ಗೌರಿಬಿದನೂರು: ತಾಲ್ಲೂಕು ಸತತ ಬರಗಾಲಕ್ಕೆ ತುತ್ತಾಗಿ ಬರದ ನಾಡು ಎಂಬ ಹಣೆಪಟ್ಟಿ ಪಡೆದು ದಶಕಗಳೇ ಉರುಳಿವೆ. ನದಿ, ಕೆರೆ ಸೇರಿದಂತೆ ಜಲ ಮೂಲಗಳನ್ನು ಉಳಿಸುವ ಕಾರ್ಯಕ್ಕೆ ಸಂಬಂಧಿಸಿದ ಇಲಾಖೆಗಳು ಮುಂದಾಗುತ್ತಿಲ್ಲ.
ಬರ ಬಂದಾಗ ಮಾತ್ರ ತಾತ್ಕಾಲಿಕವಾಗಿ ತೇಪೆ ಹಚ್ಚುವ ಕೆಲಸಗಳಲ್ಲಿ ತೊಡಗುತ್ತಾರೆ. ತಾಲ್ಲೂಕಿನ ಜಲಸಂಗ್ರಹಾಗಾರಗಳು ಎನಿಸಿರುವ ಕೆರೆಗಳನ್ನು ದುರಸ್ಥಿಗೊಳಿಸಿ, ಸುಸ್ಥಿತಿಯಲ್ಲಿಟ್ಟು ಅವುಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಯೋಜನೆಗಳು ಗೌರಿಬಿದನೂರು ತಾಲ್ಲೂಕಿನಲ್ಲಿ ನಗಣ್ಯ ಎನಿಸಿದೆ.
ಜನರಿಗೆ ಕೆರೆಗಳ ಬಗ್ಗೆ ಕಾಳಜಿಗಿಂತ ಕಳವಳವೇ ಹೆಚ್ಚಾಗಿದೆ. ನೀರಿಲ್ಲದಿದ್ದರೆ ಜೀವನವು ಇಲ್ಲ. ಜೀವವು ಇಲ್ಲ ಎನ್ನುವುದು ತಾಲ್ಲೂಕು ಆಡಳಿತಕ್ಕೆ ಮತ್ತು ನೀರಾವರಿ ಇಲಾಖೆಗೆ ಮನವರಿಕೆಯಾಗಿಲ್ಲ ಎನ್ನುವುದು ಪ್ರಜ್ಞಾವಂತ ನಾಗರಿಕರ ಆಕ್ರೋಶ.
ತಾಲ್ಲೂಕಿನ ಕೆರೆಗಳ ಸ್ಥಿತಿಗತಿಗಳನ್ನು ಗಮನಿಸಿದರೆ ಈ ಆಕ್ರೋಶಕ್ಕೆ ಕಾರಣವೂ ಅರ್ಥವಾಗುತ್ತದೆ.
ತಾಲ್ಲೂಕಿನಲ್ಲಿ 2021-22 ರಲ್ಲಿ 1,500 ಮಿ ಮಿ ಮಳೆ ಸುರಿದಿದೆ. ಉತ್ತರ ಪಿನಾಕಿನಿ ನದಿ 186 ದಿನ ಹರಿದಿದೆ. ತಾಲ್ಲೂಕಿನಲ್ಲಿ 40 ಟಿಎಂಸಿ ಅಡಿ ನೀರು ಬಂದಿದ್ದರೆ, ಅದರಲ್ಲಿ 30 ಟಿಎಂಸಿ ಅಡಿ ನೀರು ವ್ಯರ್ಥವಾಗಿ ಹರಿದು ಹೋಗಿದೆ.
ತಾಲ್ಲೂಕಿನಲ್ಲಿ ಒಟ್ಟು 170ಕ್ಕೂ ಹೆಚ್ಚು ಕೆರೆಗಳಿವೆ. ಅದರಲ್ಲಿ ಸಣ್ಣ ಇಲಾಖೆಗೆ ಸೇರಿದ 76 ಕೆರೆಗಳಿವೆ. ಈ ಎಲ್ಲಾ ಕೆರೆಗಳ ಸರ್ವೆ ಕಾರ್ಯ ಮುಗಿದಿದೆ. ಕೆಲವು ಕೆರೆಗಳ ಒತ್ತುವರಿ ತೆರವುಗೊಳಿಸುವ ಕಾರ್ಯ ಬಾಕಿ ಉಳಿದಿದೆ. ಒತ್ತುವರಿ ಮಾಡಿಕೊಂಡವರಿಗೆ 2024ರಲ್ಲಿ ನೋಟಿಸ್ ಸಹ ಜಾರಿ ಮಾಡಲಾಗಿದೆ. ಚೋಳಶೆಟ್ಟಿಹಳ್ಳಿ ಮತ್ತು ಗುಂಡ್ಲಹಳ್ಳಿ ಕೆರೆಗಳು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಗೆ ಸೇರಿವೆ.
ಇನ್ನು ಕೆಲವು ಕೆರೆಗಳು ಕರಾಬ್ ಆಗಿದ್ದು ವಿಸ್ತೀರ್ಣ ನಮೂದಾಗಿಲ್ಲ. ನಗರದ ಹೃದಯ ಭಾಗದಲ್ಲಿರುವ ಕರೇಕಲ್ಲಹಳ್ಳಿ ಕೆರೆಯ ಅಂಗಳದಲ್ಲಿ ಹಲವು ಮನೆಗಳು ನಿರ್ಮಾಣವಾಗಿವೆ. ಲೋಕೋಪಯೋಗಿ ಇಲಾಖೆಯು ಕೆರೆ ಭಾಗದಲ್ಲಿ ರಸ್ತೆ ಸಹ ನಿರ್ಮಿಸಿದೆ. ಈ ಕೆರೆ ಮಾಲೀಕತ್ವ ತಮ್ಮದೆಂದು ಖಾಸಗಿ ವ್ಯಕ್ತಿಗಳು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.
ನಗರಭಾಗದ ಮಾದನಹಳ್ಳಿ ಮತ್ತು ಹಿರೇಬಿದನೂರು ಸೇರಿದಂತೆ ಕೆಲವು ಕೆರೆ ಅಭಿವೃದ್ಧಿ ಹೆಸರಲ್ಲಿ ಮಾಯವಾಗಿವೆ. ಜಲಜೀವನ್ ಮಿಷನ್, ಕೆರೆ ತುಂಬಿಸುವ ಯೋಜನೆ, ಹನಿ ನೀರಾವರಿ, ಅಂತರ್ಜಲ ರಕ್ಷಣೆ, ಸಂವರ್ಧನೆ, ಕೆರೆ ಪುನಶ್ಚೇತನ ಎಂಬ ಹೆಸರಿನ ಹಲವು ಯೋಜನೆಗಳು ಕಾರ್ಯಗತವಾಗಿದ್ದರೂ ಯೋಜನೆಗಳು ಸಾಫಲ್ಯ ಕಂಡಿಲ್ಲ.
ಪೂರ್ವಜರು ಕುಡಿಯುವ ನೀರಿಗಾಗಿ ಪ್ರತಿ ಗ್ರಾಮದಲ್ಲೂ ಕೆರೆಗಳನ್ನು ನಿರ್ಮಿಸಿದ್ದರು. ಆದರೆ ಅದರಲ್ಲಿ ಕ್ರಮೇಣ ಹೂಳು ತುಂಬಿವೆ. ನೀರಿನ ಸಂಗ್ರಹಣಾ ಸಾಮರ್ಥ್ಯ ಕಳೆದುಕೊಂಡಿವೆ. ಕೆರೆಗಳ ಹೂಳು ತೆಗೆದು ಸುಸ್ಥಿತಿಯಲ್ಲಿ ಇರಿಸಿದರೆ ಮಾತ್ರ ನೀರಿನ ಸಂಗ್ರಹಣಾ ಸಾಮರ್ಥ್ಯ ಹೆಚ್ಚುತ್ತದೆ.
ಕೆರೆಗಳು ಇಟ್ಟಿಗೆ ಗೂಡು ಹಾಕುವವರಿಗೆ ಮಣ್ಣು ತೆಗೆದುಕೊಂಡು ಹೋಗಲು ಮಾತ್ರ ಸೀಮಿತವಾಗಿವೆ. ಕೆರೆಗಳಿಗೆ ಸಂಪರ್ಕ ಕಲ್ಪಿಸುವ ಬಹುತೇಕ ಕಾಲುವೆಗಳು ಮುಚ್ಚಿವೆ. ಮಳೆ ಬಂದಾಗ ಕೆರೆಗಳಲ್ಲಿ ಪೂರ್ಣ ಪ್ರಮಾಣದ ನೀರು ಶೇಖರಣೆಯಾಗದೆ ಪೋಲಾಗುತ್ತಿವೆ. ತೂಬುಗಳು ಸಹ ಸುಸ್ಥಿತಿಯಲ್ಲಿಲ್ಲ. ಬಹುತೇಕ ಕೆರೆಗಳಲ್ಲಿ ಜಾಲಿ ಮತ್ತು ಸೀಮೆ ಜಾಲಿ ಗಿಡಗಳು ಬೆಳೆದಿವೆ. ಮತ್ತೊಂದೆಡೆ ಕೆರೆ ಅಚ್ಚು ಕಟ್ಟು ಭಾಗದ ರೈತರು ಅವ್ಯಾಹತವಾಗಿ ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಸಹ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಬಿಸಿಲಿನ ಪ್ರಖರತೆಗೆ ಕೆರೆಗಳು ಸಂಪೂರ್ಣ ಒಣಗಿವೆ. ಜನ-ಜಾನುವಾರುಗಳ ನೀರಿನ ದಾಹ ತೀರಿಸದ ಪರಿಸ್ಥಿತಿಯಲ್ಲಿ ತಾಲ್ಲೂಕಿನ ಕೆರೆಗಳಿವೆ. ಹೀಗೆ ಗೌರಿಬಿದನೂರು ತಾಲ್ಲೂಕಿನಲ್ಲಿ ಕೆರೆಗಳ ಅಧ್ವಾನ ಬಹಳಷ್ಟಿದೆ.
ಒತ್ತಡ ಹೇರದ ಜನರು
ಕೆರೆ ಒತ್ತುವರಿ ತೆರವು ಗೊಳಿಸಬೇಕು. ಹೂಳು ತೆಗೆಸಬೇಕು ರಾಜ ಕಾಲುವೆ ಮತ್ತು ಪೋಷಕ ಕಾಲುವೆಗಳ ಒತ್ತುವರಿ ತೆರವುಗೊಳಿಸಿ ನೀರು ಸರಾಗವಾಗಿ ಹರಿಯಲು ಅನುವು ಮಾಡಿಕೊಡಬೇಕು. ಮೊದಲು ಜನರು ಸರ್ಕಾರದ ಮೇಲೆ ಒತ್ತಡ ಹೇರಿ ಕೆರೆಗಳ ಅಭಿವೃದ್ಧಿ ಮಾಡಿಸಿಕೊಳ್ಳುತ್ತಿದ್ದರು. ಆದರೆ ಈಗ ಒತ್ತಡ ಹೇರಿ ಟ್ಯಾಂಕ್‌ಗಳಲ್ಲಿ ನೀರನ್ನು ತರಿಸಿಕೊಳ್ಳುತ್ತಿದ್ದಾರೆ.
- ನಟರಾಜ್ ಜೆಡಿಎಸ್ ತಾಲ್ಲೂಕು ಕಾರ್ಯಾಧ್ಯಕ್ಷ ಗೌರಿಬಿದನೂರು
12 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯ
ತಾಲ್ಲೂಕಿನಲ್ಲಿರುವ ಕೆರೆಗಳಿಗೆ 12 ಟಿಎಂಸಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದೆ. ಇವುಗಳ ಹೂಳನ್ನು ಮೂರು ಅಡಿ ತೆಗೆದರೆ ಕೆರೆಗಳ ಸಾಮರ್ಥ್ಯ 24 ಟಿಎಂಸಿ ಅಡಿ ನೀರು ಸಂಗ್ರಹಣೆ ಆಗುತ್ತದೆ.
- ಪರಿಸರವಾದಿ ಚೌಡಪ್ಪ ಗೌರಿಬಿದನೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.