ADVERTISEMENT

ಚಿಂತಾಮಣಿ: ಪಾಠ ಮಾಡಲು ಬೋಧಕರೇ ಇಲ್ಲ

ಮೂಲಾಧಾರ ಅತಿಥಿ ಉಪನ್ಯಾಸಕರ ಕೊರತೆ; ಪದವಿ ಕಾಲೇಜುಗಳಲ್ಲಿ ನಡೆಯದ ತರಗತಿ

ಎಂ.ರಾಮಕೃಷ್ಣಪ್ಪ
Published 20 ಜನವರಿ 2021, 2:06 IST
Last Updated 20 ಜನವರಿ 2021, 2:06 IST
ಚಿಂತಾಮಣಿಯ ಸರ್ಕಾರಿ ಬಾಲಕರ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ
ಚಿಂತಾಮಣಿಯ ಸರ್ಕಾರಿ ಬಾಲಕರ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ   

ಚಿಂತಾಮಣಿ: ಸರ್ಕಾರ ಪದವಿ ಕಾಲೇಜುಗಳನ್ನು ಜ.15ರಿಂದ ಆರಂಭಿಸಿದೆ. ವಿದ್ಯಾರ್ಥಿಗಳು ಉತ್ಸಾಹದಿಂದ ಕಾಲೇಜುಗಳಿಗೆ ಹಾಜರಾಗುತ್ತಿದ್ದಾರೆ. ಆದರೆ, ಸಮರ್ಪಕವಾಗಿ ತರಗತಿಗಳು ನಡೆಯದೆ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ಹೋಗುತ್ತಿದ್ದಾರೆ. ಇದಕ್ಕೆ ಕಾರಣ ಬೋಧಕರಿಲ್ಲದಿರುವುದು.

ಕಾಲೇಜಿನಲ್ಲಿ ದಿನಕ್ಕೆ ಒಂದೆರಡು ತರಗತಿಗಳು ಮಾತ್ರ ನಡೆಯುತ್ತವೆ. ಒಂದೆರಡು ದಿನ ಉತ್ಸಾಹದಿಂದ ಬಂದ ವಿದ್ಯಾರ್ಥಿಗಳು ನಂತರ ಕಾಲೇಜಿಗೆ ಬರುವುದನ್ನು ನಿಲ್ಲಿಸಿ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಕಾರಣ, ಬಹುತೇಕ ಕಾಲೇಜುಗಳು ನಡೆಯುತ್ತಿರುವುದು ಅತಿಥಿ ಉಪನ್ಯಾಸಕರಿಂದ. ಅತಿಥಿ ಉಪನ್ಯಾಸಕರ ನೇಮಕದ ಬಗ್ಗೆ ಆದೇಶ ಹೊರಡಿಸದಿರುವುದು ವಿದ್ಯಾರ್ಥಿಗಳ ಸಂಕಷ್ಟಕ್ಕೆ ಕಾರಣವಾಗಿದೆ.

ಹತ್ತು ತಿಂಗಳ ನಂತರ ಪದವಿ ಕಾಲೇಜುಗಳನ್ನು ಆರಂಭಿಸಲು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತು. ಆದರೆ, ಅತಿಥಿ ಉಪನ್ಯಾಸಕರ ನೇಮಕದ ಬಗ್ಗೆ ಮರೆತಿದೆ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ADVERTISEMENT

ಶೇ 50ರಷ್ಟು ಉಪನ್ಯಾಸಕರಿಕಲ್ಲ: ನಗರದ ಸರ್ಕಾರಿ ಬಾಲಕರ ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಸುಮಾರು 900 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬಿಎಸ್ಸಿಯಲ್ಲಿ 3, ಬಿ.ಎನಲ್ಲಿ 2, ಬಿ.ಕಾಂ, ಬಿ.ಬಿ.ಎಂ ಸೇರಿ 7 ವಿಭಾಗಗಳಿವೆ. ಜತೆಗೆ ಸ್ನಾತಕೋತ್ತರದ ಎಂ.ಕಾಂ, ಎಂ.ಎಸ್ಸಿ, ಎಂ.ಎ ಮೂರು ವಿಭಾಗಗಳು ನಡೆಯುತ್ತಿವೆ. ಶೇ 50ರಷ್ಟು ಬೋಧಕರ ಹುದ್ದೆಗಳು ಖಾಲಿ ಇವೆ.

ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ, ಸಸ್ಯಶಾಸ್ತ್ರ ವಿಭಾಗದಲ್ಲಿ ಒಬ್ಬರೂ ಕಾಯಂ ಉಪನ್ಯಾಸಕರಿಲ್ಲ. ರಸಾಯನಶಾಸ್ತ್ರ-1, ಗಣಿತ-1, ಪ್ರಾಣಿಶಾಸ್ತ್ರ ವಿಭಾಗದಲ್ಲಿ ಒಬ್ಬರು ಮಾತ್ರ ಕಾಯಂ ಉನ್ಯಾಸಕರಿದ್ದಾರೆ. ಕಳೆದ ವರ್ಷ 45 ಮಂದಿ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದರು. ಈಗ ಅತಿಥಿ ಉಪನ್ಯಾಸಕರ ನೇಮಕ ಬಗ್ಗೆ ಪ್ರಸ್ತಾಪವೇ ಇಲ್ಲದಿರುವುದು ಪ್ರಾಂಶುಪಾಲರಿಗೆ ತಲೆನೋವಾಗಿದೆ ಎಂದು ಕಾಲೇಜು ಮೂಲಗಳು ತಿಳಿಸಿವೆ.

ಸರ್ಕಾರಿ ಮಹಿಳಾ ಕಾಲೇಜಿನಲ್ಲಿ 2026 ಜನ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಅಲ್ಲೂ ಪದವಿಯಲ್ಲಿ 11 ವಿಭಾಗಗಳು, ಸ್ನಾತಕೋತ್ತರ ವಿಭಾಗದಲ್ಲಿ 4 ವಿಭಾಗಗಳಿವೆ. ಮಂಜೂರಾದ 45 ಹುದ್ದೆಗಳಲ್ಲಿ 27 ಜನ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಹಿಂದಿನ ಲೆಕ್ಕಾಚಾರವಾಗಿದ್ದು ಈಗಿನ ಕಾರ್ಯಭಾರಕ್ಕೆ ಇನ್ನೂ ಹೆಚ್ಚಿನ ಕಾಯಂ ಬೋಧಕರ ಅವಶ್ಯಕತೆ ಇದೆ. ಕಳೆದ ವರ್ಷ 120 ಜನ ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದರು.

‘ಒಂದು ಕೊಠಡಿಯಲ್ಲಿ ಶೇ 50ರಷ್ಟು ವಿದ್ಯಾರ್ಥಿಗಳನ್ನು ಕೂರಿಸಬೇಕು. ಪಾಳಿ ಪದ್ಧತಿಯಲ್ಲಿ ತರಗತಿಗಳನ್ನು ನಡೆಸಿ ಮುಂತಾದ ನಿಯಮಾವಳಿಗಳನ್ನು ಪಾಲಿಸಲು ಸಾಧ್ಯವೇ ಇಲ್ಲ. ಒಂದು ಕೊಠಡಿಯಲ್ಲಿ ಪಾಠ ಮಾಡಲು ಬೋಧಕರಿಲ್ಲದಿರುವಾಗ ಎರಡೆರಡು ಕ್ಲಾಸ್ ತೆಗೆದುಕೊಳ್ಳಲು ಸಾಧ್ಯವೇ? ಯಾವುದೇ ಪೂರ್ವಸಿದ್ಧತೆ ಮಾಡಿಕೊಳ್ಳದೆ ಕಾಲೇಜುಗಳನ್ನು ಆರಂಭಿಸಿದ ಸರ್ಕಾರ ಪಾಠ, ಪ್ರವಚನಗಳ ಕಡೆಗೆ ಗಮನಹರಿಸಿಲ್ಲ. ಕಾಲೇಜುಗಳಲ್ಲಿ ಶೇ 30-40 ಪಾಠಪ್ರವಚಗಳು ನಡೆಯುತ್ತಿಲ್ಲ’ ಎಂದು ವಿದ್ಯಾರ್ಥಿಗಳು ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.