ಶಿಡ್ಲಘಟ್ಟ ತಾಲ್ಲೂಕಿನ ಬಚ್ಚನಹಳ್ಳಿ ಬಳಿಯ ಗೋಪಮ್ಮನಬೆಟ್ಟದ ಮೇಲಿನ ಗರಡಗಂಭವನ್ನು ನಿಧಿಯ ಆಸೆಗೆ ಉರುಳಿಸಲಾಗಿದೆ
ಶಿಡ್ಲಘಟ್ಟ: ತಾಲ್ಲೂಕಿನ ದಿಬ್ಬೂರಹಳ್ಳಿಯ ಬಳಿಯ ಬಚ್ಚನಹಳ್ಳಿಯ ಹಿಂಬದಿಯ ಗೋಪಮ್ಮನಬೆಟ್ಟದ ಮೇಲಿನ ಬೃಹತ್ ಗರಡಗಂಭವನ್ನು ನಿಧಿಯ ಆಸೆಗೆ ಉರುಳಿಸಲಾಗಿದೆ. ಹೀಗೆಯೇ ತಾಲ್ಲೂಕಿನ ಹಲವೆಡೆ ಶಾಸನಗಳು, ವೀರಗಲ್ಲುಗಳನ್ನು ಉರುಳಿಸಿ, ಅದರ ಅಡಿ ನೆಲವನ್ನು ಬಗೆಯುವ ನಿಧಿಯನ್ನು ಹುಡುಕುವ ಪ್ರಯತ್ನಗಳು ಸಾಗಿವೆ. ಶಾಸನ, ವೀರಗಲ್ಲು, ಸ್ಮಾರಕ ಸಂರಕ್ಷಣೆಗೆ ಪ್ರಯತ್ನ ಬೇಕಿದೆ.
ದೇವಾಲಯಗಳು ಹಿಂದಿನವರಿಗೆ ಸಾಂಸ್ಕೃತಿಕ ಕೇಂದ್ರಗಳಾದರೆ, ಶಾಸನಗಳು ಮತ್ತು ವೀರಗಲ್ಲುಗಳು ಇತಿಹಾಸದ ದಾಖಲೆಗಳು. ಇವುಗಳ ಕೆಳಗೆ ನಿಧಿಯನ್ನು ಯಾರೂ ಇಡುತ್ತಿರಲಿಲ್ಲ. ನಿಜ ಹೇಳಬೇಕೆಂದರೆ ಈ ಶಾಸನ ಮತ್ತು ವೀರಗಲ್ಲುಗಳೇ ಇತಿಹಾಸದ ಅನರ್ಘ್ಯ ನಿಧಿಗಳು, ಆಕರಗಳು. ಇವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ನಮ್ಮ ಇತಿಹಾಸವನ್ನು ತಿಳಿಸಿಕೊಡಬೇಕಾದ ಅಗತ್ಯವಿದೆ ಎಂದು ಶಾಸನತಜ್ಞ ಧನಪಾಲ್ ತಿಳಿಸುತ್ತಾರೆ.
ಯಾವುದೇ ದೇವಾಲಯ, ಗರುಡಗಂಭಗಳು, ವೀರಗಲ್ಲುಗಳು ಮತ್ತು ಶಾಸನಗಳ ಕೆಳಗೆ ನಿಧಿ ಇರುವುದಿಲ್ಲ. ತಮ್ಮ ಊರಿಗಾಗಿ ಹೋರಾಡಿದ ವೀರರು ಮತ್ತು ಅವರ ಕಾಲದ ದಾಖಲೆಯೇ ಅಪೂರ್ವ ನಿಧಿ ಇದ್ದಂತೆ. ಈ ಶಾಸನ ಮತ್ತು ವೀರಗಲ್ಲುಗಳನ್ನು ಕಾಪಾಡಿಕೊಳ್ಳಬೇಕು. ಈ ಶಾಸನಗಳನ್ನು ಓದಿಕೊಂಡು ಅದರಲ್ಲಿ ಬರೆದಿರುವ ಊರಿನ ಐತಿಹ್ಯದ ಬಗ್ಗೆ ತಿಳಿದುಕೊಂಡಲ್ಲಿ ನಮ್ಮ ಗ್ರಾಮ್ಯ ಪರಂಪರೆಯ ಬಗ್ಗೆ ಹೆಮ್ಮೆ, ಅಭಿಮಾನ ಮೂಡುತ್ತದೆ. ಶಾಸನವೆಂದರೆ ರಾಜಾಜ್ಞೆ. ಹಸುಗಳನ್ನು ಕಾಪಾಡಿದ ವೀರರ ವೀರಗಲ್ಲಿಗೆ ತುರುಗೋಳ್ ಎನ್ನುತ್ತಾರೆ. ಹೆಣ್ಣುಮಕ್ಕಳನ್ನು ಅತ್ಯಾಚಾರಿಗಳಿಂದ ರಕ್ಷಿಸುವಾಗ ಮಡಿದವರ ವೀರಗಲ್ಲಿಗೆ ಪೆಣ್ಗುಯಿಲ್ ಎನ್ನುವರು. ಭಾಷೆಯ ಬೆಳವಣಿಗೆ ಬಗ್ಗೆಯೂ ನಮಗೆ ಇವುಗಳಿಂದ ತಿಳಿದುಬರುತ್ತದೆ.
ಗೋಪಮ್ಮನಬೆಟ್ಟದ ಮೇಲಿನಿಂದ ಅತ್ಯಂತ ಸುಂದರವಾದ ಕೆತ್ತನೆಗಳಿರುವ ಗರುಡಗಂಭವನ್ನು ಕೆಳಕ್ಕೆ ಉರುಳಿಸಲಾಗಿದೆ. ಅದು ಸುಮಾರು ಮೂವತ್ತು ಅಡಿ ಕೆಳಕ್ಕೆ ಬಿದ್ದು ಮುರಿದುಹೋಗಿದೆ. ಇದು ದುರಾಸೆಯಿಂದ ಮಾಡಿರುವ ದುಷ್ಕೃತ್ಯವಾಗಿದೆ. ಈ ರೀತಿಯ ಒಂದೇ ಕಲ್ಲಿನಿಂದ ಆ ಕಾಲದಲ್ಲಿ ಕೆತ್ತನೆ ಮಾಡಿ ಎಷ್ಟೆಲ್ಲ ಕಷ್ಟಪಟ್ಟ ನಮ್ಮ ಹಿರಿಯರು ಸಾಗಿಸಿದ್ದಿರಬಹುದು. ಅದನ್ನು ಈಗ ನಾವು ಮರುರೂಪಿಸಲೂ ಸಾಧ್ಯವಿಲ್ಲ. ಕನಿಷ್ಠ ಉಳಿಸಿಕೊಳ್ಳುವುದಾದರೂ ಬೇಡವೇ ಎಂದು ಬೇಸರದಿಂದ ನುಡಿಯುತ್ತಾರೆ ಶಾಸನತಜ್ಞ ಎ.ಎಂ.ತ್ಯಾಗರಾಜ್.
ಶಿಡ್ಲಘಟ್ಟ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಶಾಸನ ಮತ್ತು ವೀರಗಲ್ಲುಗಳನ್ನು ಸಂರಕ್ಷಣೆ ಮಾಡಬೇಕೆಂದು ಶಾಸನತಜ್ಞ ಧನಪಾಲ್ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅವರಿಗೆ ಈಗಾಗಲೇ ಮನವಿ ಸಲ್ಲಿಸಿದ್ದಾರೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಪುರಾತತ್ವ ಇಲಾಖೆಯಿಂದ ಗ್ರಾಮಾವಾರು ಸರ್ವೆಕಾರ್ಯ ನಡೆಸಿರುವ ಅವರು ಗೆಜ್ಜಿಗಾನಹಳ್ಳಿ, ಕೊತ್ತನೂರು, ನಾಗಮಂಗಲ, ಮುತ್ತೂರು, ಮಳ್ಳೂರು, ಆನೂರು, ಹೊಸಪೇಟೆ (ಭದ್ರನಕೆರೆ), ಇನಿಮಿಂಚೇನಹಳ್ಳಿ, ಭಕ್ತರಹಳ್ಳಿ, ಹಂಡಿಗನಾಳ ಮುಂತಾದೆಡೆ ತುರ್ತಾಗಿ ಶಾಸನ ಮತ್ತು ವೀರಗಲ್ಲುಗಳನ್ನು ಸಂರಕ್ಷಿಸಬೇಕು ಎಂದು ಅವುಗಳ ಚಿತ್ರಗಳು ಮತ್ತು ವಿವರಗಳನ್ನೊಳಗೊಂಡ ವರದಿಯನ್ನೂ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.