ADVERTISEMENT

ಚಿಕ್ಕಬಳ್ಳಾಪುರಕ್ಕೆ ಹೆಸರು ತಂದ ವಿಜ್ಞಾನಿಗಳು

ಚಂದ್ರಯಾನ–3 ಯೋಜನೆಯಲ್ಲಿ ಜಂಗಾರ್ಲಹಳ್ಳಿ, ಡಿ.ಪಾಳ್ಯ, ನ್ಯಾಮಗೊಂಡ್ಲು ಗ್ರಾಮದ ವಿಜ್ಞಾನಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2023, 5:09 IST
Last Updated 15 ಜುಲೈ 2023, 5:09 IST
ಗುರ್ರಪ್ಪ
ಗುರ್ರಪ್ಪ   

ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲ್ಲೂಕಿನ ಗುರ್ರಪ್ಪ ಮತ್ತು ಗೌರಿಬಿದನೂರು ತಾಲ್ಲೂಕಿನ ಆರ್.ಶ್ರೀನಾಥ್ ಅವರು ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಶುಕ್ರವಾರ ನಭಕ್ಕೆ ಚಿಮ್ಮಿದ ‘ಚಂದ್ರಯಾನ–3’ ಯೋಜನೆಯಲ್ಲಿ ಕೆಲಸ ಮಾಡಿದ ಹಿರಿಮೆಗೆ ಪಾತ್ರರಾಗಿದ್ದಾರೆ. 

ಜಿಲ್ಲೆಯ ಇಬ್ಬರು ವಿಜ್ಞಾನಿಗಳು ಮಹತ್ವದ ಈ ಯೋಜನೆಯಲ್ಲಿ ಕೆಲಸ ಮಾಡಿರುವುದು ಆ ಕುಟುಂಬಗಳಿಗಷ್ಟೇ ಅಲ್ಲ ಗ್ರಾಮದ ಜನರಲ್ಲಿ ಸಂತೋಷಕ್ಕೆ ಕಾರಣವಾಗಿದೆ. ಜಿಲ್ಲೆಗೂ ಹಿರಿಮೆಯನ್ನು ತಂದಿದೆ.

ಜಂಗಾರ್ಲಹಳ್ಳಿಯ ಚನ್ನಪ್ಪ (ಚಿನ್ನಪ್ಪಯ್ಯ) ಮತ್ತು ತಿಮ್ಮಕ್ಕ ಅವರ ಆರು ಮಂದಿ ಮಕ್ಕಳಲ್ಲಿ ಗುರ್ರಪ್ಪ ಕೊನೆಯವರು. 2013ರಲ್ಲಿ ನಡೆದ ಮಂಗಳಯಾನ ಯೋಜನೆಯಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು. ಅವರು ಆಗ ಕೆಲಸ ನಿರ್ವಹಿಸಿದ ತಂಡದ ಮುಖ್ಯಸ್ಥರಾಗಿದ್ದರು. ಈಗ ‘ಚಂದ್ರಯಾನ–3’ರಲ್ಲಿಯೂ ಕೆಲಸ ಮಾಡಿದ್ದಾರೆ. 

ADVERTISEMENT

ಜಂಗಾರ್ಲಹಳ್ಳಿ ಮತ್ತು ಗುಡಿಬಂಡೆಯ ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರ್ಣಗೊಳಿಸಿದವರು ಗುರ್ರಪ್ಪ. 1991ರಲ್ಲಿ ಇಸ್ರೊದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾರೆ. 

‘ನಮ್ಮ ಕುಟುಂಬಕ್ಕೆ ಅಷ್ಟೇ ಅಲ್ಲ ಗ್ರಾಮ ಮತ್ತು ಜಿಲ್ಲೆಗೂ ನಮ್ಮ ಚಿಕ್ಕಪ್ಪನ ಸಾಧನೆ ಹೆಮ್ಮೆ ಎನಿಸುತ್ತದೆ. ಅವರು ಇಂತಹ ಮಹತ್ವದ ಯೋಜನೆಗಳಲ್ಲಿ ಭಾಗಿಯಾಗುವುದು ಕುಟುಂಬಕ್ಕೂ ಖುಷಿ ತರುತ್ತಿದೆ’ ಎಂದು ಗುರ್ರಪ್ಪ ಅವರ ಅಣ್ಣನ ಮಗ ಸತೀಶ್ ‘ಪ್ರಜಾವಾಣಿ’ಗೆ ತಿಳಿಸಿದರು. 

ಗೌರಿಬಿದನೂರಿನ ಇಬ್ಬರು ವಿಜ್ಞಾನಿಗಳು ಸಹ ಈ ಯೋಜನೆಯಲ್ಲಿ ಕೆಲಸ ಮಾಡಿರುವ ಹಿರಿಮೆ ಹೊಂದಿದ್ದಾರೆ. ಗೌರಿಬಿದನೂರು ತಾಲ್ಲೂಕಿನ ಡಿ.ಪಾಳ್ಯದ ಆರ್.ಶ್ರೀನಾಥ್, ಚಂದ್ರಯಾನದ ಮಾಹಿತಿ ಮತ್ತು ಅಂಕಿ ಅಂಶಗಳನ್ನು ಕಲೆ ಹಾಕಿ ವಿಶ್ಲೇಷಣೆಗೆ ಒಳಪಡಿಸುವ ತಂಡದಲ್ಲಿ ಕೆಲಸ ಮಾಡುತ್ತಿದ್ದಾರೆ.

ರೈತ ಕುಟುಂಬದ ಶ್ರೀನಾಥ್, ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಗ್ರಾಮದ ಸರ್ಕಾರಿ ಶಾಲೆ ಮತ್ತು ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ. ನಂತರ ನ್ಯಾಷನಲ್‌ನ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದರು. ನಂತರ ಇಸ್ರೊ ಸೇರಿದರು.  

ಗೌರಿಬಿದನೂರು ತಾಲ್ಲೂಕಿನ ನ್ಯಾಮಗೊಂಡ್ಲು ಗ್ರಾಮದ ಗಿರೀಶ್ ಸಹ ಮಧ್ಯಮ ವರ್ಗದ ಕುಟುಂಬದವರು. ಗೌರಿಬಿದನೂರಿನ ಆಚಾರ್ಯ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದರು. ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ನ್ಯಾಷನಲ್ ಕಾಲೇಜಿನಲ್ಲಿ ಪೂರೈಸಿದರು. ನಂತರ ಅವರು ಸಹ ಇಸ್ರೊದಲ್ಲಿ ಕೆಲಸಕ್ಕೆ ಸೇರಿದರು. ‘ಚಂದ್ರಯಾನ–3’ ಯೋಜನೆಯಲ್ಲಿ ಕೆಲಸ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿಜ್ಞಾನಿಗಳಾದ ಶ್ರೀನಾಥ್ ಮತ್ತು ಗಿರೀಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.