ADVERTISEMENT

ಶಿಡ್ಲಘಟ್ಟ | ಶಾಲೆಯ ಪ್ರಗತಿಗೆ ಪಣತೊಟ್ಟಿರುವ ಎಸ್.ದೇವಗಾನಹಳ್ಳಿ ಶಾಲೆಯ ಶಿಕ್ಷಕರು

ಡಿ.ಜಿ.ಮಲ್ಲಿಕಾರ್ಜುನ
Published 6 ಜನವರಿ 2024, 6:28 IST
Last Updated 6 ಜನವರಿ 2024, 6:28 IST
ಶಿಡ್ಲಘಟ್ಟ ತಾಲ್ಲೂಕಿನ ಎಸ್.ದೇವಗಾನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು
ಶಿಡ್ಲಘಟ್ಟ ತಾಲ್ಲೂಕಿನ ಎಸ್.ದೇವಗಾನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು   

ಶಿಡ್ಲಘಟ್ಟ: ಅತ್ಯಂತ ಹಿಂದುಳಿದ ಪ್ರದೇಶದಲ್ಲಿರುವ ಹಾಗೂ ಹೆಚ್ಚಾಗಿ ಕೂಲಿ ಕಾರ್ಮಿಕರ ಮಕ್ಕಳೇ ಓದುವ ಎಸ್.ದೇವಗಾನಹಳ್ಳಿ ಶಾಲೆಯ ಮಕ್ಕಳನ್ನು ನೋಡಿದರೆ  ಖಾಸಗಿ ಶಾಲೆಯ ಮಕ್ಕಳಂತೆ ಕಾಣುತ್ತಾರೆ. ಇದಕ್ಕೆ ಮೂಲ ಕಾರಣ ಶಿಕ್ಷಕರು.

ಶಾಲೆಯ ಶಿಕ್ಷಕರು ದಾನಿಗಳ ನೆರವು ಪಡೆದು ಹಾಗೂ ತಮ್ಮ ಸ್ವಂತ ಹಣ ಹಾಕಿ ಈ ಶಾಲೆಯ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪಣತೊಟ್ಟಿದ್ದಾರೆ. ಜಿಲ್ಲಾ ಪಂಚಾಯಿತಿ ನೆರವಿನಿಂದ ಶಾಲೆ ದುರಸ್ತಿಗೊಳಿಸಿ, ಬಣ್ಣ ಬಳಿಸಲಾಗಿದೆ. ಈ ಶಾಲೆಯ ಮಕ್ಕಳಿಗೆ ಸರ್ಕಾರದ ಸಮವಸ್ತ್ರವಲ್ಲದೆ, ಬುಧವಾರಕ್ಕೊಂದು ಮತ್ತು ಶನಿವಾರಕ್ಕೊಂದು ಬೇರೆ ಬೇರೆ ಬಣ್ಣದ ಟ್ರಾಕ್ ಸೂಟ್‌ಗಳನ್ನು ನೀಡಲಾಗಿದೆ. ಪ್ರತಿಯೊಬ್ಬರಿಗೂ ಗುರುತಿನ ಚೀಟಿ ನೀಡಲಾಗಿದೆ. ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಗ್ರಂಥಾಲಯವಿದ್ದು, ಇದರ ಸದುಪಯೋಗಪಡಿಸಿಕೊಳ್ಳಲು ಪ್ರತಿದಿನ ಸಂಜೆ ಒಂದು ಗಂಟೆ ಮೀಸಲಿಟ್ಟಿದ್ದಾರೆ. ವಿದ್ಯಾರ್ಥಿಗಳಿಗಾಗಿ ಐಸಿಎಸ್‌ಸಿ ಮತ್ತು ಸಿಬಿಎಸ್‌ಸಿ ಪುಸ್ತಕಗಳು ಗ್ರಂಥಾಲಯದಲ್ಲಿದ್ದು ಮಕ್ಕಳು ಓದುವ ಅಭಿರುಚಿಯನ್ನು ಬೆಳೆಸಿಕೊಂಡಿದ್ದಾರೆ.

1927ರಲ್ಲಿ ಸ್ಥಾಪನೆಯಾದ ಎಸ್.ದೇವಗಾನಹಳ್ಳಿ ಸರ್ಕಾರಿ ಹಿರಿಯ ಶಾಲೆಯು ಶತಮಾನ ಆಚರಣೆಯ ಹೊಸ್ತಿಲಿನಲ್ಲಿದೆ. ಪ್ರಸ್ತುತ 1 ರಿಂದ 8ನೇ ತರಗತಿಯವರೆಗೆ 55 ವಿದ್ಯಾರ್ಥಿಗಳು ಓದುತ್ತಿದ್ದು, ಐದು ಮಂದಿ ಶಿಕ್ಷಕರಿದ್ದಾರೆ.

ADVERTISEMENT

ಶಾಲೆಯ ಆವರಣದಲ್ಲಿ ಹೂ ಹಣ್ಣು ಬಿಡುವ ಸುಮಾರು ಅರವತ್ತಕ್ಕೂ ಹೆಚ್ಚು ಗಿಡ ಮರಗಳಿವೆ. ಶಾಲೆಗೆ ಹಿರಿಯ ವಿದ್ಯಾರ್ಥಿ ಟಿವಿಯನ್ನು ಕೊಡುಗೆಯಾಗಿ ನೀಡಿದ್ದು, ಮಕ್ಕಳ ಶೈಕ್ಷಣಿಕ ಕಲಿಕೆಗೆ ನೆರವಾಗಿದೆ.

ಶಾಲೆಗೆ ಕಂಪ್ಯೂಟರ್ ಮತ್ತು ಪ್ರೊಜೆಕ್ಟರ್ ಅಗತ್ಯವಿದೆ. ಕೆಲವು ದಾನಿಗಳನ್ನು ಸಂಪರ್ಕಿಸಿದ್ದೇವೆ. ಅದು ಬಂದರೆ ಮಕ್ಕಳ ಕಲಿಕೆಗೆ ನೆರವಾಗುತ್ತದೆ ಎಂಬುದು ಶಿಕ್ಷಕರ ಮಾತಾಗಿದೆ.

ನಮ್ಮಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಓದುವ ಹವ್ಯಾಸ ಬೆಳೆಸುತ್ತಿದ್ದೇವೆ. ನಮ್ಮ ಶಾಲೆಯ ಮಕ್ಕಳು ಯಾವ ಖಾಸಗಿ ಶಾಲೆಯ ಮಕ್ಕಳಿಗೂ ಕಮ್ಮಿಯಿಲ್ಲ. ಅವರಲ್ಲಿ ಆತ್ಮವಿಶ್ವಾಸ ಮೂಡಿಸುವುದು ನಮ್ಮ ಪ್ರಥಮ ಆದ್ಯತೆಯಾಗಿದೆ.
ವಿ.ರಾಜು, ಶಿಕ್ಷಕ
ನಮ್ಮ ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣ ಇರುವುದು ನೋಡಿ ಖುಷಿಯಾಗುತ್ತದೆ. ಶಿಕ್ಷಕರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ಸರ್ಕಾರಿ ಶಾಲೆ ಹೇಗೆ ಅಭಿವೃದ್ಧಿಯಾಗುತ್ತದೆ ಎನ್ನುವುದಕ್ಕೆ ನಮ್ಮ ಶಾಲೆಯೇ ಸಾಕ್ಷಿ. ಪ್ರತಿ ಕ್ಷಣ ಮಕ್ಕಳ ಪ್ರಗತಿಗೆ ಶ್ರಮಿಸುವ ಶಿಕ್ಷಕರು ಈ ಶಾಲೆಯ ಹೆಮ್ಮೆ
ಸೋಮಶೇಖರ್, ಎಸ್‌ಡಿಎಂಸಿ ಅಧ್ಯಕ್ಷ
ನಮ್ಮ ಶಾಲೆಯ ವಾತಾವರಣ ತುಂಬಾ ಚೆನ್ನಾಗಿದೆ. ಶಿಕ್ಷಕರು ಚೆನ್ನಾಗಿ ಕಲಿಸುತ್ತಾರೆ. ನಮ್ಮನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ  ಮೆಟ್ರೊ ರೈಲಿನಲ್ಲಿ ಪ್ರಯಾಣ ಮಾಡಿಸಿದರು. ಹೇಗೆ ಟಿಕೆಟ್‌ ತೆಗೆದುಕೊಳ್ಳಬೇಕು. ಹೇಗೆ ಒಳಗೆ ಹೋಗಬೇಕು ಎಂಬುದನ್ನು ನಮ್ಮ ಕೈಯಲ್ಲೇ ಮಾಡಿಸಿ ಕಲಿಸಿದರು
ನವ್ಯಶ್ರೀ, 8ನೇ ತರಗತಿ ವಿದ್ಯಾರ್ಥಿ
ಶಿಡ್ಲಘಟ್ಟ ತಾಲ್ಲೂಕಿನ ಎಸ್.ದೇವಗಾನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.