ಚಿಕ್ಕಬಳ್ಳಾಪುರ: ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮ ಅನುಷ್ಠಾನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ತಿಳಿಸಿದರು
ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ವಿಶ್ವ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕ್ಷಯರೋಗ ನಿರ್ಮೂಲನೆಗಾಗಿ ಕಳೆದ 5 ವರ್ಷಗಳಲ್ಲಿ ಕೈಗೊಂಡಿರುವ ಕ್ರಮಗಳು, ಸೂಚ್ಯಂಕಗಳನ್ನು ರಾಜ್ಯ ಮಟ್ಟದಲ್ಲಿ ಪರಿಶೀಲಿಸಿ ಈ ಆಯ್ಕೆ ಮಾಡಲಾಗಿದೆ. ಮರಣ ಪ್ರಮಾಣ ಇಳಿಕೆ, ಕ್ಷಯರೋಗಗಳ ಪ್ರಕರಣಗಳ ಇಳಿಕೆ, ಪತ್ತೆ ಹಚ್ಚುವಿಕೆ, ಚಿಕಿತ್ಸಾ ವಿಧಾನ ಸೇರಿದಂತೆ 12 ಮಾನದಂಡ ಅನುಸರಿಸಲಾಗಿದೆ. ಈ ಕಾರ್ಯಕ್ಕೆ ಶ್ರಮಿಸಿದ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು, ಶುಶ್ರೂಷಕಿಯರು, ಆರೋಗ್ಯ, ಆಶಾ ಕಾರ್ಯಕರ್ತೆಯರು ಹಾಗೂ ಇತರ ಸಿಬ್ಬಂದಿಗೆ ಧನ್ಯವಾದ ತಿಳಿಸುವೆ ಎಂದರು.
2024ನೇ ಸಾಲಿನಲ್ಲಿ ಜಿಲ್ಲೆಯ 157 ಗ್ರಾಮ ಪಂಚಾಯಿತಿಗಳ ಪೈಕಿ ಕ್ಷಯರೋಗ ನಿರ್ಮೂಲನೆಯಲ್ಲಿ ಉತ್ತಮ ಸಾಧನೆ ತೋರಿದ 23 ಗ್ರಾಮ ಪಂಚಾಯಿತಿಗಳನ್ನು ಕ್ಷಯರೋಗ ಮುಕ್ತ ಗ್ರಾಮ ಪಂಚಾಯಿತಿಗಳು ಎಂದು ಘೋಷಿಸಲಾಗಿದೆ. 2025ರ ರೊಳಗೆ ಕ್ಷಯ ರೋಗ ನಿರ್ಮೂಲನೆ ಮಾಡಿ ಎಲ್ಲಾ ಗ್ರಾಮ ಪಂಚಾಯಿತಿಗಳು ಹಾಗೂ ನಗರ ಆಡಳಿತ ಸಂಸ್ಥೆಗಳು ಜಿಲ್ಲೆಯನ್ನು ಕ್ಞಯರೋಗ ಮುಕ್ತ ಜಿಲ್ಲೆ ಎಂದು ಘೋಷಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಕಳೆದ ಡಿಸೆಂಬರ್‌ನಿಂದ ಜಿಲ್ಲೆಯಲ್ಲಿ ನೂರು ದಿನಗಳ ಕ್ಷಯರೋಗ ಪತ್ತೆ ಅಭಿಯಾನ ಮಾಡಲಾಗಿದೆ. ಅಭಿಯಾನದಲ್ಲಿ ಆಶಾ, ಆರೋಗ್ಯ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿತ್ತು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಎಸ್.ಎಸ್ ಮಹೇಶ್ ಕುಮಾರ್ ಮಾತನಾಡಿ, ಕ್ಷಯ ಮತ್ತು ಕುಷ್ಠರೋಗಿಗಳನ್ನು ಹಲವು ವರ್ಷಗಳ ಹಿಂದೆ ಅತ್ಯಂತ ಅಮಾನವೀಯವಾಗಿ ಮತ್ತು ಹೀನಾಯವಾಗಿ ನೋಡಲಾಗುತ್ತಿತ್ತು. ಆದರೆ ಆಧುನಿಕತೆ, ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಭಾವ ಪರಿಣಾಮದಿಂದ ನಾಗರಿಕತೆ ಬೆಳೆದಂತೆ ಪರಿಸ್ಥಿತಿ ಬದಲಾಗಿದೆ ಎಂದರು.
ಆ ಸಂದರ್ಭದಲ್ಲಿ ಸರಿಯಾದ ಚಿಕಿತ್ಸೆ ಮತ್ತು ಅರಿವಿನ ಕೊರತೆ ಕಾರಣದಿಂದ ಈ ಎರಡೂ ಕಾಯಿಲೆಗಳ ರೋಗಿಗಳನ್ನು ಹೀನವಾಗಿ ನಡೆಸಿಕೊಳ್ಳಲಾಗುತ್ತಿತ್ತು. ಈಗ ಕ್ಷಯ ಮತ್ತು ಕುಷ್ಠರೋಗಗಳು ಸಂಪೂರ್ಣವಾಗಿ ಗುಣಪಡಿಸಬಹುದಾದಂತಹ ಕಾಯಿಲೆಗಳು ಎಂದು ವೈದ್ಯಕೀಯ ವಿಜ್ಞಾನ ದೃಢಪಡಿಸಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಆರೋಗ್ಯ ಇಲಾಖೆ ಕೈಗೊಂಡ ಪರಿಣಾಮಕಾರಿ ಕ್ರಮಗಳ ಪರಿಣಾಮ ಕ್ಷಯ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಕ್ಷಯರೋಗ ಭಾರತದಲ್ಲಿ ಸವಾಲಾಗಿ ಉಳಿದಿದೆ. ಪ್ರತಿವರ್ಷ ಲಕ್ಷಾಂತರ ಹೊಸ ಪ್ರಕರಣಗಳು ವರದಿಯಾಗುತ್ತಿದೆ. ಕ್ಷಯ ಪರೀಕ್ಷೆಯ ಮಾಹಿತಿಗಾಗಿ ಉಚಿತ ಆರೋಗ್ಯ ಸಹಾಯವಾಣಿ 104 ಸಂಪರ್ಕಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಹಳ್ಳಿ ಎನ್. ರಮೇಶ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅತಿಕ್ ಪಾಷಾ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಂಜುಳಾ, ಡಾ. ಉಮಾ, ನಾಯನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕೃಷ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಕೊಂಡೇನಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.