
ಚಿಂತಾಮಣಿ: ಹವಾಮಾನದ ವೈಪರೀತ್ಯ ಮತ್ತು ಮಳೆಯಿಂದ ಟೊಮೆಟೊ ಬೆಳೆ ಹಾಗೂ ಇಳುವರಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಧಾರಣೆ ಏರುಗತಿಯಲ್ಲಿ ಸಾಗಿದೆ. ಸ್ಥಳೀಯ ವರ್ತಕರು ಮತ್ತು ಹೊರರಾಜ್ಯಗಳ ವರ್ತಕರಿಂದಲೂ ಬೇಡಿಕೆ ಹೆಚ್ಚಾಗುತ್ತಿದೆ. ಇದೂ ಸಹ ದರ ಏರಿಕೆಗೆ ಕಾರಣವಾಗಿದೆ.
ತಾಲ್ಲೂಕಿನ ರೈತರ ಪ್ರಮುಖ ವಾಣಿಜ್ಯ ಬೆಳೆ ಟೊಮೆಟೊ. ಮಾರುಕಟ್ಟೆಯಲ್ಲಿ ಒಂದು ವಾರದಿಂದ ಟೊಮೆಟೊ ಬೆಲೆ ನಿಧಾನವಾಗಿ ಏರಿಕೆ ಆಗುತ್ತಿದೆ. ಬೆಳೆಗಾರರಿಗೆ ಸ್ವಲ್ಪ ಸಮಾಧಾನ ತಂದಿದೆ.
ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ 15 ಕೆ.ಜಿ ಟೊಮೆಟೊ ಗುಣಮಟ್ಟಕ್ಕೆ ಅನುಗುಣವಾಗಿ ₹ 450ರಿಂದ ₹ 70ವರೆಗೂ ಮಾರಾಟವಾಯಿತು. ಚಿಲ್ಲರೆ ಮಾರುಕಟ್ಟೆಯಲ್ಲಿ 1 ಕೆ.ಜಿ ₹ 40ರಿಂದ ₹ 80ವರೆಗೆ ಮಾರಾಟವಾಗುತ್ತಿದೆ.
ಆಗಸ್ಟ್‌ನಿಂದಲೂ ಟೊಮೆಟೊ ಬೆಲೆ ಕಡಿಮೆ ಇತ್ತು. ಈಗ ಬೆಲೆ ಹೆಚ್ಚಳವು ಬೆಳೆಗಾರರ ಮೊಗದಲ್ಲಿ ನಗು ಮೂಡಿದೆ.
ಸಾಮಾನ್ಯವಾಗಿ ನವೆಂಬರ್‌ನಲ್ಲಿ ದರ ಹೆಚ್ಚಾಗುವುದಿಲ್ಲ. ರೈತರ ತೋಟಗಳಲ್ಲಿ ಬೆಳೆಗಳು ಹಾಳಾಗಿದೆ. ಇಳುವರಿ ಕಡಿಮೆ ಆಗಿದೆ. ಗುಣಮಟ್ಟದ ಹಣ್ಣು ಬರುತ್ತಿಲ್ಲ. ಹೀಗಾಗಿ ಬೆಲೆ ಏರಿಕೆ ಆಗಿದ್ದರೂ ಬೆಳೆಗಾರರಿಗೆ ಹೆಚ್ಚಿನ ಲಾಭ ಆಗುವುದಿಲ್ಲ ಎಂದು ಬೆಳೆಗಾರರು ನುಡಿಯುವರು.
ರಾಜ್ಯದ ದೊಡ್ಡ ಟೊಮೆಟೊ ಮಾರುಕಟ್ಟೆಗಳಲ್ಲಿ ಚಿಂತಾಮಣಿ ಎಪಿಎಂಸಿಯೂ ಒಂದು. ಪ್ರತಿನಿತ್ಯ 50--60 ಸಾವಿರ ಬಾಕ್ಸ್ ಆವಕವಾಗುತ್ತದೆ. ದೆಹಲಿ, ಉತ್ತರಪ್ರದೇಶ, ರಾಜಾಸ್ಥಾನ, ಛತ್ತೀಸ್ ಗಡ, ಗುಜರಾತ್, ಪಂಜಾಬ್, ಜಮ್ಮು ಕಾಶ್ಮೀರ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಿಗೆ ಇಲ್ಲಿನ ಟೊಮೆಟೊ ರವಾನೆ ಆಗುತ್ತದೆ. ಬಾಂಗ್ಲಾ, ಪಾಕಿಸ್ತಾನ ಹಾಗೂ ಕೊಲ್ಲಿ ರಾಷ್ಟ್ರಗಳಿಗೂ ರಫ್ತಾಗುತ್ತದೆ.
ಇದೇ ಧಾರಣೆ ಮುಂದುವರಿದರೆ ರೈತರಿಗೆ ಲಾಭವಾಗುತ್ತದೆ. ಆದರೆ ಈ ದರ ತಾತ್ಕಾಲಿಕ ಎಂದು ಮಂಡಿ ಮಾಲೀಕರು ಹೇಳುತ್ತಾರೆ. ಈ ವರ್ಷದಲ್ಲಿ ಜುಲೈ ನಲ್ಲಿ ಬೆಲೆ ಏರುಗತಿಯಲ್ಲಿ ಸಾಗಿತ್ತು. ನಂತರ ಇಳಿಮುಖವಾಗಿದೆ. ಏರಿಕೆಯನ್ನು ಕಾಣಲೇ ಇಲ್ಲ ಎಂದು ರೈತ ಶಿವಾನಂದ ತಿಳಿಸುವರು.
ಬೆಳೆ ಹಾಳು ಚಿಂತಾಮಣಿ ಮಾರುಕಟ್ಟೆಗೆ ಪೂರೈಕೆಯಾಗುವ ಟೊಮೆಟೊದಲ್ಲಿ ಶೇ 70 ರಷ್ಟು ಗಡಿಭಾಗದ ಆಂಧ್ರಪ್ರದೇಶದಿಂದ ಆವಕವಾಗುತ್ತದೆ. ವೈರಸ್ ನಿಂದ ಸ್ಥಳೀಯ ಟೊಮೆಟೊ ಬೆಳೆ ಹಾಳಾಗಿದೆ. ಇಳುವರಿ ಬರುತ್ತಿಲ್ಲ.ಆನಂದ್ ಟೊಮೆಟೊ ವ್ಯಾಪಾರಿ
ಬೆಳೆಯೇ ಇಲ್ಲ ಬೆಳೆಗಾರರೂ ಕಡಿಮೆ ನೊಣಗಳ ಕಾಟದಿಂದ ಫಸಲೂ ಕಡಿಮೆ. ಹೀಗಾಗಿ ಸಾಧಾರಣ ಬೆಲೆ ಸಿಗುತ್ತಿದೆ. ಆದರೆ ಬೆಲೆ ಏರಿಕೆಯ ಲಾಭ ಪಡೆಯಲು ರೈತರಲ್ಲಿ ಟೊಮೆಟೊ ತೋಟಗಳೇ ಇಲ್ಲ. ಬೆಲೆ ಏರಿಕೆ ಆದರೂ ಅದರ ಪೂರ್ಣ ಲಾಭ ರೈತರಿಗೆ ದೊರೆಯದೆ ಮಧ್ಯವರ್ತಿಗಳ ಪಾಲಾಗುತ್ತದೆ.ಆಂಜನೇಯರೆಡ್ಡಿ ರೈತ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.