ADVERTISEMENT

ಕೃಷಿ ಖುಷಿ | ಕೈ ತುಂಬಾ ಲಾಭ ತಂದ ವೀಳ್ಯದೆಲೆ

ಎಂ.ರಾಮಕೃಷ್ಣಪ್ಪ
Published 18 ಫೆಬ್ರುವರಿ 2024, 5:31 IST
Last Updated 18 ಫೆಬ್ರುವರಿ 2024, 5:31 IST
ಚಿಂತಾಮಣಿ ತಾಲ್ಲೂಕಿನ ದ್ವಾರಪಲ್ಲಿ ಗ್ರಾಮದ ವೀಳ್ಯದೆಲೆ ತೋಟದಲ್ಲಿ ಮಂಜುನಾಥ್
ಚಿಂತಾಮಣಿ ತಾಲ್ಲೂಕಿನ ದ್ವಾರಪಲ್ಲಿ ಗ್ರಾಮದ ವೀಳ್ಯದೆಲೆ ತೋಟದಲ್ಲಿ ಮಂಜುನಾಥ್   

ಚಿಂತಾಮಣಿ: ತಾಲ್ಲೂಕಿನ ಚಿಲಕಲನೇರ್ಪು ಹೋಬಳಿಯ ಲಕ್ಷ್ಮಣರೆಡ್ಡಿ ಕುಟುಂಬ ಸುಮಾರು 70-75 ವರ್ಷಗಳಿಂದಲೂ ವೀಳ್ಯದೆಲೆ ಬೆಳೆಯಿಂದ ಉತ್ತಮ ಲಾಭಗಳಿಸುತ್ತಿದ್ದಾರೆ.‌

ಲಕ್ಷ್ಮಣರೆಡ್ಡಿ ಮಗ ಡಿ.ಎಲ್.ಮಂಜುನಾಥ್ ಪದವೀಧರನಾದರೂ ಉದ್ಯೋಗ ಅರಸಿಕೊಂಡು ಹೋಗದೆ ಕೃಷಿಯನ್ನು ಕೈಹಿಡಿದು ಬದುಕು ಕಟ್ಟಿಕೊಂಡಿದ್ದಾರೆ. ತಮ್ಮ 25 ಎಕರೆ ಪ್ರದೇಶದಲ್ಲಿ ಟೊಮೆಟೊ, ಕೊತ್ತಂಬರಿ ಸೊಪ್ಪು, ಬೀಟ್‌ರೂಟ್, ಕುಂಬಳಕಾಯಿ, ಎಲೆಕೋಸು, ಕ್ಯಾಪ್ಸಿಕಂ ಮತ್ತಿತರ ತರಕಾರಿ ಬೆಳೆಯುತ್ತಾರೆ. ಸೀಬೆ ತೋಟವಿದೆ. ಅವರಿಗೆ ಲಾಭದಾಯಕವಾಗಿ ತೋರುತ್ತಿರುವುದು ವೀಳ್ಯದೆಲೆ ಬೆಳೆ.

ಮುಕ್ಕಾಲು ಎಕರೆ ಪ್ರದೇಶದಲ್ಲಿ ವೀಳ್ಯದೆಲೆ ಬೆಳೆ ಇದೆ. ಅವರ ತಂದೆ-ತಾತನ ಕಾಲದಿಂದಲೂ ಬೆಳೆಯುತ್ತಿದ್ದಾರೆ. ವರ್ಷಪೂರ್ತಿ ಇಳುವರಿಯನ್ನು ಕೊಡುವುದು ಈ ಬೆಳೆಯ ವಿಶೇಷವಾಗಿದೆ. ಬೇಸಿಗೆಯಲ್ಲಿ ಇಳುವರಿ ಸ್ವಲ್ಪ ಕಡಿಮೆಯಾಗುತ್ತದೆ. ಆದರೂ ಫಸಲು ಸಿಗುತ್ತದೆ. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯಬಹುದು ಎಂದು ಮಂಜುನಾಥ್ ಹೇಳುತ್ತಾರೆ.

ADVERTISEMENT

ವೀಳ್ಯದೆಲೆ ಬೆಳೆಯನ್ನು ಸಾಮಾನ್ಯವಾಗಿ ವಾರಕ್ಕೆ ಎರಡು ಬಾರಿ ಕೊಯ್ಲು ಮಾಡುತ್ತಾರೆ. ವಾರಕ್ಕೆ 300 ಕಟ್ಟು ಎಲೆ ಸಿಗುತ್ತದೆ. ಒಂದು ಕಟ್ಟಿಗೆ ಕೆಲವೊಮ್ಮೆ ₹120-150 ಇರುತ್ತದೆ. ಕೆಲವೊಮ್ಮೆ ₹50-60 ಇರುತ್ತದೆ. ಸರಾಸರಿ ₹70-80 ಮಾರಾಟವಾಗುತ್ತದೆ. ವರ್ಷದ ಎಲ್ಲ ಕಾಲಮಾನಗಳಲ್ಲೂ ವೀಳ್ಯದೆಲೆಗೆ ಬೇಡಿಕೆ ಇರುತ್ತದೆ. ಮದುವೆ, ಮತ್ತಿತರ ಶುಭ ಸಮಾರಂಭ ಮತ್ತು ಹಬ್ಬ-ಹರಿದಿನಗಳಲ್ಲಿ ಹೆಚ್ಚಿನ ಬೇಡಿಕೆ ಹಾಗೂ ಬೆಲೆ ಇರುತ್ತದೆ. ಸ್ಥಳೀಯವಾಗಿ ಚಿಂತಾಮಣಿ ಮತ್ತು ಚೇಳೂರಿನಲ್ಲಿ ಮಾರಾಟ ಮಾಡುತ್ತಾರೆ.

ಕನಿಷ್ಠ ವಾರಕ್ಕೆ 300 ಕಟ್ಟು ಉತ್ಪನ್ನ ದೊರೆತರೂ ₹20-25 ಸಾವಿರ, ತಿಂಗಳಿಗೆ ಒಂದು ಲಕ್ಷ, ವರ್ಷಕ್ಕೆ ₹12 ಲಕ್ಷ ಆದಾಯ ಪಡೆಯುತ್ತಾರೆ. ಸಂಪೂರ್ಣವಾಗಿ ಸಾವಯವ ಕೃಷಿ ಮಾಡುತ್ತಾರೆ. ಯಾವುದೇ ರೀತಿಯ ರಾಸಾಯನಿಕಗಳನ್ನು ಬಳಸದೆ ಕೊಟ್ಟಿಗೆ ಗೊಬ್ಬರವನ್ನೇ ಬಳಕೆ ಮಾಡುತ್ತಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಹಾಗೂ ಬೆಲೆ ದೊರೆಯುತ್ತದೆ ಎನ್ನುವುದು ಅವರ ಅನುಭವದ ಮಾತು.

ಅವರ ತೋಟದಲ್ಲಿ ಮೂರು ಕೊಳವೆ ಬಾವಿ, ಒಂದು ತೆರೆದ ಬಾವಿ ಇದೆ. 3 ಕೃಷಿ ಹೊಂಡ ಮಾಡಿದ್ದಾರೆ. ಅವರು ಯಾವುದೇ ಒಂದು ಬೆಳೆಗೆ ಜೋತು ಬೀಳದೆ ವಿವಿಧ ಬೆಳೆ ಬೆಳೆಯುತ್ತಾರೆ. ಒಂದು ಬೆಳೆ ಕೈಕೊಟ್ಟರೂ ಮತ್ತೊಂದು ಕೈಹಿಡಿಯುತ್ತದೆ.

ಹೈನುಗಾರಿಕೆಯನ್ನು ಕೈಗೊಂಡಿದ್ದಾರೆ. ಹಸುಗಳನ್ನು ಸಾಕುವುದರಿಂದ ಹಾಲಿನ ಜತೆಗೆ ಕೃಷಿ ಬೆಳೆಗಳಿಗೆ ಅಗತ್ಯವಾದ ಕೊಟ್ಟಿಗೆ ಗೊಬ್ಬರ ದೊರೆಯುತ್ತದೆ. ಹಾಲು ಮಾರಾಟ ಮಾಡುತ್ತಾರೆ. ಸಗಣಿ, ಗಂಜಲದಿಂದ ಉತ್ತಮ ಕೊಟ್ಟಿಗೆ ಗೊಬ್ಬರ ಉತ್ಪತ್ತಿಯಾಗುತ್ತದೆ.

ಕೃಷಿಯನ್ನು ಶ್ರದ್ಧೆಯಿಂದ ಹಾಗೂ ವೈಜ್ಞಾನಿಕವಾಗಿ ಮಾಡಿದರೆ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು. ಆದರೆ ಕೃಷಿಕರದು ಕಷ್ಟಕರವಾದ ಕೆಲಸ. ಹಗಲು-ರಾತ್ರಿ, ಮಳೆ-ಬಿಸಿಲು ಎನ್ನದೆ ದುಡಿಯಬೇಕಾಗುತ್ತದೆ. ಅನಾವೃಷ್ಟಿಯಿಂದ ಬೆಳೆ ನಷ್ಟ, ಜತೆಗೆ ಬೆಲೆ ಕುಸಿತದ ಕಾರಣಗಳಿಂದ ಇತ್ತೀಚಿನ ವರ್ಷಗಳಲ್ಲಿ ಕೃಷಿಯಿಂದ ವಿಮುಖರಾಗಿ ಬೇರೆ ಬೇರೆ ಕ್ಷೇತ್ರಗಳಿಗೆ ವಲಸೆ ಹೋಗುತ್ತಿದ್ದಾರೆ ಎನ್ನುತ್ತಾರೆ ಮಂಜುನಾಥ್.

ಸರ್ಕಾರ ಕೃಷಿ ಕ್ಷೇತ್ರಕ್ಕೆ ನೀಡುತ್ತಿರುವ ಸಬ್ಸಿಡಿ ಅಧಿಕಾರಿಗಳು ಮತ್ತು ಕಂಪನಿಗಳ ಪಾಲಾಗುತ್ತದೆ. ಸಬ್ಸಿಡಿಯಲ್ಲಿ ಕೊಡುವ ಕೃಷಿ ಪರಿಕರಗಳು ಕಳಪೆ. ಸಬ್ಸಿಡಿಯಿಂದ ಕೊಡುವ ಬೆಲೆಗೆ ಅಂಗಡಿಯಲ್ಲೂ ದೊರೆಯುತ್ತವೆ. ಶೇ 5ರಷ್ಟು ಹೆಚ್ಚುವರಿ ಇರುತ್ತದೆ.
ಮಂಜುನಾಥ್, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.