ADVERTISEMENT

ನಗರದೊಳಗೆ ಕಲ್ಲು ದಿಮ್ಮಿ ಸಾಗಾಣಿಕೆ

ಪೊಲೀಸರ ಸೂಚನೆಗೂ ಕಿಮ್ಮತ್ತು ನೀಡದ ಗಣಿ ವಾಹನಗಳ ಚಾಲಕರು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 2:52 IST
Last Updated 30 ಸೆಪ್ಟೆಂಬರ್ 2022, 2:52 IST
ಚಿಕ್ಕಬಳ್ಳಾಪುರ ನಗರದಲ್ಲಿ ಕಲ್ಲಿನ ದಿಮ್ಮಿಗಳನ್ನು ಹೊತ್ತೊಯ್ಯುತ್ತಿರುವ ಲಾರಿಗಳು
ಚಿಕ್ಕಬಳ್ಳಾಪುರ ನಗರದಲ್ಲಿ ಕಲ್ಲಿನ ದಿಮ್ಮಿಗಳನ್ನು ಹೊತ್ತೊಯ್ಯುತ್ತಿರುವ ಲಾರಿಗಳು   

ಚಿಕ್ಕಬಳ್ಳಾಪುರ: ‘ಗಣಿಗಾರಿಕೆಗೆ ಸಂಬಂಧಿಸಿದ ವಾಹನಗಳು ನಗರ ಪ್ರದೇಶದ ರಸ್ತೆಗಳು ಹಾಗೂ ಜನನಿಬಿಡ ರಸ್ತೆಗಳಲ್ಲಿ ಸಾಗುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಹೆದ್ದಾರಿಗಳಲ್ಲಿ ಸಂಚರಿಸಬೇಕು’– ಇತ್ತೀಚೆಗೆ ತಾಲ್ಲೂಕಿನ ಪೆರೇಸಂದ್ರದಲ್ಲಿ ನಡೆದಗಣಿ ಮಾಲೀಕರು ಮತ್ತು ಗಣಿಗಾರಿಕೆಗೆ ಸಂಬಂಧಿಸಿದ ವಾಹನಗಳ ಚಾಲಕರ ಸಭೆಯಲ್ಲಿ ಡಿವೈಎಸ್‌ಪಿ ವಿ.ಕೆ.ವಾಸುದೇವ್ ನೀಡಿದ್ದ ಎಚ್ಚರಿಕೆ ಇದು.

ಈ ಸಭೆ ನಡೆದು ಒಂದು ವಾರವಾಗಿದೆ. ಆದರೆ ಪೊಲೀಸರ ಸೂಚನೆಗೆ ಕಿಮ್ಮತ್ತಿಲ್ಲ ಎನ್ನುವಂತೆ ನಗರದೊಳಗೆಯೇ ಕಲ್ಲು ಕ್ವಾರಿಗಳ ಲಾರಿಗಳು ಸಂಚರಿಸುತ್ತಿವೆ. ಬೃಹತ್ ಕಲ್ಲು ದಿಮ್ಮಿಗಳನ್ನು ಸಾಗಿಸುವಾಗ ಸ್ವಲ್ಪ ಹೆಚ್ಚು ಕಡಿಮೆಯಾದರೂ ಅನಾಹುತ ಖಚಿತ.

ಈ ಎಲ್ಲವನ್ನು ಮನಗಂಡು ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗಣಿ ಲಾರಿಗಳು ಸಾಗಬೇಕು ಎಂದು ಸೂಚಿಸಿದ್ದರು. ಆದರೆ ಗಣಿಗಾರಿಕೆಯ ಲಾರಿಗಳ ಚಾಲಕರು ಮಾತ್ರ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ನಗರದ ಬಿಬಿ ರಸ್ತೆಯಲ್ಲಿಯೇ ಸಾಗುತ್ತಿದ್ದಾರೆ.

ADVERTISEMENT

ಚಿಕ್ಕಬಳ್ಳಾಪುರ ನಗರದಲ್ಲಿಯೇ ಸಂಜೆ 7ರಿಂದ ರಾತ್ರಿ 10ರವರೆಗೆ ಸುಮಾರು 30ಕ್ಕೂ ಹೆಚ್ಚು ಲಾರಿಗಳು ಕಲ್ಲು ದಿಮ್ಮಿಗಳನ್ನು ಮತ್ತು ಜಲ್ಲಿಕಲ್ಲುಗಳನ್ನು ತುಂಬಿಕೊಂಡು ಸಾಗುತ್ತವೆ.ಈ ಬಗ್ಗೆ ಪೊಲೀಸರಿಗೆ ಸಹ ಮಾಹಿತಿ ನೀಡಿದ್ದೇವೆ ಎಂದು ನಾಗರಿಕ ಮುರುಳಿ ತಿಳಿಸಿದರು.

ಲಾರಿಗಳು ರಸ್ತೆಯಲ್ಲಿನ ಉಬ್ಬು ಏರುವಾಗ ಕಲ್ಲಿನ ದಿಮ್ಮಿಗಳು ಜರುಗುತ್ತವೆ. ಈ ವೇಳೆ ಹೆಚ್ಚು ಕಡಿಮೆಯಾಗಿ ಅವಘಡಗಳು ನಡೆದರೆ ಹೊಣೆ ಯಾರು? ಚಿಕ್ಕಬಳ್ಳಾಪುರದಲ್ಲಿ ಈ ಬಗ್ಗೆ ಧ್ವನಿ ಎತ್ತುವಂತಿಲ್ಲ ಎನ್ನುವ ಪರಿಸ್ಥಿತಿ ಇದೆ. ಬೈಪಾಸ್‌ನಲ್ಲಿ ಗಣಿಗಾರಿಕೆ ಲಾರಿಗಳು ಹೋಗಲಿ ನಮ್ಮ ಅಭ್ಯಂತರವಿಲ್ಲ ಎಂದು

‘ಕೆಲವೊಮ್ಮೆ ಎಂ ಸ್ಯಾಂಡ್ ತುಂಬಿಕೊಂಡು ಹೋಗುವಾಗ ಸರಕಿನ ಮೇಲ್ಭಾಗದಲ್ಲಿ ಟಾರ್ಪಲ್ ಕಟ್ಟುವುದಿಲ್ಲ. ಆಗ ದೂಳು ಹರಡುತ್ತದೆ. ಕಲ್ಲು ದಿಮ್ಮಿಗಳನ್ನು ಹೊತ್ತ ಲಾರಿಗಳು ಸಾಗುವಾಗ ಆ ಲಾರಿ ಸಮೀಪ ಸಾಗುವ ವಾಹನಗಳಲ್ಲಿ ಇರುವವರಿಗೆ ಭಯವೂ ಇರುತ್ತದೆ’ ಎನ್ನುತ್ತಾರೆ ನಾಗರಿಕ ಮಂಜುನಾಥ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.