ADVERTISEMENT

ಬಾಗೇಪಲ್ಲಿ: ಮಾರುಕಟ್ಟೆಯೇ ತರಕಾರಿ ತ್ಯಾಜ್ಯ ತಾಣ

ಬೆಳಿಗ್ಗೆ ಅಥವಾ ಸಂಜೆ ವ್ಯಾಪಾರ ವಹಿವಾಟಿಗೆ ಪರ-ವಿರೋಧ; ಆಡಳಿತ ಮಂಡಳಿಗೆ ಗೊಂದಲ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 4:23 IST
Last Updated 1 ಫೆಬ್ರುವರಿ 2021, 4:23 IST
ಬಾಗೇಪಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲೇ ಕೊಳೆಯುತ್ತಿರುವ ತರಕಾರಿ ತ್ಯಾಜ್ಯ
ಬಾಗೇಪಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲೇ ಕೊಳೆಯುತ್ತಿರುವ ತರಕಾರಿ ತ್ಯಾಜ್ಯ   

ಬಾಗೇಪಲ್ಲಿ: ಮಾರುಕಟ್ಟೆ ಪ್ರಾಂಗಣದಲ್ಲಿ ಕೊಳೆತ ತರಕಾರಿ, ತರಕಾರಿಗಳ ತ್ಯಾಜ್ಯ, ಕಸ-ಕಡ್ಡಿಗಳು. ತರಕಾರಿ, ಟೊಮೆಟೊಗಳು ಎಲ್ಲೆಂದರಲ್ಲಿ ರಾಶಿರಾಶಿ. ದುರ್ವಾಸನೆ, ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ, ರೈತರಿಗೆ, ಕೃಷಿ ಕೂಲಿಕಾರ್ಮಿಕರಿಗೆ ಕುಡಿಯುವ ನೀರು ಇಲ್ಲ. ಹೀಗೆ ಹತ್ತು ಹಲವಾರು ಸಮಸ್ಯೆಗಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಪ್ರತಿನಿತ್ಯ ಕಾಣಿಸುತ್ತಿದೆ.

ತಾಲ್ಲೂಕಿನಲ್ಲಿ ಯಾವುದೇ ನದಿ ನಾಲೆಗಳು ಇಲ್ಲ. ರೈತರು ಮಳೆಯಾಧರಿತ ಬೆಳೆಗಳ ಜೊತೆಗೆ, ತುಂತುರುಹನಿ ನೀರಾವರಿ, ಕೊಳವೆಬಾವಿಗಳ ಮೂಲಕ ಟೊಮೆಟೊ, ಕ್ಯಾರೇಟ್, ಬೀಟ್ ರೂಟ್, ಕ್ಯಾಪ್ಸಿಕಾಂ, ಮೂಲಂಗಿ, ಈರುಳ್ಳಿ, ಬೆಳ್ಳುಳ್ಳಿ, ಬೀನ್ಸ್, ಕೊತ್ತಂಬರಿ, ಪುದೀನಾ ನಂತಹ ತರಕಾರಿಗಳನ್ನು ರೈತರು ಹೆಚ್ಚಾಗಿ ಬೆಳೆದು, ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಾರೆ. ಇಟ್ಟಿರುವ ಬೆಳೆಗಳಿಗೆ ಖರ್ಚು, ಕೂಲಿ ಹಣ ಸಿಗದೇ ಹಾಗೂ ತರಕಾರಿಗಳಿಗೆ ಕಡಿಮೆ ಬೆಲೆ ಸಿಕ್ಕರೆ, ತರಕಾರಿಗಳನ್ನು ರಾಶಿಗಟ್ಟಲೇ ಪ್ರಾಂಗಣದ ರಸ್ತೆ ಹಾಗೂ ತಿಪ್ಪೆಗುಂಡಿಗೆ ಬೀಸಾಡುತ್ತಿದ್ದಾರೆ.

‘ಕೂಲಿಕಾರ್ಮಿಕರು, ಮಂಡಿ ಮಾಲೀಕರು ಹಾನಿಯಾದ ಹಾಗೂ ಕೊಳೆತ ಟೊಮೆಟೊ, ಹಾಗೂ ತರಕಾರಿ
ಗಳನ್ನು ಕಸದ ಬುಟ್ಟಿಗೆ ಹಾಕದೇ, ರಸ್ತೆಯಲ್ಲಿ ಎಲ್ಲೆಂದರಲ್ಲಿ ಬೀಸಾಡುತ್ತಿದ್ದಾರೆ. ಪ್ರಾಂಗಣದಲ್ಲಿ ಸ್ವಚ್ಛತೆಗೆ ಲಕ್ಷಾಂತರ ಹಣ ನೀಡಲಾಗುತ್ತಿದೆ. ಆದರೆ ಸ್ವಚ್ಛತೆ ಮರೀಚಿಕೆ ಆಗಿದೆ. ಇದರಿಂದ ರಸ್ತೆಯೆಲ್ಲಾ ಕೊಳೆತ, ಹಾನಿಯಾದ ಟೊಮೆಟೊಗಳ ರಾಶಿಗಟ್ಟಲೇ ಇದೆ. ಕೊಳೆತ ತರಕಾರಿ, ತ್ಯಾಜ್ಯದಿಂದ ದುರ್ನಾತ ಬೀರುತ್ತಿದೆ. ಜನರು ಮೂಗುಮುಚ್ಚಿಕೊಂಡು ಸಂಚರಿಸಬೇಕಾಗಿದೆ. ಕೊಳೆತ ಹಾಗೂ ತ್ಯಾಜ್ಯ ತರಕಾರಿಗಳ ಮೇಲೆ ಸಂಚರಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ. ಆದರೆ ಸಮಿತಿಯ ಅಧಿಕಾರಿಗಳು ಮಾತ್ರ ತಮಗೇನೂ ಗೊತ್ತಿಲ್ಲ’ ಎಂಬಂತೆ ವರ್ತಿಸುತ್ತಿದ್ದಾರೆ ಎಂಬುದು ರೈತರ ಆರೋಪವಾಗಿದೆ.

ADVERTISEMENT

ತರಕಾರಿ ರಫ್ತು: ವಿಶಾಲವಾದ ಮಾರುಕಟ್ಟೆಯಲ್ಲಿ ಅಂಗಡಿಗಳು, ಮಂಡಿ ಮಾಲೀಕರ ಮಳಿಗೆಗಳು ಇದೆ. ಸಮಿತಿಯ ಕಚೇರಿ, ರೈತ ಭವನವು ಇದೆ. ಕೃಷಿ ಮಾರುಕಟ್ಟೆಯಲ್ಲಿ ಕಳೆದ 2 ವರ್ಷಗಳಿಗೆ ಹೋಲಿಸಿದರೆ, ಸಗಟು ವ್ಯಾಪಾರ-ವಹಿವಾಟುಗಳು ಹೆಚ್ಚಾಗಿದೆ. ಇದರಿಂದ ಬೆಂಗಳೂರಿನ ಕಡೆಯಿಂದ ಟಿ.ಬಿ.ಕ್ರಾಸ್ ಮೂಲಕ ಪಕ್ಕದ ಆಂಧ್ರಪ್ರದೇಶ, ತಮಿಳುನಾಡು, ಮದ್ಯಪ್ರದೇಶ, ಬಿಹಾರ, ರಾಜಸ್ಥಾನ, ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳಿಂದ ಮಾರುಕಟ್ಟೆಗೆ ತರಕಾರಿ ವ್ಯಾಪಾರಸ್ಥರು ಬರುತ್ತಾರೆ. ಇಲ್ಲಿನ ತರಕಾರಿ ವಿದೇಶಗಳಿಗೆ ರಫ್ತು ಆಗುತ್ತದೆ.

ಕಾಂಪೌಂಡ್‌ ಇಲ್ಲ: ಪ್ರಾಂಗಣದಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕ ಒಂದು ವರ್ಷದಿಂದ ಕೆಟ್ಟಿದೆ. ಶೌಚಾಲಯಗಳಲ್ಲಿ ಶುಚಿತ್ವ ಇಲ್ಲ. ರೈತ ಭವನ ಇದ್ದರೂ, ಪ್ರಯೋಜನಕ್ಕೆ ಬಾರದಂತಾಗಿದೆ. ಮುಖ್ಯರಸ್ತೆಗೆ ಹೊಂದಿಕೊಂಡಂತೆ ಪ್ರಾಂಗಣದ ಪಕ್ಕದಲ್ಲಿ ಕಾಂಪೌಂಡು ಇಲ್ಲ. ಮುಖ್ಯರಸ್ತೆಯ ಪಾದಚಾರಿ ಮಾರ್ಗದಲ್ಲಿ ಕೆಲ ವ್ಯಾಪಾರಿಗಳು ತರಕಾರಿಗಳ ಮಾರಾಟ ಮಾಡುತ್ತಿದ್ದಾರೆ. ಪ್ರಾಂಗಣಕ್ಕೆ ನೂರಾರು ವಾಹನಗಳು ಸಂಚರಿಸುತ್ತಿದೆ. ಕಿರಿದಾದ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಲು ಆಗುತ್ತಿಲ್ಲ. ಮುಖ್ಯರಸ್ತೆಯ ಪಾದಚಾರಿ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಜನರ ಸುಗಮ ಸಂಚಾರಕ್ಕೆ ತೊಂದರೆ ಆಗಿದೆ.

ಬೆಳಿಗ್ಗೆ ಮಾರುಕಟ್ಟೆ ಇರಲಿ ಎಂಬುದು ರೈತರವಾದವಾದರೆ, ಕೆಲವರು ಸಂಜೆ ಇರಲಿ ಎಂಬುದು ವಾದವಾಗಿದೆ. ರೈತರು ಕೂಲಿಯವರನ್ನು ಇಟ್ಟು ತರಕಾರಿಗಳನ್ನು ದಿನವೆಲ್ಲಾ ಬಿಡಿಸಿ, ರಾತ್ರಿಗೆ ಸಾಗಿಸುತ್ತಾರೆ. ಆದರೆ ಬೆಳಗ್ಗೆಯೇ ತರಕಾರಿಗಳನ್ನು ಕಿತ್ತು ಮಧ್ಯಾಹ್ನ ಸಾಗಿಸಿದರೆ, ತಾಜಾ ತರಕಾರಿ ಮಾರಾಟಕ್ಕೆ ಅನುಕೂಲ ಆಗುತ್ತದೆ. ಬೆಳಿಗ್ಗೆ ಹರಾಜು, ಮಾರಾಟವಾದರೆ, ತರಕಾರಿ ಕೊಳೆತಂತಾಗುತ್ತದೆ. ಇದರಿಂದ ಸಮಿತಿಯ ಆಡಳಿತ ಮಂಡಳಿಯವರು, ಅಧಿಕಾರಿಗಳು ರೈತರ ಮನವಿಗೆ ಬೆಳಿಗ್ಗೆ 5ರಿಂದ 10 ಗಂಟೆಯವರಿಗೂ ಮಾರುಕಟ್ಟೆ ವ್ಯಾಪಾರ-ವಹಿವಾಟು ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿ
ದ್ದಾರೆ. ಇದರಿಂದ ಕೆಲವರು ವಿರೋಧ ವ್ಯಕ್ತಪಡಿಸಿರುವುದರಿಂದ ಇದರಿಂದ ಆಡಳಿತ ಮಂಡಳಿಯವರಿಗೆ, ಅಧಿಕಾರಿಗಳಿಗೆ ಗೊಂದಲ ಸೃಷ್ಟಿಯಾಗಿದೆ.

ಸಭೆಯಲ್ಲಿ ತೀರ್ಮಾನ: ‘ಬಹುತೇಕ ರೈತರು ಬೆಳಗ್ಗೆಯೇ ವ್ಯಾಪಾರ ವಹಿವಾಟು ಮಾಡಬೇಕು ಎಂದಿದ್ದಾರೆ. ಕೆಲವರು ಮಾತ್ರ ಸಂಜೆ ಹೊತ್ತಿನಲ್ಲಿ ವ್ಯಾಪಾರ ವಹಿವಾಟು ಮಾಡಬೇಕು ಎನ್ನುತ್ತಿದ್ದಾರೆ. ಫೆ.5ರ ಶುಕ್ರವಾರ ಮಾರುಕಟ್ಟೆ ರಜಾದಿನದಂದು ಸಭೆ ಕರೆಯಲಾಗಿದೆ. ಅಂತಿಮವಾಗಿ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗುವುದು. ಶುದ್ಧ ಕುಡಿಯುವ ನೀರಿನ ಘಟಕ ಸಿದ್ಧಪಡಿಸಿ, ನೀರು ಕಲ್ಪಿಸಲಾಗುವುದು. ಶುಚಿತ್ವ ಕಾಪಾಡುವಂತೆ ತಿಳಿಸಲಾಗಿದೆ’ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಎಸ್.ಸೋಮಶೇಖರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.