ADVERTISEMENT

ಚಿಕ್ಕಬಳ್ಳಾಪುರ: ಭೀತಿಯ ನಡುವೆಯೇ ಶ್ರಾವಣ ಸಡಗರ

ವಿವಿಧ ದೇವಾಲಯಗಳಲ್ಲಿ ನಿತ್ಯ ಪೂಜೆಗೆ ಸಕಲ ಸಿದ್ಧತೆ, ಕೋವಿಡ್ 19 ಮಾರ್ಗಸೂಚಿ ಅನುಸಾರ ದರ್ಶನಕ್ಕೆ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 13:32 IST
Last Updated 20 ಜುಲೈ 2020, 13:32 IST
ಅಮವಾಸ್ಯೆ ದಿನವಾದ ಸೋಮವಾರ ಚಿಕ್ಕಬಳ್ಳಾಪುರದ ಮರುಳಸಿದ್ಧೇಶ್ವರ ದೇವಾಲಯದಲ್ಲಿ ಭಕ್ತರು ಪೂಜೆ ಸಲ್ಲಿಸಿದರು.
ಅಮವಾಸ್ಯೆ ದಿನವಾದ ಸೋಮವಾರ ಚಿಕ್ಕಬಳ್ಳಾಪುರದ ಮರುಳಸಿದ್ಧೇಶ್ವರ ದೇವಾಲಯದಲ್ಲಿ ಭಕ್ತರು ಪೂಜೆ ಸಲ್ಲಿಸಿದರು.   

ಚಿಕ್ಕಬಳ್ಳಾಪುರ: ಶ್ರಾವಣ ಮಾಸ ಮಂಗಳವಾರ (ಜುಲೈ 21) ಆರಂಭವಾಗಲಿದೆ. ಶಿವ, ಗಣಪತಿ, ವೆಂಕಟೇಶ್ವರ, ನರಸಿಂಹಸ್ವಾಮಿ, ಆಂಜನೇಯ ಸೇರಿ ವಿವಿಧ ದೇಗುಲಗಳಲ್ಲಿ ನಿತ್ಯ ಪೂಜೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಕೋವಿಡ್-19 ಮಾರ್ಗಸೂಚಿಯಂತೆ ದೇಗುಲಗಳಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಶ್ರಾವಣದ ಮೊದಲ ದಿನ ಮಂಗಳವಾರ ಬಂದಿರುವ ಕಾರಣ ನವದುರ್ಗೆಯರ ದೇಗುಲಗಳನ್ನು ಸ್ವಚ್ಛಗೊಳಿಸುವ ಕಾರ್ಯಭರದಿಂದ ಸಾಗಿದೆ. ಈ ಮಾಸದಲ್ಲಿ ಸಾಮಾನ್ಯವಾಗಿ ದೇಗುಲಕ್ಕೆ ಹೋಗುವ ಭಕ್ತರ ಸಂಖ್ಯೆ ಹೆಚ್ಚು. ಆದರೆ, ಕೊರೊನಾ ಸೋಂಕು ವ್ಯಾಪಿಸುತ್ತಿರುವುದರಿಂದ ಗುಂಪು ಗುಂಪಾಗಿ ದೇಗುಲ ಪ್ರವೇಶಿಸಲು ಅವಕಾಶ ನೀಡದಿರಲು ಹಾಗೂ ತೀರ್ಥ, ಪ್ರಸಾದ ವಿತರಿಸದಿರಲು ಆಡಳಿತ ಮಂಡಳಿ, ಸೇವಾ ಟ್ರಸ್ಟ್‌ಗಳು ತೀರ್ಮಾನಿಸಿವೆ.

ಶಿವನ ಆರಾಧಕರಿಗೆ ಸೋಮವಾರ ಶ್ರೇಷ್ಠ ದಿನವಾದ್ದರಿಂದ ಶ್ರಾವಣ ಮಾಸದ ಎಲ್ಲ ಸೋಮವಾರ ಶಿವನ ಮೂರ್ತಿಗೆ ಜಲಾಭಿಷೇಕ, ಮಹಾರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಬಿಲ್ವಾ ಪತ್ರೆ ಅರ್ಚನೆ ಜತೆಗೆ ವಿವಿಧ ಪುಷ್ಪಗಳಿಂದ ಅಲಂಕರಿಸಲಾಗುತ್ತದೆ.

ADVERTISEMENT

ಶ್ರಾವಣ ಮಾಸದ ಪ್ರತಿ ಶನಿವಾರ ಜಿಲ್ಲೆಯಾದ್ಯಂತ ಲಕ್ಷ್ಮೀ ವೆಂಕಟರಮಣ ಸ್ವಾಮಿ, ನರಸಿಂಹಸ್ವಾಮಿ ದೇವಾಲಯಗಳಲ್ಲಿ ಸಡಗರ, ಸಂಭ್ರಮ ಮನೆ ಮಾಡಲಿದೆ.

ಬಾಗೇಪಲ್ಲಿ ಗಡಿದಂ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯ, ತಲಕಾಯಲ ಬೆಟ್ಟ ವೆಂಕಟರಮಣಸ್ವಾಮಿ, ಆವಲಬೆಟ್ಟದ ಧೇನುಗಿರಿ ಲಕ್ಷ್ಮಿ ನರಸಿಂಹ ದೇವಾಲಯ, ಶ್ರೀನಿವಾಸ ಸಾಗರ ಕೆರೆ ವೆಂಕಟರಮಣಸ್ವಾಮಿ ದೇವಾಲಯ, ನಂದಿ ಬಳಿಯ ನರಸಿಂಹಸ್ವಾಮಿ ಬೆಟ್ಟದಲ್ಲಿರುವ ನರಸಿಂಹಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ಸಿದ್ಧತೆ ಜೋರಾಗಿದೆ.

ಚಿಕ್ಕಬಳ್ಳಾಪುರದ ಕಂದವಾರ ಬಾಗಿಲು ಬಳಿ ಇರುವ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಾಲಯ, ದಿನ್ನೆಹೊಸಹಳ್ಳಿ ರಸ್ತೆಯಲ್ಲಿರುವ ಜಾಲಾರಿ ನರಸಿಂಹಸ್ವಾಮಿ, ಚಿಕ್ಕದಾಸರಹಳ್ಳಿ ಗುಡ್ಡದ ಮೇಲಿನ ಶ್ರೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ಈಗಾಗಲೇ ಶ್ರಾವಣದ ಸಡಗರ ಮನೆ ಮಾಡಿದೆ.

ಪ್ರತಿ ವರ್ಷದಂತೆ ದೇವಾಲಯದಲ್ಲಿ ವಿಶೇಷ ಅಭಿಷೇಕ, ಅಲಂಕಾರ, ಪೂಜೆ, ಮಹಾಮಂಗಳಾರತಿ, ಹವನದಂತಹ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಉಳಿದಂತೆ ಸರ್ಕಾರದ ಮಾರ್ಗಸೂಚಿ ಅನುಸಾರ ಭಕ್ತರಿಗೆ ದರ್ಶನದ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎನ್ನುತ್ತಾರೆ ಅರ್ಚಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.