ಯಾರು ಕೂಡ ಆಹಾರವಿಲ್ಲದೆ ನರಳಬಾರದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿಯೊಬ್ಬರಿಗೂ ಉಚಿತವಾಗಿ ಪಡಿತರ ವಿತರಣೆ ಮಾಡುತ್ತಿವೆ. ವಲಸೆ ಕಾರ್ಮಿಕರಿಗೆ ಊರು ಸೇರಲು ಶ್ರಮಿಕ್ ರೈಲು, ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಶಕ್ತಿ ತುಂಬಲು, ವಲಸೆ ಕಾರ್ಮಿಕರಿಗೆ ಕೆಲಸ ಒದಗಿಸುವ ಉದ್ದೇಶದಿಂದ ₹70 ಸಾವಿರ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದೆ. ದೇಶದಲ್ಲಿರುವ 63 ಲಕ್ಷ ಸ್ವಸಹಾಯ ಸಂಘಗಳಲ್ಲಿ 7 ಕೋಟಿ ಕುಟುಂಬಗಳು ತೊಡಗಿಸಿಕೊಂಡಿವೆ. ಈ ಸಂಘಗಳ ಸಾಲದ ಮೀತಿಯನ್ನು ₹20 ಲಕ್ಷಕ್ಕೆ ಏರಿಸಲಾಗಿದೆ’ ಎಂದರು.

‘ಕೋವಿಡ್‌ ನಿಯಂತ್ರಣಕ್ಕೆ ಜಾರಿಗೆ ತಂದ ಲಾಕ್‌ಡೌನ್‌, ಸೀಲ್‌ಡೌನ್‌ ಎಲ್ಲಕ್ಕೂ ಜನರು ಸಹಕಾರ ನೀಡಿದ್ದಾರೆ ಜತೆಗೆ ಕೈಲಾದಮಟ್ಟಿಗೆ ಬಡವರಿಗೆ ನೆರವು ನೀಡಿದ್ದಾರೆ. ಅಧಿಕಾರಿ ವರ್ಗದವರೂ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಜೀವ ಲೆಕ್ಕಿಸದೆ ಕೆಲಸ ಮಾಡುತ್ತಿರುವಪತ್ರಕರ್ತರಿಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೆರವು ಕೊಡಬೇಕು’ ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ರಾಮಲಿಂಗಪ್ಪ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಮರಳುಕುಂಟೆ ಕೃಷ್ಣಮೂರ್ತಿ, ಶ್ರೀನಿವಾಸ್ ರೆಡ್ಡಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಪಿ.ನಾಗೇಶ್, ಉಪಾಧ್ಯಕ್ಷೆ ಲೀಲಾವತಿ ಶ್ರೀನಿವಾಸ್ ಮುಖಂಡರಾದ ಕೃಷ್ಣಾರೆಡ್ಡಿ, ಅಗಲಗುರ್ಕಿ ಚಂದ್ರಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.