ADVERTISEMENT

4 ದಿನಗಳಲ್ಲಿ 1,448 ಪ್ರಕರಣ, ₹ 10.87 ಲಕ್ಷ ದಂಡ

ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳಿಗೆ ಭಾರಿ ದಂಡ ವಿಧಿಸುವ ಪ್ರಕ್ರಿಯೆ ಜಿಲ್ಲೆಯಲ್ಲೂ ಆರಂಭ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 14:03 IST
Last Updated 9 ಸೆಪ್ಟೆಂಬರ್ 2019, 14:03 IST
ನಗರದ ಶಿಡ್ಲಘಟ್ಟ ವೃತ್ತದಲ್ಲಿ ಸವಾರರ ದಾಖಲೆಗಳ ಪರಿಶೀಲನೆ ನಡೆಸಿದ ಸಂಚಾರ ಪೊಲೀಸರು
ನಗರದ ಶಿಡ್ಲಘಟ್ಟ ವೃತ್ತದಲ್ಲಿ ಸವಾರರ ದಾಖಲೆಗಳ ಪರಿಶೀಲನೆ ನಡೆಸಿದ ಸಂಚಾರ ಪೊಲೀಸರು   

ಚಿಕ್ಕಬಳ್ಳಾಪುರ: ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳಿಗೆ ಭಾರಿ ದಂಡ ವಿಧಿಸುವ ಪ್ರಕ್ರಿಯೆ ಜಿಲ್ಲೆಯಲ್ಲೂ ಆರಂಭವಾಗಿದೆ. ಜಿಲ್ಲೆಯಲ್ಲಿ ಸೆ.5 ರಿಂದ 8ರ ವರೆಗೆ 1,448 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ₹ 10.87 ಲಕ್ಷ ದಂಡ ವಸೂಲಿ ಮಾಡುವ ಮೂಲಕ ಸವಾರರಲ್ಲಿ ಭಯ ಮೂಡಿಸಿದ್ದಾರೆ.


ಕೇವಲ ನಾಲ್ಕು ದಿನಗಳಲ್ಲಿ ಸಂಚಾರ ಪೊಲೀಸರು ಹೆಲ್ಮೆಟ್‌ ಧರಿಸದ ಕಾರಣಕ್ಕೆ (437) ಸವಾರರಿಂದ ₹43,600 ದಂಡ ವಸೂಲಿ ಮಾಡಿದ್ದಾರೆ. ಸಮವಸ್ತ್ರ ಧರಿಸದ 343 ಚಾಲಕರು ₹1,71,500 ದಂಡ ತೆತ್ತು ತಪ್ಪಿನ ಅರಿವು ಮಾಡಿಕೊಂಡಿದ್ದಾರೆ.

ಇನ್ನು ನಿಗದಿತ ಸಂಖ್ಯೆಗಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುತ್ತಿದ್ದ 93 ವಾಹನಗಳಿಗೆ ಪೊಲೀಸರು ದಂಡದ ರುಚಿ ತೋರಿಸಿದ್ದಾರೆ. ಸೀಟ್‌ ಬೆಲ್ಟ್‌ ಧರಿಸಿದ 81 ಸವಾರರು ₹80,500 ದಂಡ ಕೊಟ್ಟಿದ್ದಾರೆ.

ADVERTISEMENT


ಕೇಂದ್ರ ಸರ್ಕಾರವು ಸಂಚಾರ ನಿಯಮಗಳನ್ನು ಬಿಗಿಗೊಳಿಸಿ ಕಾಯ್ದೆ ಜಾರಿ ಮಾಡಿದೆ. ಇದರಿಂದ ನಿಯಮ ಉಲ್ಲಂಘಿಸುವವರು ದುಬಾರಿ ದಂಡ ತೆರಬೇಕಾಗಿದೆ. ಅಲ್ಲದೇ ಪದೇ ಪದೇ ಸಿಕ್ಕಿಬಿದ್ದರೆ ಅದನ್ನು ಅಪರಾಧವಾಗಿ ಪರಿಗಣಿಸಿ ಅವರ ಚಾಲನಾ ಪರವಾನಗಿಯನ್ನೇ ರದ್ದು ಪಡಿಸುವ ಅವಕಾಶವಿರುವುದು ಸವಾರರನ್ನು ಭೀತಿ ಮೂಡಿಸಿದೆ.


ಮೋಟಾರು ವಾಹನ ಕಾಯ್ದೆ–2019ರ ಜಾರಿಯಿಂದ ಸಂಚಾರ ನಿಯಮಗಳ ಉಲ್ಲಂಘನೆಯ ದಂಡದ ಮೊತ್ತದಲ್ಲಿ ಭಾರಿ ಹೆಚ್ಚಳ ಆಗಿರುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಗರ ಪೊಲೀಸರು ಮುಂದಾಗಿದ್ದಾರೆ. ದಂಡದ ಪರಿಷ್ಕೃತದ ದರದ ವಿವರಗಳುಳ್ಳ ಫ್ಲೆಕ್ಸ್‌ಗಳನ್ನು ಪೊಲೀಸರೇ ನಗರದ ಹಲವು ಕಡೆಗಳಲ್ಲಿ ಅಳವಡಿಸಿದ್ದಾರೆ.

ನೂತನ ಕಾಯ್ದೆಯ ಅಡಿಯಲ್ಲಿ ದಂಡ ವಿಧಿಸಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಇದೇ 3ರಂದು ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿತ್ತು. ಗುರುವಾರದಿಂದ ನಗರದಲ್ಲಿ ಪರಿಷ್ಕೃತ ದರದಲ್ಲಿ ಪೊಲೀಸರು ದಂಡ ವಸೂಲಿ ಮಾಡುತ್ತಿದ್ದಾರೆ.


‘ಹೊಸ ದಂಡ ವಿಧಿಸುವ ಕುರಿತು ಜಿಲ್ಲೆಯ ಎಲ್ಲೆಡೆ ಜಾಗೃತಿ ಮೂಡಿಸಲಾಗಿದೆ. ಸಾಕಷ್ಟು ಜನರು ಸಂಚಾರ ನಿಯಮ ಪಾಲಿಸುತ್ತಿದ್ದಾರೆ. ಇನ್ನಷ್ಟು ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ. ನಿಯಮ ಪಾಲಿಸದ ಸವಾರರಿಂದ ದಂಡ ವಸೂಲಿ ಮಾಡುತ್ತೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಸಂತೋಷ್ ಬಾಬು ತಿಳಿಸಿದರು.

ಪ್ರಕರಣಗಳು – ಸಂಖ್ಯೆ – ದಂಡ (₹ಗಳಲ್ಲಿ)
ಅಜಾಗರೂಕ ಚಾಲನೆ – 1 – 2000
ಅತಿಯಾದ ವೇಗ – 3 – 4000
ನಿಗದಿಗಿಂತ ಹೆಚ್ಚಿನ ಜನರ ಪ್ರಯಾಣ – 93 – 36,700
ಕರ್ಕಶ ಹಾರ್ನ್ – 1 –100
ಚಾಲನಾ ಪರವಾನಗಿ ಇಲ್ಲದೆ ಚಾಲನೆ – 7– 39,000
ಸಿಗ್ನಲ್ ದೀಪ ಉಲ್ಲಂಘನೆ – 1– 2,000
ನಂಬರ್ ಪ್ಲೇಟ್‌ ಸರಿ ಇಲ್ಲದಿರುವುದು – 2 – 1000
ಸಮವಸ್ತ್ರ ಇಲ್ಲದಿರುವುದು – 343 – 1,71,500
ವಿಮೆ ಪ್ರಮಾಣಪತ್ರ ಇಲ್ಲದಿರುವುದು – 3 – 6000
ದ್ವಿಚಕ್ರ ವಾಹನದಲ್ಲಿ ಮೂರು ಜನರ ಪ್ರಯಾಣ – 3– 3000
ಚಾಲನೆ ವೇಳೆ ಮೊಬೈಲ್ ಬಳಕೆ – 10 – 23,000
ಸೀಟ್‌ ಬೆಲ್ಟ್ ಧರಿಸದಿರುವುದು – 81 – 80,500
ಹೆಲ್ಮೆಟ್‌ ಧರಿಸದಿರುವುದು – 437 – 43,600
ಹಿಂಬದಿ ಸವಾರ ಹೆಲ್ಮೆಟ್‌ ಧರಿಸದಿರುವುದು – 2 –2000
ಇತರೆ – 461 – 2,80,700
ಒಟ್ಟು – 1,448 – 10,87,500

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.