ADVERTISEMENT

ಚಿಕ್ಕಬಳ್ಳಾಪುರ: ಆಮೆಗತಿ ಕಾಮಗಾರಿ, ಮುಖ್ಯರಸ್ತೆಯಲ್ಲಿ ಕಿರಿಕಿರಿ

ವಿಶೇಷ ಅನುದಾನದಲ್ಲಿ ಬಿ.ಬಿ.ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ, ವರ್ಷ ಕಳೆದರೂ ಸಜ್ಜುಗೊಳ್ಳದ ಚರಂಡಿ, ಪಾದಚಾರಿ ಮಾರ್ಗ

ಈರಪ್ಪ ಹಳಕಟ್ಟಿ
Published 23 ಫೆಬ್ರುವರಿ 2020, 19:30 IST
Last Updated 23 ಫೆಬ್ರುವರಿ 2020, 19:30 IST
ಬಿ.ಬಿ.ರಸ್ತೆಯಲ್ಲಿ ಅರೆಬರೆ ನಿರ್ಮಾಣಗೊಂಡ ಕಾಲುವೆ ಕಾಮಗಾರಿ
ಬಿ.ಬಿ.ರಸ್ತೆಯಲ್ಲಿ ಅರೆಬರೆ ನಿರ್ಮಾಣಗೊಂಡ ಕಾಲುವೆ ಕಾಮಗಾರಿ   

ಚಿಕ್ಕಬಳ್ಳಾಪುರ: ಎಲ್ಲೆಂದರಲ್ಲಿ ಬಾಯಿ ತೆರೆದ ಗುಂಡಿಗಳು, ಅಗೆದು ಅರೆಬರೆ ಸರಿಪಡಿಸಿದ ಪಾದಚಾರಿ ಮಾರ್ಗ, ಅಲ್ಲಲ್ಲಿ ತುಂಡಾಗಿ ಕತ್ತರಿಸಿದ ಬಿಎಸ್ಎನ್‌ಎಲ್‌ ವೈರ್‌ಗಳು, ಒಡೆದು ಹೋದ ನೀರಿನ ಪೈಪ್‌ಲೈನ್‌ಗಳು..ಹೀಗೆ ಹೇಳುತ್ತ ಹೋದರೆ ಒಂದೆರಡಲ್ಲ ಹತ್ತಾರಿವೆ, ನಗರದಲ್ಲಿ ವಿಶೇಷ ಅನುದಾನದ ಅಡಿ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿಯ ಆಮೆಗತಿಯ ಪ್ರಗತಿಯಿಂದ ಉಂಟಾದ ಸಮಸ್ಯೆಗಳು.

ಸುಮಾರು ₹50 ಕೋಟಿ ವೆಚ್ಚದ ಕಾಮಗಾರಿಗೆ ಜಿಲ್ಲಾಡಳಿತದ ಉಸ್ತುವಾರಿಯಲ್ಲಿ ಒಂದು ವರ್ಷದ ಹಿಂದೆಯೇ ಚಾಲನೆ ನೀಡಲಾಗಿದೆ. ಬಿ.ಬಿ.ರಸ್ತೆಯಲ್ಲಿ ಶನಿಮಹಾತ್ಮಾ ದೇವಸ್ಥಾನದಿಂದ ವಾಪಸಂದ್ರ ಹಾಯ್ದು ರಾಷ್ಟ್ರೀಯ ಹೆದ್ದಾರಿ 7ರ ವರೆಗೆ ಕುಂಟುತ್ತ ಸಾಗಿರುವ ಕಾಮಗಾರಿ ಈವರೆಗೆ ಒಂದೇ ಒಂದು ಕಡೆ ಕೂಡ ಮುಗಿದು ಜನರಿಗೆ ನೆಮ್ಮದಿ ತಂದ ಉದಾಹರಣೆ ಇಲ್ಲ. ಅದರಲ್ಲೂ ಪಾದಚಾರಿಗಳು, ವರ್ತಕರು ಕಾಮಗಾರಿಯ ವಿಳಂಬಗತಿಯಿಂದಾಗಿ ರೋಸಿ ಹೋಗಿದ್ದಾರೆ.

ಬಿ.ಬಿ.ರಸ್ತೆಯಲ್ಲಿ ರಸ್ತೆ ಅಗಲೀಕರಣ, ಹೊಸ ಚರಂಡಿ ನಿರ್ಮಿಸುವ ಉದ್ದೇಶಕ್ಕೆ ಪಾದಚಾರಿ ಮಾರ್ಗ ಅಗೆದು ಹಾಕಿ ವರ್ಷವೇ ಕಳೆದಿದೆ. ಈವರೆಗೆ ಎಲ್ಲಿಯೂ ಸುಸಜ್ಜಿತವಾದ ಪಾದಚಾರಿ ಮಾರ್ಗ ನಿರ್ಮಿಸಿದ್ದು ಕಾಣವುದಿಲ್ಲ. ಇಡೀ ರಸ್ತೆಯುದ್ದಕ್ಕೂ ಹೆಜ್ಜೆ ಹಾಕಿದರೆ ಜನರನ್ನು ಬಾಧಿಸುವ ವಿಘ್ನಗಳೇ ಗೋಚರಿಸುತ್ತವೆ.

ADVERTISEMENT

ವಾಹನ ಮತ್ತು ಜನದಟ್ಟಣೆ ಕಾಣಿಸಿಕೊಳ್ಳುವ ಬೆಳಿಗ್ಗೆ, ಸಂಜೆ ಹೊತ್ತು ರಸ್ತೆಯಲ್ಲಿ ಅಡಿಗಡಿಗೆ ಎದುರಾಗುವ ಕಿರಿಕಿರಿ ನಡುವೆ ಹಿಡಿಶಾಪ ಹಾಕುತ್ತ, ಜೀವ ಹಿಡಿ ಮಾಡಿಕೊಂಡು ಸಾಗುವ, ಸಂಚರಿಸುವವರನ್ನು ನೋಡಿದಾಗ ಎಂದಪ್ಪಾ ಈ ಗೋಳಿಗೆ ಪರಿಹಾರ ಎಂಬ ಉದ್ಗಾರ ನಿಟ್ಟುಸಿರಾಗಿ ಹೊರಬರುತ್ತದೆ.

ಸುಸಜ್ಜಿತವಾದ ಪಾದಚಾರಿ ಮಾರ್ಗಗಳಿಲ್ಲದೆ, ಹರೆಯದವರೇ ಏರುತ್ತ, ಇಳಿ­ಯುತ್ತ ಏದುಸಿರು ಬಿಡುತ್ತ ಅಡೆತಡೆಗಳನ್ನು ದಾಟಿ ನಡೆಯ­ಬೇಕಾದ ನಗರದ ಪ್ರಮುಖ ರಸ್ತೆ ಇಕ್ಕೆಲಗಳಲ್ಲಿ ಎದುರಾಗುವ ನಿಂತ ವಾಹನಗಳು ವಯೋವೃದ್ಧರು, ಅಂಗವಿಕಲರು, ವಿದ್ಯಾರ್ಥಿಗಳನ್ನು ದುಸ್ವಪ್ನದಂತೆ ಕಾಡುತ್ತಿವೆ ಎನ್ನುವುದು ಪ್ರಜ್ಞಾವಂತರ ಮನದಾಳದ ನೋವು.

ಅರೆಬರೆ ಕಾಮಗಾರಿಯಿಂದ ಬಿ.ಬಿ.ರಸ್ತೆ ಧೂಳುಮಯವಾಗಿದ್ದು, ಜೋರಾಗಿ ಗಾಳಿ ಬೀಸಿದಾಗಲೆಲ್ಲ ಪಾದಚಾರಿಗಳಿಗೆ, ಸವಾರರಿಗೆ, ಮಳಿಗೆಗಳಿಗೆ ಧೂಳು ಆವರಿಸಿಕೊಳ್ಳುತ್ತಿದೆ. ಅನೇಕ ಕಡೆ ಕಾಲುವೆ ತೆಗೆದು ಕಾಮಗಾರಿ ಪೂರ್ಣಗೊಳಿಸದೆ ಬಿಟ್ಟ ಕಾರಣಕ್ಕೆ ಮಳಿಗೆಗಳಿಗೆ ಗ್ರಾಹಕರು ಸುಲಭವಾಗಿ ಬರಲಾಗದೆ ವ್ಯಾಪಾರಕ್ಕೆ ಕೂಡ ತೊಂದರೆಯಾಗುತ್ತಿದೆ ಎನ್ನುವುದು ವರ್ತಕರ ಅಳಲು. ಇದರಿಂದ ಬೇಸತ್ತು ಕಳೆದ ಮೇ ನಲ್ಲಿ ವರ್ತಕರು ಪ್ರತಿಭಟನೆ ಕೂಡ ನಡೆಸಿದ್ದು ಉಂಟು. ಆದರೆ ಕಾಮಗಾರಿಯಲ್ಲಿ ನಿರೀಕ್ಷಿತ ವೇಗ ಬರಲೇ ಇಲ್ಲ ಎನ್ನುವು ನೋವು ವರ್ತಕರದು.

‘ಕಾಮಗಾರಿಯಿಂದ ಜನರಿಗೆ ಪಾದಚಾರಿ ಮಾರ್ಗ ಕೂಡ ಇಲ್ಲದಂತಾಗಿದೆ. ರಸ್ತೆ ಬದಿಗೆ ವಾಹನ ನಿಲುಗಡೆ ಪ್ರದೇಶ ಇರುವುದರಿಂದ ಪಾದಚಾರಿಗಳು ಜೀವಭಯದಲ್ಲಿ ರಸ್ತೆಯಲ್ಲಿ ಹೆಜ್ಜೆ ಹಾಕಬೇಕಾದ ಸ್ಥಿತಿ ತಲೆದೋರಿದೆ. ಬೇಗ ಕಾಮಗಾರಿ ಮುಗಿಸಿ ನಮಗೂ, ಪಾದಚಾರಿಗಳಿಗೂ ಅನುಕೂಲ ಮಾಡಿಕೊಡಿ ಎಂದು ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ವರ್ತಕ ಶ್ರೀಧರ್.

‘ರಸ್ತೆ ಅಭಿವೃದ್ಧಿ ಕೆಲಸ ಕೈಗೆತ್ತಿಕೊಂಡಿರುವುದು ಸಂತಸದ ವಿಚಾರ. ಆದರೆ, ಜನರಿಗೆ ತೊಂದರೆಯಾಗದ ರೀತಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಬೇಕಿದೆ. ಮುಖ್ಯರಸ್ತೆಯಲ್ಲಿಯೇ ವರ್ಷಾನುಗಟ್ಟಲೇ ಪಾದಚಾರಿ ಮಾರ್ಗ ಅಗೆದು ಹಾಕಿದರೆ ಅದರಿಂದಾಗುವ ತೊಂದರೆಗಳು ಅನುಭವಿಸಿದವರಿಗಷ್ಟೇ ಗೊತ್ತು. ಇನ್ನಾದರೂ ಅಧಿಕಾರಿಗಳು ನಿದ್ದೆಯಿಂದ ಎಚ್ಚೆತ್ತು ಕಾಮಗಾರಿಯಲ್ಲಿ ಚುರುಕುತನ ತರಲಿ. ಆದಷ್ಟು ಬೇಗ ಕಾಮಗಾರಿ ಮುಗಿಸಿ ಜನರಿಗೆ ನೆಮ್ಮದಿ ತರುವ ಕೆಲಸ ಮಾಡಲಿ’ ಎಂದು ವಾಪಸಂದ್ರ ನಿವಾಸಿ ಪ್ರಜ್ವಲ್ ಆಗ್ರಹಿಸಿದರು.

ಈ ಬಗ್ಗೆ ನಗರಸಭೆ ಆಯುಕ್ತ ಡಿ.ಲೋಹಿತ್ ಅವರನ್ನು ವಿಚಾರಿಸಿದರೆ, ‘ಕಾಮಗಾರಿ ತ್ವರಿತಗತಿಯಲ್ಲಿಯೇ ನಡೆಯುತ್ತಿದೆ. ಧೂಳು ಏಳದಂತೆ ನೀರು ಸಿಂಪಡಿಸಲು ಗುತ್ತಿಗೆದಾರರಿಗೆ ತಿಳಿಸಿದ್ದೇವೆ. ಶೀಘ್ರದಲ್ಲಿಯೇ ಕಾಮಗಾರಿಗೆ ಪೂರ್ಣಗೊಳ್ಳಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.