ADVERTISEMENT

ಚಿಂತಾಮಣಿ: ಸಿಂಡಿಕೇಟ್‌ ನಡುವೆ ತ್ರಿಕೋನ ಸ್ಪರ್ಧೆ

ಅ.11ರಂದು ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಚುನಾವಣೆ

ಎಂ.ರಾಮಕೃಷ್ಣಪ್ಪ
Published 6 ಅಕ್ಟೋಬರ್ 2020, 3:28 IST
Last Updated 6 ಅಕ್ಟೋಬರ್ 2020, 3:28 IST

ಚಿಂತಾಮಣಿ: ಇಲ್ಲಿನ ಸರ್ಕಾರಿ ನೌಕರರ ಗೃಹನಿರ್ಮಾಣ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಅ.11ರಂದು ಭಾನುವಾರ ಚುನಾವಣೆ ನಡೆಯಲಿದೆ.

ಮಾ.15ರಂದು ನಡೆಯಬೇಕಿದ್ದ ಚುನಾವಣೆಯನ್ನು ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಮೂರು ಸಿಂಡಿಕೇಟ್‌ಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಗೃಹ ನಿರ್ಮಾಣ ಸಹಕಾರ ಸಂಘದ ಚುನಾವಣೆಯು ಸಹ ಯಾವುದೇ ಸಾರ್ವಜನಿಕ ಚುನಾವಣೆಗೆ ಕಡಿಮೆ ಇಲ್ಲದಂತೆ ಭರಾಟೆಯಿಂದ ಪ್ರಚಾರ ನಡೆದಿದೆ.

ಭೂಮಿಯ ಬೆಲೆ ಗಗನಕ್ಕೇರಿರುವಾಗ ಸರ್ಕಾರಿ ನೌಕರರು ನಿವೇಶನಗಳನ್ನು ಕೊಳ್ಳುವುದು ಕಷ್ಟಕರ. ಗೃಹನಿರ್ಮಾಣ ಸಹಕಾರ ಸಂಘದ ಮೂಲಕ ಕಡಿಮೆ ಬೆಲೆಯಲ್ಲಿ ನೌಕರರಿಗೆ ನಿವೇಶನ ಒದಗಿಸುವುದು ಸಂಘದ ಸ್ಥಾಪನೆಯ ಉದ್ದೇಶವಾಗಿದೆ. 10 ವರ್ಷಗಳಲ್ಲಿ ಮೊದಲ ಅವಧಿಯಲ್ಲಿ ಒಂದೇ ಒಂದು ಬಡಾವಣೆ ನಿರ್ಮಾಣ ಮಾಡಿದ್ದರು. ಅದು ಸಾಕಷ್ಟು ಗೊಂದಲಗಳನ್ನು ಮೂಡಿಸಿತ್ತು. ಎರಡನೆಯ ಅವಧಿಯ ಒಂದು ಬಡಾವಣೆ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ಹಣವನ್ನು ಪಡೆದುಕೊಂಡಿದ್ದಾರೆ. ನಿವೇಶನಗಳ ನೋಂದಣಿ ಮಾಡಿಕೊಟ್ಟಿಲ್ಲ. ಇದೆಲ್ಲದರ ಬಗ್ಗೆ ಸದಸ್ಯರಲ್ಲಿ ತೀವ್ರ ಅಸಮಾಧಾನವಿದೆ.

ADVERTISEMENT

ಆಡಳಿತ ಮಂಡಳಿಯ ಒಳಜಗಳ, ಅಧ್ಯಕ್ಷರ ಬದಲಾವಣೆ, ನಿವೇಶನಗಳ ನೋಂದಣಿ ಹಣವನ್ನು ಸಂಘದ ಖಾತೆಯಲ್ಲಿ ಜಮಾ ಮಾಡದೆ ಸದಸ್ಯರೇ ಪಡೆದುಕೊಂಡಿರುವುದು, ಹಣಕಾಸಿನ ಅವ್ಯವಹಾರ ಸೇರಿದಂತೆ ಹಲವಾರು ಆರೋಪಗಳು ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಕೇಳಿಬಂದಿದ್ದವರು. ಕಳೆದ ವರ್ಷದ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿಯೇ ಪ್ರತಿಭಟನೆ, ಕೆಲವು ಸದಸ್ಯರ ಬಹಿಷ್ಕಾರ ಸಹ ನಡೆದಿತ್ತು.

ಸಾಮಾನ್ಯ ಕ್ಷೇತ್ರದಿಂದ 9 ಸ್ಥಾನಗಳಿಗೆ 21 ಮಂದಿ, ಮಹಿಳಾ ಮೀಸಲಾತಿ 2 ಸ್ಥಾನಗಳಿಗೆ 4, ಹಿಂದುಳಿದ ವರ್ಗ ಎ– ಒಂದು ಸ್ಥಾನಕ್ಕೆ 3, ಹಿಂದುಳಿದ ವರ್ಗ ಬಿ– ಒಂದು ಸ್ಥಾನಕ್ಕೆ 2, ಪರಿಶಿಷ್ಟ ಜಾತಿ– ಒಂದು ಸ್ಥಾನಕ್ಕೆ 4 ಹಾಗೂ ಪರಿಶಿಷ್ಟ ಪಂಗಡ– ಒಂದು ಸ್ಥಾನಕ್ಕೆ 3 ಮಂದಿ ಸೇರಿ ಒಟ್ಟು ಸಂಘದ 15 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಒಟ್ಟು 37 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎರಡು ಸಿಂಡಿಕೇಟ್‌ಗಳು ಎಲ್ಲ 15 ಸ್ಥಾನಗಳಿಗೂ ಸ್ಪರ್ಧಿಸಿವೆ. ಮೂರನೇ ಸಿಂಡಿಕೇಟ್‌ನಿಂದ ಐವರು ಅಭ್ಯರ್ಥಿಗಳು ಹಾಗೂ ಸ್ವತಂತ್ರವಾಗಿ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಅಭ್ಯರ್ಥಿಗಳು 15 ದಿನಗಳಿಂದ ಮತದಾರರ ಮನೆ -ಮನೆಗೂ ಎಡತಾಕುತ್ತಿದ್ದಾರೆ. 2-3 ದಿನಗಳಿಂದ ಮತಯಾಚನೆ ಚುರುಕುಗೊಂಡಿದೆ. ಅಭ್ಯರ್ಥಿಗಳು ಗುಂಪು-ಗುಂಪುಗಳಾಗಿ ಮತದಾರರನ್ನು ಸೆಳೆಯಲು ಹರಸಾಹಸ ಮಾಡುತ್ತಿದ್ದಾರೆ. ಹಿಂದಿನ ನಿರ್ದೇಶಕರು ಬಹುತೇಕ ಮೂರು ಸಿಂಡಿಕೇಟ್‌ಗಳಲ್ಲೂ ಚದುರಿಹೋಗಿದ್ದಾರೆ. ಅಭ್ಯರ್ಥಿಗಳು ಪ್ರಚಾರ ನಡೆಸುತ್ತಿದ್ದರೂ ಮತದಾರರಲ್ಲಿ ಚುನಾವಣೆಯ ಬಗ್ಗೆ ನಿರಾಸಕ್ತಿ ಮೂಡಿದೆ. ಮತದಾನದ ಕುರಿತು ಗುಟ್ಟು ಬಿಟ್ಟುಕೊಡುವುದಿಲ್ಲ.

‘ಚಿಂತಾಮಣಿಯ ಮಹಾತ್ಮ ಗಾಂಧಿ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಭಾನುವಾರ ಬೆಳಿಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ಮತದಾನ ನಡೆಯುತ್ತದೆ. ಮತದಾನದ ನಂತರ ಮತಗಳ ಎಣಿಕೆ ಮತ್ತು ಫಲಿತಾಂಶದ ಪ್ರಕಟಣೆ ಮಾಡಲಾಗುತ್ತದೆ’ ಎಂದು ಚುನಾ
ವಣಾಧಿಕಾರಿ ಲಿಯಾಕತ್ ಖಾದರ್ ಖಾನ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.