ADVERTISEMENT

ಚಿಂತಾಮಣಿ: ಎಲೆ ಮುದುಡು ರೋಗ ನಿರ್ವಹಣೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಮೇ 2024, 13:15 IST
Last Updated 19 ಮೇ 2024, 13:15 IST
ಟೊಮೆಟೊ ಗಿಡದಲ್ಲಿ ಎಲೆಗಳು ಮುದಿರಿಕೊಂಡಿರುವುದು
ಟೊಮೆಟೊ ಗಿಡದಲ್ಲಿ ಎಲೆಗಳು ಮುದಿರಿಕೊಂಡಿರುವುದು   

ಚಿಂತಾಮಣಿ: ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ನಾಟಿ ಮಾಡಲಾಗಿರುವ ಟೊಮೆಟೊ ಬೆಳೆ ಹೆಚ್ಚಿನ ತಾಪಮಾನದಿಂದ ಗಿಡಗಳ ಬೆಳವಣಿಗೆ ಕುಂಠಿತವಾಗಿದ್ದು, ಇದರ ಜತೆ ಜೊತೆಗೆ ಎಲೆ ಮುದುಡು ನಂಜು ರೋಗ ಮತ್ತು ಸೊರಗು ರೋಗ ಕಾಟದಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

ಈಗಾಗಲೇ ಕೆಲ ತೋಟಗಳಲ್ಲಿ ಈಗಾಗಲೇ ರೋಗ ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇದರ ತೀವ್ರತೆ ಹೆಚ್ಚಾಗುವ ಸಾದ್ಯತೆಗಳಿವೆ.

ಹೀಗಾಗಿ ರೈತರು ಉತ್ತಮ ಇಳುವರಿ ಪಡೆಯಲು ಹಾಗು ಎಲೆ ಮುದುಡು ರೋಗವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಸಮಗ್ರ ಹತೋಟಿ ಕ್ರಮ ಅನುಸರಿಸಲು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಬಿ.ಸ್ವಾತಿ ಸಲಹೆ ನೀಡಿದ್ದಾರೆ.

ADVERTISEMENT

ರೋಗ ನಿರ್ವಹಣೆಗೆ ಕ್ರಮ

ಪ್ರತಿ ಎಕರೆ ಭೂಮಿಗೆ 15 ಟನ್ ಕೊಟ್ಟಿಗೆ ಗೊಬ್ಬರವನ್ನು 100 ಕೆ.ಜಿ. ಬೇವಿನ ಹಿಂಡಿ, 5 ಕೆ.ಜಿ. ಟ್ರೈಕೋಡಮಾರ್‌ ಮತ್ತು 5 ಕೆ.ಜಿ. ಸುಡೋಮೊನಾಸ್ ನಿಂದ ಪುಷ್ಟೀಕರಿಸಿ ಭೂಮಿಗೆ ಹಾಕಬೇಕು.

ರೋಗ ನಿರೋಧಕ ಶಕ್ತಿ ಹೊಂದಿರುವ ಹೈಬ್ರಿಡ್ ಟೊಮೆಟೊ ತಳಿ ನಂದಿ, ವೈಭವ್, ಸಂಕ್ರಾಂತಿ, ಅಭಿಜಿತ್ ಮತ್ತು ಅರ್ಕಾ ರಕ್ಷಕ್ ಅನ್ನು ರೈತರು ಆಯ್ಕೆ ಮಾಡಿಕೊಳ್ಳಬೇಕು.

ಸಸಿಗಳನ್ನು 40 ಮೈಕ್ರಾನ್ ಮೆಷ್ ನೈಲಾನ್ ಪರದೆ ಬಳಸಿರುವ ನರ್ಸರಿಗಳಿಂದ ಪಡೆದು ನಾಟಿ ಮಾಡಬೇಕು. ಸಿಲ್ವರ್ ಬಣ್ಣದ ಪ್ಲಾಸ್ಟಿಕ್ ಹೊದಿಕೆಯನ್ನು ಬಳಸಬೇಕು. 

ಟೊಮೊಟೊ ಸಸಿ ನಾಟಿ ಮಾಡುವ 15 ದಿನ ಮುನ್ನ 4–5 ಸಾಲು ಜೋಳವನ್ನು ತೋಟದ ಸುತ್ತಲು ತಡೆ ಬೆಳೆಯಾಗಿ ಬೆಳೆಯಬೇಕು. ಇದರಿಂದ ಬಿಳಿ ನೊಣ ಹರಡುವುದನ್ನು ತಡೆಯಬಹುದು.

ಸಸಿಗಳನ್ನು ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ ದ್ರಾವಣದಲ್ಲಿ (0.3 ಮಿ.ಲೀ /ಒಂದು ಲೀಟರ್ ನೀರಿಗೆ) ಅದ್ದಿ ನಾಟಿ ಮಾಡಬೇಕು. ಆರಂಭಿಕ ಹಂತದಲ್ಲಿ ರೋಗ ಪೀಡಿತ ಅಂತಹ ಸಸಿಗಳನ್ನು ಕಿತ್ತು ಸುಟ್ಟು ಹಾಕುವುದರಿಂದ ರೋಗ ಹರಡುವುದನ್ನು ತಡೆಗಟ್ಟಬಹುದು.

ಪ್ರತಿ ಎಕರೆಗೆ 10-15 ಹಳದಿ ಅಂಟು ಪಟ್ಟಿಗಳನ್ನು ಗಿಡಕ್ಕಿಂತ ಒಂದು ಅಡಿ ಎತ್ತರದಲ್ಲಿ ಜಿಗ್ ಜಾಗ್ ಮಾದರಿಯಲ್ಲಿ ಕಟ್ಟಬೇಕು. 15 ದಿನಗಳ ಅಂತರದಲ್ಲಿ ಅಂಟು ಪಟ್ಟಿ ಬದಲಾಯಿಸಬೇಕು.

ನಾಟಿ ಮಾಡಿದ 30, 45 ಮತ್ತು 60 ದಿನಗಳ ನಂತರ ಸಿವೀಡ್ ಎಕ್ಸಟ್ರಾಕ್ಟ್ ಅನ್ನು 2.0 ಮಿ.ಲೀ ಲೀಟರ್ ನಂತೆ ಸಿಂಪರಣೆ ಮಾಡಬೇಕು. ಇದರಿಂದ ಗಿಡದಲ್ಲಿ ರೋಗ ನಿರೋದಕ ಶಕ್ತಿ ಹೆಚ್ಚುತ್ತದೆ.

ಬಿಳಿನೋಣ ನಿಯಂತ್ರಣದಲ್ಲಿಡಲು ನಾಟಿ ಮಾಡಿದ 15 ದಿನಗಳ ನಂತರ 0.4 ಮಿ.ಲೀ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ ಅಥವಾ 0.3 ಗ್ರಾಂ ಥಿಯಾಮೆಥಾಕ್ಸಾಮ್ 25 ಡಬ್ಲ್ಯು.ಜಿ. ಅಥವಾ 1.5 ಮಿ.ಲೀ ಫಿಪ್ರೋನಿಲ್ ಶೇ 5 ಎಸ್.ಎಲ್  ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಣೆಮಾಡಬೇಕು.

ಅವಶ್ಯಕತೆಗೆ ಅನುಗುಣವಾಗಿ ಬೇವಿನ ಎಣ್ಣೆ ಆಧಾರಿತ ಕೀಟನಾಶಕಗಳೊಂದಿಗೆ 8-10 ದಿನಗಳಿಗೊಮ್ಮೆ ಕೀಟನಾಶಕ ಬದಲಿಸಿ ಸಿಂಪರಣೆ ಮಾಡಬೇಕು.

ರೈತರು ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರದ ಸಸ್ಯರೋಗ ಶಾಸ್ತ್ರದ ವಿಜ್ಞಾನಿ ಬಿ.ಸ್ವಾತಿ- 9901281402 ಸಂಪರ್ಕಿಸಬಹುದು.

ಟೊಮೆಟೊ ಗಿಡದ ಎಲೆಗಳಲ್ಲಿ ಬಿಳಿ ನೊಣ
tomoto

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.